
ಬಿಗ್ಬಾಸ್ (Bigg Boss) ಮನೆ ಫಿನಾಲೆ ಹಂತಕ್ಕೆ ಬಂದಿದೆ. ಇನ್ನು 12 ದಿನಗಳನ್ನಷ್ಟೆ ಸದಸ್ಯರು ಬಿಗ್ಬಾಸ್ ಮನೆಯಲ್ಲಿ ಕಳೆಯಬಹುದಾಗಿದೆ. ಕಳೆದ ಕೆಲವು ವಾರಗಳಲ್ಲಿ ಬಿಗ್ಬಾಸ್ ಮನೆಯಲ್ಲಿ ಹೆಚ್ಚಿನ ಜಗಳುಗಳು ಆಗಿರಲಿಲ್ಲ. ವಿನಯ್ ಹಾಗೂ ಸಂಗೀತಾ ಸಹ ಪರಸ್ಪರ ಸ್ನೇಹ-ಪ್ರೀತಿಯಿಂದಲೇ ಇದ್ದರು. ತನಿಷಾ ಸಹ ಮಾಮೂಲಿಗಿಂತಲೂ ಕಡಿಮೆ ಜಗಳ ಮಾಡಿದ್ದರು. ಇದೀಗ ಈ ಹಿಂದೆ ಎಲಿಮಿನೇಟ್ ಆಗಿದ್ದ ಸ್ಪರ್ಧಿಗಳು ಮನೆಗೆ ವಾಪಸ್ ಬಂದಿದ್ದು, ಅವರ ಎದುರೇ ಮನೆಯ ಸದಸ್ಯರು ಕಿತ್ತಾಡಿಕೊಂಡಿದ್ದಾರೆ.
ಮನೆ ಕಳೆದುಕೊಂಡಿದ್ದ ಐದು ಲಕ್ಷ ಹಣವನ್ನು ಮರಳಿ ಗಳಿಸಲು ಬಿಗ್ಬಾಸ್ ಅವಕಾಶವೊಂದನ್ನು ನೀಡಿದರು. ಕ್ಯಾಪ್ಟನ್ ಆಗಿದ್ದ ರಕ್ಷಕ್ ಆಡಿದ್ದ ಟಾಸ್ಕ್ ಅನ್ನು ಆಡಿ ಅವರು ಆಗ ತೆಗೆದುಕೊಂಡಿದ್ದ ಅಂಕಕ್ಕಿಂತಲೂ ಕಡಿಮೆ ಸಮಯದಲ್ಲಿ ಟಾಸ್ಕ್ ಮುಗಿಸಿದರೆ ಒಂದು ಲಕ್ಷ ಗೆಲ್ಲಬಹುದು ಎಂದರು. ಆಗ ಮನೆಯಲ್ಲಿ ಟೆನ್ಷನ್ ಶುರುವಾಯ್ತು. ಯಾರು ಟಾಸ್ಕ್ ಆಡಬೇಕು ಎಂಬ ಚರ್ಚೆ ಪ್ರಾರಂಭವಾಯ್ತು.
ತನಿಷಾ ತನಗೆ ಈ ಟಾಸ್ಕ್ ನೀಡಲೇ ಬೇಕು ಎಂದು ಸಂಗೀತಾ ಬಳಿ ಪಟ್ಟು ಹಿಡಿದರು. ಕ್ಯಾಪ್ಟನ್ ಆಗಿರುವ ಸಂಗೀತಾ, ಅವಕಾಶದ ಪ್ರಶ್ನೆ ಇಲ್ಲಿ ಬೇಡ, ಯಾರು ಟಾಸ್ಕ್ ಗೆದ್ದು ಹಣ ತೆಗೆದುಕೊಂಡು ಬರಬಲ್ಲರು ಅವರನ್ನು ಆರಿಸೋಣ ಎಂದರು. ತನಿಷಾ ಹಠ ಮಾಡಿದ್ದರಿಂದ ವೋಟಿಂಗ್ಗೆ ಹೋಗಬೇಕಾಯ್ತು. ಎರಡು ಮತ ವರ್ತೂರು ಸಂತೋಷ್ಗೆ ಬಿತ್ತು, ಸಂಗೀತಾರ ಮತವೂ ಸೇರಿ ಎರಡು ಮತ ವಿನಯ್ಗೆ ಸಿಕ್ಕಿತು. ಆ ಇಬ್ಬರಲ್ಲಿ ಇನ್ನೊಮ್ಮೆ ಮತದಾನ ಮಾಡಬೇಕಿತ್ತು. ಆಗ ವಿನಯ್, ನೀವೇ ಆಡಿ ಎಂದು ವರ್ತೂರಿಗೆ ಹೇಳಿದರು. ಸಂಗೀತಾ ಹಾಗೂ ಇನ್ನಿತರರಿಗೆ ಇಷ್ಟವಿಲ್ಲದಿದ್ದರೂ ಆಡಿದ ವರ್ತೂರು ನಿಗದಿತ ಸಮಯದಲ್ಲಿ ಟಾಸ್ಕ್ ಮುಗಿಸಲಿಲ್ಲ, ಒಂದು ಲಕ್ಷ ಹಣ ಕೈತಪ್ಪಿತು.
ಇದನ್ನೂ ಓದಿ:ಬಿಗ್ಬಾಸ್ ತಮಿಳು ವಿನ್ನರ್ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್ಗೆ ಸಿಕ್ಕಿದ್ದೆಷ್ಟು?
ಟಾಸ್ಕ್ನ ಬಳಿಕ ಮಾತನಾಡುತ್ತಾ, ಸರಿಯಾದ ಆಟಗಾರರನ್ನು ಕಳಿಸಬೇಕಿತ್ತು, ಅದನ್ನೇ ನಾನು ಹೇಳಿದ್ದೆ ಎಂದು ಸಂಗೀತಾ ಹೇಳಿದರು. ಇದಕ್ಕೆ ಕೋಪಗೊಂಡ ತನಿಷಾ, ಸಂಗೀತಾ ಜೊತೆ ಜೋರು ಜಗಳ ಮಾಡಿ, ನೀನು ನಾಟಕ ಮಾಡಬೇಡ ಎಂದೆಲ್ಲ ನಾಟಕೀಯವಾಗಿ ಹೇಳಿದರು. ಅದಾದ ಬಳಿಕ ವರ್ತೂರು ಸಂತು ಬಂದು ಟಾಸ್ಕ್ ಆಡಲಿಲ್ಲವೆಂದರೆ ಆಡಿಲ್ಲ ಅನ್ನುತ್ತೀರಿ, ಈಗ ಆಡಿದ್ದೀನಿ ಏನೋ ಟಾಸ್ಕ್ ಗೆದ್ದಿಲ್ಲ. ಅಂದು ರಕ್ಷಕ್ ಟಾಸ್ಕ್ ಗೆದ್ದಾಗಲೂ ಸ್ನೇಹಿತ್ ಮುನ್ನಡೆಯಲ್ಲಿದ್ದ ಆದರೆ ಅವನು ಜೋಡಿಸಿದ್ದ ಚೆಂಡು ಬಿತ್ತು, ಇನ್ನೊಬ್ಬರನ್ನು ಅರ್ಹನಲ್ಲ ಎನ್ನುವ ಮುಂಚೆ ನೀವು ಎಷ್ಟು ಅರ್ಹರಿದ್ದೀರಿ ಎಂಬುದನ್ನು ಯೋಚಿಸಿ ಎಂದು ಜೋರು ದನಿಯಲ್ಲಿ ಅಂದು ಹೋದರು. ಆಗ ಸಣ್ಣದಾಗಿ ಸಂಗೀತಾ ಹಾಗೂ ವರ್ತೂರು ನಡುವೆ ಸಣ್ಣ ಕ್ಲ್ಯಾಶ್ ಆಯ್ತು.
ಅದರ ಬಳಿಕ ವಿನಯ್ ಏನನ್ನೋ ಮಾತನಾಡುತ್ತಾ ಪ್ರತಾಪ್ ಅನ್ನು ಇಡಿಯಟ್ ಎಂದರು. ಇದನ್ನು ಪ್ರತಾಪ್ ಪ್ರಶ್ನೆ ಮಾಡಿದರು. ಅದಕ್ಕೆ ವಿನಯ್ ತಮ್ಮ ಎಂದಿನ ಶೈಲಿನಲ್ಲಿ ಗಟ್ಟಿಯಾಗಿಯೇ ಪ್ರತಾಪ್ ವಿರುದ್ಧ ಮಾತನಾಡಿದರು. ನಾನು ಏನೋ ಅಂದಾಗಲು ‘ಅಣ್ಣ ನನಗೆ ಅಂದಿದ್ದಾ’ ಎಂದು ಬಂದು ಮೈಲೇಜ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಬೇಡ ಎಂದು ಎಚ್ಚರಿಕೆ ಕೊಟ್ಟರು. ಅದೇ ಸಮಯದಲ್ಲಿ ಪ್ರತಾಪ್ ಹಾಗೂ ತನಿಷಾ ನಡುವೆಯೂ ಜಗಳವಾಯ್ತು. ಒಟ್ಟಾರೆಯಾಗಿ ಬಂದ ಅತಿಥಿಗಳ ಮುಂದೆ ಸದಸ್ಯರು ಜೋರಾಗಿಯೇ ಜಗಳ ಮಾಡಿಕೊಂಡರು. ಇನ್ನೂ ನಾಲ್ಕು ಟಾಸ್ಕ್ಗಳು ಉಳಿದಿದ್ದು, ಅವುಗಳಲ್ಲಿ ಯಾರು ಯಾವುದು ಗೆಲ್ಲುತ್ತಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ