‘ಮಕ್ಕಳ ಥರ ಆಡಬಾರದು’; ಕ್ಯಾತೆ ತೆಗೆದು ಟಾರ್ಚರ್ ಕೊಡೋಕೆ ಬಂದ ರಕ್ಷಕ್ಗೆ ಪ್ರತಾಪ್ ಮಾತಿನ ಚಾಟಿ
ರಾತ್ರಿ ಎಲ್ಲರೂ ಮಲಗುವವರಿದ್ದರು. ಈ ವೇಳೆ ಪ್ರತಾಪ್ ಅವರ ಬಳಿ ಬಂದ ರಕ್ಷಕ್, ‘ನನ್ನ ಬೆಡ್ಶೀಟ್ ನೀಡಿ, ನನ್ನ ಬೆಡ್ಶೀಟ್ ನೀಡಿ’ ಎಂದು ಕಾಡಿಸೋಕೆ ಶುರು ಮಾಡಿದರು. ಇದಕ್ಕೆ ಡ್ರೋನ್ ಪ್ರತಾಪ್ ಉತ್ತರ ಕೊಟ್ಟಿದ್ದಾರೆ.

ಬುಲೆಟ್ ರಕ್ಷಕ್ ಅವರು ದೊಡ್ಮನೆಗೆ ಬಂದಿದ್ದರು. ಈ ಸೀಸನ್ನಲ್ಲಿ ಅವರು ಕೊನೆಯ ತನಕ ಇರಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಒಂದೇ ತಿಂಗಳಿಗೆ ಔಟ್ ಆದರು. ಈ ಬಗ್ಗೆ ಅವರಿಗೆ ಬೇಸರ ಇದೆ. ಈಗ ಬಿಗ್ ಬಾಸ್ ಮನೆಯಲ್ಲಿ ರೀಯೂನಿಯನ್ ಆಗಿದೆ. ಈ ವೇಳೆ ರಕ್ಷಕ್ (Rakshak) ಕೂಡ ದೊಡ್ಮನೆಗೆ ಆಗಮಿಸಿದ್ದರು. ಅವರು ಪ್ರತಾಪ್ಗೆ ಟಾರ್ಚರ್ ಕೊಡೋಕೆ ಹೋಗಿದ್ದಾರೆ. ಇದನ್ನು ಕೆಲವರು ಖಂಡಿಸಿದ್ದಾರೆ. ಪ್ರತಾಪ್ ಮಾತಲ್ಲೇ ಚಾಟಿ ಬೀಸಿದ್ದಾರೆ.
ಬೆಡ್ಶೀಟ್ ಪ್ರಸಂಗ
ವಿನಯ್ ಗೌಡ ಗ್ರೂಪ್ನಲ್ಲಿ ಗುರುತಿಸಿಕೊಂಡವರೆಲ್ಲ ಒಬ್ಬೊಬ್ಬರೇ ಔಟ್ ಆಗುತ್ತಾರೆ ಎನ್ನುವ ಆರೋಪವನ್ನು ಡ್ರೋನ್ ಪ್ರತಾಪ್ ಮಾಡಿದ್ದರು. ಇದು ಅನೇಕರಿಗೆ ನಿಜ ಎನಿಸಿದೆ. ಕೆಲ ವಾರಗಳ ಹಿಂದೆ ನಡೆದ ಘಟನೆ ಇದು. ವೀಕೆಂಡ್ ಎಪಿಸೋಡ್ ಸಂದರ್ಭದಲ್ಲಿ ಎಲ್ಲರಿಗೂ ಒಂದೊಂದು ಕಾರ್ಡ್ ನೀಡಬೇಕಿತ್ತು. ‘ತುಳಿದು ಮೇಲೆ ಬರೋದು ಹೇಗೆ’ ಎನ್ನುವ ಕಾರ್ಡ್ನ ವಿನಯ್ಗೆ ಪ್ರತಾಪ್ ನೀಡಿದರು. ‘ವಿನಯ್ ಜೊತೆ ಇದ್ದವರೆಲ್ಲ ಒಬ್ಬೊಬ್ಬರೇ ಎಲಿಮಿನೇಟ್ ಆದರು. ಎಲಿಮಿನೇಟ್ ಆದವರ ಬೆಡ್ಶೀಟ್ ವಿನಯ್ ಬೆಡ್ ಸೇರಿತು’ ಎಂದು ಹೇಳಿದ್ದರು ಪ್ರತಾಪ್.
ರಕ್ಷಕ್ ಪೋಸ್ಟ್
ಬಿಗ್ ಬಾಸ್ನಿಂದ ಒಂದು ತಿಂಗಳಿಗೆ ರಕ್ಷಕ್ ಎಲಿಮಿನೇಟ್ ಆದರು. ಅವರೂ ವಿನಯ್ ಗ್ರೂಪ್ನಲ್ಲಿ ಗುರುತಿಸಿಕೊಂಡಿದ್ದರು. ಪ್ರತಾಪ್ ಆರೋಪದ ಬಳಿಕ ರಕ್ಷಕ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ‘ಎಲ್ಲರಿಗೂ ನಮಸ್ಕಾರ. ತಂಡ ಕಟ್ಟೋಕೆ ಅಥವಾ ಯಾವುದೇ ಗುಂಪುಗಾರಿಕೆ ಮಾಡೋಕೆ ಬಿಗ್ ಬಾಸ್ ಮನೆ ಒಳಗೆ ನಾನು ಹೋಗಿಲ್ಲ. ಜನರ ವಿಶ್ವಾಸ ಮತ್ತು ಜನರ ಪ್ರೀತಿ ಗಳಿಸಲು ನಾನು ಅಲ್ಲಿಗೆ ಹೋಗಿದ್ದೆ. ನನ್ನ ಬೆಡ್ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ’ ಎಂದಿದ್ದರು ರಕ್ಷಕ್.
ಬಿಗ್ ಬಾಸ್ ಮನೆಯಲ್ಲಿ
ಬಿಗ್ ಬಾಸ್ ಮನೆಗೆ ಮರಳಿದ ಬಳಿಕ ರಕ್ಷಕ್ ಅವರು ಈ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ರಾತ್ರಿ ಎಲ್ಲರೂ ಮಲಗುವವರಿದ್ದರು. ಈ ವೇಳೆ ಪ್ರತಾಪ್ ಅವರ ಬಳಿ ಬಂದ ರಕ್ಷಕ್, ‘ನನ್ನ ಬೆಡ್ಶೀಟ್ ನೀಡಿ, ನನ್ನ ಬೆಡ್ಶೀಟ್ ನೀಡಿ’ ಎಂದು ಕಾಡಿಸೋಕೆ ಶುರು ಮಾಡಿದರು. ಆಗ ಪ್ರತಾಪ್ ಅವರು ಕೂಲ್ ಆಗಿಯೇ ಉತ್ತರಿಸೋಕೆ ಶುರು ಮಾಡಿದರು. ‘ಯಾವ ಬೆಡ್ಶೀಟ್’ ಎಂದು ಪ್ರತಾಪ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಡ್ರೋನ್ ಪ್ರತಾಪ್ ಬಿಗ್ಬಾಸ್ ಮನೆಯಲ್ಲಿ ಮಾತ್ರೆ ಸೇವಿಸುತ್ತಿದ್ದರೇ? ರಕ್ಷಕ್ ಹೇಳಿದ್ದು ಹೀಗೆ
‘ಹೇಳಿಕೆ ನೀಡೋ ಮೊದಲು ಯೋಚನೆ ಮಾಡಬೇಕು’ ಎಂದು ರಕ್ಷಕ್ ಆವಾಜ್ ಹಾಕೋಕೆ ಬಂದರು. ‘ಮಕ್ಕಳ ತರ ಆಡಬೇಡಿ. ಹೋಗಿ ಸುಮ್ಮನೆ ಮಲಗಿಕೊಳ್ಳಿ’ ಎಂದು ಪ್ರತಾಪ್ ಬುದ್ಧಿವಾದ ಹೇಳಿದರು. ಆ ಬಳಿಕ ರಕ್ಷಕ್ ಅಲ್ಲಿಂದ ತೆರಳಿದರು. ಮರುದಿನ ಸ್ನೇಹಿತ್ ಅವರು ಈ ವಿಚಾರವನ್ನು ಮೈಕಲ್ ಬಳಿ ಚರ್ಚಿಸಿದ್ದಾರೆ. ‘ರಕ್ಷಕ್ ಹೋಗಿ ಪ್ರತಾಪ್ಗೆ ಟಾರ್ಚರ್ ಮಾಡಿದ್ದು ನನಗೆ ಸರಿ ಎನಿಸಲಿಲ್ಲ’ ಎಂದಿದ್ದಾರೆ. ಇದನ್ನು ಮೈಕಲ್ ಕೂಡ ಒಪ್ಪಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 17ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:04 am, Thu, 18 January 24



