ಕಿಚ್ಚನ ಎದುರೇ ರಜತ್ಗೆ ಸವಾಲು ಹಾಕಿದ ಗಿಲ್ಲಿ, ಭೇಷ್ ಎಂದ ಅಶ್ವಿನಿ
Bigg Boss Kannada 12: ರಜತ್ ವಿರುದ್ಧವಂತೂ ಬಿಗ್ಬಾಸ್ ಮನೆ ಒಂದಾದಂತಿದೆ. ರಜತ್, ಗಿಲ್ಲಿಯ ಜನಪ್ರಿಯತೆ ಬಗ್ಗೆ ಅರಿವಿದ್ದ ಅವರು, ಗಿಲ್ಲಿ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು, ಆದರೆ ಕಳೆದ ನಾಮಿನೇಷನ್ನಲ್ಲಿ ರಜತ್ ಆಡಿದ ಒಂದೇ ಒಂದು ಮಾತಿನಿಂದ ಗಿಲ್ಲಿ, ರಜತ್ಗೆ ಎದುರಾಳಿಯೇ ಆಗಿಬಿಟ್ಟಿದ್ದಾರೆ. ಇದೀಗ ಸುದೀಪ್ ಎದುರೇ, ರಜತ್ಗೆ ಸವಾಲು ಹಾಕಿದ್ದಾರೆ ಗಿಲ್ಲಿ.

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಂದಿರುವ ರಜತ್ ಮತ್ತು ಚೈತ್ರಾ ಅವರುಗಳ ವಿರುದ್ಧ ಇಡೀ ಮನೆಯೇ ಒಂದಾದಂತಿದೆ. ಅದರಲ್ಲೂ ರಜತ್ ವಿರುದ್ಧವಂತೂ ಇಡೀ ಮನೆ ಒಂದಾಗಿದೆ. ರಜತ್, ಮನೆಯ ಕೆಲ ಸ್ಪರ್ಧಿಗಳ ಮೇಲೆ ತಮ್ಮ ಎಂದಿನ ಆಕ್ರಮಣಕಾರಿ ವರ್ತನೆ ತೋರುತ್ತಾ ಆಟ ಆಡುತ್ತಿದ್ದಾರೆ. ಆದರೆ ಗಿಲ್ಲಿಯ ಜನಪ್ರಿಯತೆ ಬಗ್ಗೆ ಅರಿವಿದ್ದ ಅವರು, ಗಿಲ್ಲಿ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು, ಆದರೆ ಕಳೆದ ನಾಮಿನೇಷನ್ನಲ್ಲಿ ರಜತ್ ಆಡಿದ ಒಂದೇ ಒಂದು ಮಾತಿನಿಂದ ಗಿಲ್ಲಿ, ರಜತ್ಗೆ ಎದುರಾಳಿಯೇ ಆಗಿಬಿಟ್ಟಿದ್ದಾರೆ.
ರಜತ್ ಅವರು ಈಗಾಗಲೇ ಮನೆಯ ಕೆಲ ಸ್ಪರ್ಧಿಗಳ ವಿರೋಧ ಕಟ್ಟಿಕೊಂಡಿದ್ದಾರೆ. ರಜತ್ ಅವರ ಆಕ್ರಮಣಕಾರಿ ಮಾತಿನ ಶೈಲಿ, ಡಾಮಿನೇಟ್ ಮಾಡುವ ವ್ಯಕ್ತಿತ್ವ ಹಲವರಿಗೆ ಇಷ್ಟ ಆಗುತ್ತಿಲ್ಲ. ವಿರೋಧಿಗಳೇ ಹೆಚ್ಚಾಗಿರುವ ಕಾರಣ ರಜತ್, ಗಿಲ್ಲಿಯನ್ನು ಹತ್ತಿರ ಇರಿಸಿಕೊಂಡಿದ್ದರು. ಆದರೆ ಕಳೆದ ನಾಮಿನೇಷನ್ ಬಳಿಕ ಗಿಲ್ಲಿಯೇ, ರಜತ್ಗೆ ಎದುರಾಳಿ ಆಗಿಬಿಟ್ಟಿದ್ದಾರೆ. ಭಾನುವಾರದ ಎಪಿಸೋಡ್ನಲ್ಲಂತೂ ಗಿಲ್ಲಿ, ನೇರವಾಗಿ ರಜತ್ಗೆ ಸವಾಲನ್ನು ಎಸೆದಿದ್ದಾರೆ.
ಭಾನುವಾಸದ ಎಪಿಸೋಡ್ನಲ್ಲಿ ಸುದೀಪ್ ಅವರು ಆಟವೊಂದನ್ನು ಆಡಿಸಿದರು. ಮನೆಯಲ್ಲಿ ಯಾರ ಪಾಪದ ಕೊಡ ತುಂಬಿದೆ ಎಂದು ಸುದೀಪ್ ಪ್ರಶ್ನೆ ಮಾಡಿದರು. ಸ್ಪರ್ಧಿಗಳಿಗೆ ಯಾರ ಪಾಪದ ಕೊಡ ತುಂಬಿದೆ ಎನಿಸುತ್ತದೆಯೋ ಅವರ ಮುಂದಿರುವ ಖಾಲಿ ಕೊಳದೊಳಗೆ ಕಪ್ಪು ನೀರು ಸುರಿಯಬೇಕಿತ್ತು. ಅಶ್ವಿನಿ, ಸ್ಪಂದನಾ, ಕಾವ್ಯಾ, ಮಾಳು, ಕೊನೆಗೆ ಗಿಲ್ಲಿ ಅವರುಗಳು ಸಹ ರಜತ್ ಅವರ ಪಾಪದ ಕೊಳ ತುಂಬಿದೆ ಎಂದು ಅವರ ಕೊಳಕ್ಕೆ ನೀರು ಸುರಿದರು.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಈ ಬಗ್ಗೆ ಮಾತನಾಡಿದ ರಜತ್, ‘ಗಿಲ್ಲಿ ನನಗೆ ಹಾಕಿದ್ದು ಬೇಜಾರಾಯ್ತು, ಕೊಟ್ಟ ಕಾರಣವೂ ಬೇಜಾರು ಎನಿಸಿತು’ ಎಂದರು. ಆದರೆ ಗಿಲ್ಲಿ, ‘ನನ್ನ ಎದುರೇ ರಜತ್ ಅವರು ನನ್ನನ್ನು, ಮನೆಯವರನ್ನು ದಡ್ಡರು ಎಂದು ಕರೆದಿದ್ದಾರೆ’ ಎಂದರು. ಬಳಿಕ ರಜತ್, ‘ನನಗೆ ಯಾರು ಈ ಕಪ್ಪು ನೀರು ಹಾಕಿದ್ದಾರೊ ಅವರನ್ನೆಲ್ಲ ಮನೆಗೆ ಕಳಿಸಿಯೇ ನಾನು ಮನೆಯಿಂದ ಹೊರಗೆ ಹೋಗುವುದು ಎಂದು ಸುದೀಪ್ ಅವರ ಎದುರು ಚಾಲೆಂಜ್ ಮಾಡಿದರು ರಜತ್. ಕೂಡಲೇ ಗಿಲ್ಲಿ ಸಹ, ‘ನಾನು ರಜತ್ ಅವರನ್ನು ಮನೆಗೆ ಕಳಿಸಿದ ಮೇಲೆಯೇ ಈ ಮನೆಯಿಂದ ಹೊರಗೆ ಹೋಗುವುದು’ ಎಂದು ಮರು ಸವಾಲು ಹಾಕಿದರು. ಗಿಲ್ಲಿ ಸವಾಲು ಹಾಕಿದ್ದು ನೋಡಿ ಸ್ವತಃ ಅಶ್ವಿನಿ ಚಪ್ಪಾಳೆ ತಟ್ಟಿದರು.
ಆ ನಂತರವೂ ಸಹ ಗಿಲ್ಲಿ ಮತ್ತು ರಜತ್ ಅವರುಗಳ ನಡುವೆ ಚರ್ಚೆ ನಡೆಯುತ್ತಲೇ ಇತ್ತು. ‘ಮನೆಯವರಿಗೆ ಟಾಸ್ಕ್ ಅರ್ಥವಾಗಲ್ಲ ಎಂದು ನಾನು ಹೇಳಿದಾಗ ಗಿಲ್ಲಿಯನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ, ಏಕೆಂದರೆ ಗಿಲ್ಲಿಗೆ ಟಾಸ್ಕ್ ಆಡಲು ಬರುವುದೇ ಇಲ್ಲ’ ಎಂದು ರಜತ್ ಹೇಳಿದರು. ಅದಕ್ಕೆ ಗಿಲ್ಲಿ, ‘ಆಡಿದ ಹತ್ತರಲ್ಲಿ ಎಂಟು ಟಾಸ್ಕ್ಗಳಲ್ಲಿ ನಾನು ಗೆದ್ದಿದ್ದೇನೆ, ರಜತ್, ಆಡಿದ ಮೊದಲ ಟಾಸ್ಕ್ನಲ್ಲಿಯೇ ಒಂದೂ ಸಹ ಬಾಲನ್ನು ಹಾಕಲು ಆಗದೆ ಹೊರಗೆ ಹೋಗಿ ಕುಳಿತುಕೊಂಡ ಎಂದು ಕಾಲೆಳೆದರು. ಒಟ್ಟಾರೆ, ಸುದೀಪ್ ಎದುರೇ ಗಿಲ್ಲಿ, ರಜತ್ಗೆ ಸವಾಲು ಎಸೆದಿದ್ದು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:59 pm, Sun, 14 December 25




