
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಹಲವಾರು ಗಲಾಟೆಗಳು, ಬೈಗುಳಗಳು, ಸಹಿಸಲಾರದ ಏನೇನೋ ನಡೆದಿದ್ದವು. ಅದರಲ್ಲೂ ತನ್ನನ್ನು ಮಹಾಕವಿ ಎಂದು ಕರೆದುಕೊಳ್ಳುವ ಮಂಜನಂತೂ ಬಿಗ್ಬಾಸ್ ಮನೆಯನ್ನು ತನ್ನ ಆಸ್ತಾನ ಎಂದುಕೊಂಡು ಸಿಕ್ಕ ಸಿಕ್ಕವರ ಮೇಲೆಲ್ಲ ಅಬ್ಬರಿಸಿದ್ದ. ಕೀಳು ಪದಗಳ ಬಳಕೆ ಮಾಡಿದ್ದ. ಎಪಿಸೋಡ್ ಪ್ರಸಾರ ಆದಾಗ ಮಂಜ ಆಡಿದ್ದ ಮಾತುಗಳು ಮ್ಯೂಟ್ ಆಗಿದ್ದವು. ಅವರು ಮಾಡಿದ್ದ ಕೆಲವು ಕೃತ್ಯಗಳನ್ನು ತೋರಿಸಿರಲಿಲ್ಲ ಸಹ. ಆದರೆ ವೀಕೆಂಡ್ ಎಪಿಸೋಡಿನಲ್ಲಿ ಹಲವು ವಿಷಯಗಳು ಹೊರಬಂದವು.
ಮೊದಲಿಗೆ ಸುದೀಪ್, ಆಸಿಯಾರ ಉಸ್ತುವಾರಿ, ಗಗನ್ ಮತ್ತು ತಾಂಡವ್ ಅವರು ಆಟದಲ್ಲಿ ಆಡಿದ ಮೋಸದ ಬಗ್ಗೆ ಟೀಕೆ ಮಾಡಿದರು. ಬಳಿಕ ವಿಷಯ ಕಿರಣ್ ಬಳಿ ಬಂತು. ಮಂಜ, ಕಿರಣ್ ಕಣ್ಣಿಗೆ ಖಾರ ಹಾಕಿದ ವಿಡಿಯೋ ಪ್ರದರ್ಶಿಸಿದರು. ವಿಡಿಯೋನಲ್ಲಿ ಮಂಜ, ಕಿರಣ್ ಕಣ್ಣನ್ನೇ ಗುರಿ ಮಾಡಿಕೊಂಡು ಖಾರದ ಸಾಂಬಾರು ಹಾಕುತ್ತಿದ್ದ. ನಂತರ ಬಾಯಿಗೆ ಸುರಿಯಲು ಆರಂಭಿಸಿದ. ಅಸಲಿಗೆ ಅದನ್ನು ಎಪಿಸೋಡಿನಲ್ಲೂ ತೋರಿಸಲಾಗಿತ್ತು. ಆದರೆ ಮಂಜ ತನ್ನ ಕ್ರೂರತೆ ತೋರಿಸಿದ್ದು ಆ ಘಟನೆಯ ಬಳಿಕ.
ಕಣ್ಣಿಗೆ ಖಾರ ಹೋಗಿ ಅಳುತ್ತಿದ್ದ ಕಿರಣ್ ಅನ್ನು ಕೆಲವರು ಬಾತ್ರೂಮಿಗೆ ಕರೆದುಕೊಂಡು ಹೋಗಿ ಕಣ್ಣು ತೊಳೆಸುವ ಪ್ರಯತ್ನ ಮಾಡಿದಾಗ ಅದಕ್ಕೆ ಮಂಜ ಅಡ್ಡ ಹಾಕಿದನಂತೆ. ಅಲ್ಲಿಯೂ ಸಹ ಅವನ ಕಣ್ಣು ತೊಳೆಯಬಾರದು ಎಂದು ಗಲಾಟೆ ಆರಂಭಿಸಿದನಂತೆ. ಅದಾದ ಬಳಿಕ ವೈದ್ಯರು ಬಂದು ಕಿರಣ್ ಕಣ್ಣುಗಳನ್ನು ಪರೀಕ್ಷೆ ಮಾಡಿ ಕಣ್ಣಿಗೆ ಔಷಧ ಕೊಟ್ಟಿದ್ದಾರೆ. ಆ ಔಷಧಿಯನ್ನು ಸಹ ಮಂಜ ಕಿತ್ತುಕೊಂಡು ಎಸೆದನಂತೆ. ಈ ವಿಷಯವನ್ನು ಪ್ರಶಾಂತ್, ಸುದೀಪ್ ಮುಂದೆ ಹೇಳಿದರು.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಅದಾದ ಬಳಿಕ ಸುದೀಪ್ ಅವರು, ‘ಏನಿದು, ಇದೇನು ಟಾಸ್ಕ್ನಲ್ಲಿ ಮಾಡಿದ್ದ ಅಥವಾ ಬೇಕೆಂದು ಮಾಡಿದ್ದ?’ ಎಂದು ಕೇಳಿದರು. ಅದಕ್ಕೆ ಅದೇ ರೌಡಿತನದಿಂದ ಉತ್ತರಿಸಿದ ಮಂಜ, ‘ಹೌದು, ನನಗೆ ಮೊದಲಿನಿಂದಲೂ ಕಿರಣ್ ಶಾಸ್ತ್ರಿ ಮೇಲೆ ದ್ವೇಷ ಇದೆ. ಹಾಗಾಗಿ ನಾನು ಅವನಿಗೆ ಮಾಡಬೇಕು ಎಂದುಕೊಂಡು ಮೊದಲೇ ನಿಶ್ಚಯಿಸಿಯೇ ಹೀಗೆ ಮಾಡಿದೆ ಎಂದರು. ಅಲ್ಲಿಗೆ ತನ್ನ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಕಿರಣ್ ಗೆ ಹಾನಿ ಮಾಡಿದ್ದಾಗಿ ಮಂಜ ಒಪ್ಪಿಕೊಂಡರು. ಆದರೆ ಮಂಜನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೇ ಹೋಗಿದ್ದು ಆಶ್ಚರ್ಯ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ