ಬಿಗ್ ಬಾಸ್ (Bigg Boss Kannada) ಎಂದರೆ ವೀಕ್ಷಕರಿಗೆ ಮನರಂಜನೆಯ ಹಬ್ಬ. ಆದರೆ ಸ್ಪರ್ಧಿಗಳಿಗೆ ಹೊರಲೋಕದ ಯಾವ ಮನರಂಜನೆಯೂ ಅಲ್ಲಿರುವುದಿಲ್ಲ. ಟಿವಿ, ಫೋನ್, ಇಂಟರ್ನೆಟ್ ಎಲ್ಲವೂ ಕಟ್. ಆದರೂ ನಿಯಂತ್ರಿತ ವಾತಾವರಣದಲ್ಲಿ ನೂರಕ್ಕೂ ಹೆಚ್ಚು ದಿನ ವಾಸಿಸುವ ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರತಿದಿನ ಒಂದೊಂದು ಹಾಡು ಕೇಳಿಸುತ್ತದೆ. ಪ್ರತಿ ಮುಂಜಾನೆ ಸ್ಪರ್ಧಿಗಳನ್ನು ನಿದ್ದೆಯಿಂದ ಎಚ್ಚರಗೊಳಿಸಲು ಯಾವುದಾದರೊಂದು ಸಿನಿಮಾದ ಹಾಡು ಹಾಕಲಾಗುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಇಂದು (ಆ.8) ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಕೊನೇ ದಿನ. ಇವತ್ತು ಮುಂಜಾನೆ ಈ ಸೀಸನ್ನ ಕೊನೇ ಹಾಡು ಪ್ಲೇ ಆಗಿದೆ. ಆ ಹಾಡು ಯಾವುದು ಎಂಬ ಕೌತುಕ ವೀಕ್ಷಕರಲ್ಲಿ ಮೂಡಿದೆ.
ಈ ಕುತೂಹಲ ಮೂಡಲು ಕಾರಣ ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಪೋಸ್ಟ್. ಆ.8ರ ಬೆಳಗ್ಗೆ ಒಂದು ಪೋಸ್ಟ್ ಹಂಚಿಕೊಂಡಿರುವ ವಾಹಿನಿಯು, ‘ಕೊನೆಯ ದಿನದ ವೇಕ್ಅಪ್ ಸಾಂಗ್ ಯಾವುದಾಗಿರಬಹುದು’ ಎಂದು ಪ್ರಶ್ನೆ ಕೇಳುವ ಮೂಲಕ ವೀಕ್ಷಕರ ತಲೆಗೆ ಹುಳಬಿಟ್ಟಿದೆ. ಅದಕ್ಕೆ ಜನರು ಹಲವು ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಮಂಜು ಪಾವಗಡ, ದಿವ್ಯಾ ಸುರೇಶ್ ಹಾಗೂ ಅರವಿಂದ್ ಕೆ.ಪಿ. ಈಗ ಫಿನಾಲೆ ಕಣದಲ್ಲಿ ಇದ್ದಾರೆ. ಒಬ್ಬರಿಗೆ ಮಾತ್ರ ಗೆಲುವು. ಇನ್ನಿಬ್ಬರು ಸಮಾಧಾನಪಟ್ಟುಕೊಳ್ಳಲೇಬೇಕು. ಹಾಗಾಗಿ ಈ ಸಂದರ್ಭಕ್ಕೆ ಅನುಗುಣವಾಗಿ, ‘ಏನಾಗಲಿ ಮುಂದೆ ಸಾಗಿ ನೀ.. ಬಯಸಿದ್ದೆಲ್ಲ ಸಿಗದು ಬಾಳಲಿ..’ ಸಾಂಗ್ ಪ್ಲೇ ಆಗಿರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ‘ನಾವು ಮನೇಗ್ ಹೋಗೋದಿಲ್ಲ..’ ಹಾಡು ಪ್ಲೇ ಆಗಿರಬಹುದು ಎಂದು ಕೆಲವರು ತಮಾಷೆ ಮಾಡಿದ್ದಾರೆ. ದರ್ಶನ್ ಅಭಿನಯದ ಯಾವುದಾದರೂ ಸಿನಿಮಾಗಳ ಹಾಡುನ್ನು ಪ್ಲೇ ಮಾಡಿ ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ. ಕಡೆಗೂ ಯಾವ ಸಾಂಗ್ ಮೊಳಗಿದೆ ಎಂಬುದಕ್ಕೆ ಇಂದು ಸಂಜೆಯ ಎಪಿಸೋಡ್ನಲ್ಲಿ ಉತ್ತರ ಸಿಗಬೇಕಿದೆ.
ಬಿಗ್ ಬಾಸ್ ಮನೆಯೊಳಗೆ ಎಲ್ಲ ಬಗೆಯ ಸ್ಪರ್ಧಿಗಳೂ ಎಂಟ್ರಿ ನೀಡಿರುತ್ತಾರೆ. ಸಿನಿಮಾ ಮತ್ತು ಕಿರುತೆರೆ ಲೋಕದ ಸೆಲೆಬ್ರಿಟಿಗಳು ಹೆಚ್ಚಿರುತ್ತಾರೆ. ಪ್ರತಿ ಮುಂಜಾನೆ ತಮ್ಮಿಷ್ಟದ ಹಾಡು ಅಥವಾ ತಾವೇ ನಟಿಸಿದ ಸಿನಿಮಾದ ಹಾಡು ಪ್ಲೇ ಆದರೆ ಅಂತಹ ಸ್ಪರ್ಧಿಗಳ ಸಂಭ್ರಮ ಹೇಳತೀರದು. ಈ ಸೀಸನ್ನಲ್ಲಿ ಒಂದು ದಿನವಾದರೂ ತಮ್ಮ ಹಾಡು ಪ್ಲೇ ಮಾಡಿ ಎಂದು ಬಿಗ್ ಬಾಸ್ ಬಳಿ ಶಮಂತ್ ಬ್ರೋ ಗೌಡ ಮನವಿ ಮಾಡಿಕೊಂಡಿದ್ದರು. ಅದನ್ನು ಬಿಗ್ ಬಾಸ್ ಈಡೇರಿಸಿದ್ದರು ಕೂಡ.
ಇದನ್ನೂ ಓದಿ:
ಬಿಗ್ ಬಾಸ್ ಮನೆಯಿಂದ ಹೊರಗಿದ್ದಾಗ ಮಂಜು ಪಾವಗಡಗೆ ಬಂದಿತ್ತು ಒಂದು ವಿಚಿತ್ರ ಕರೆ
ಬಿಗ್ ಬಾಸ್ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್ ಕೆಪಿ