Bigg Boss Kannada: ‘ತಪ್ಪು ಮಾಡಿಬಿಟ್ಟೆ’ ಗಳ-ಗಳನೆ ಅತ್ತ ಜಾನ್ವಿ
Bigg Boss Kannada season 12: ಬಿಗ್ಬಾಸ್ ಕನ್ನಡ ಸೀಸನ್ 12 ರ ಗಟ್ಟಿ ಸ್ಪರ್ಧಿಯೆಂದು ಜಾನ್ವಿ ತಮ್ಮನ್ನು ತಾವು ತೋರ್ಪಡಿಸಿಕೊಂಡಿದ್ದರು. ಮನೆಯ ಇತರೆ ಸ್ಪರ್ಧಿಗಳ ಮೇಲೆ ಪರೋಕ್ಷ ಪ್ರಭಾವವನ್ನು ಅವರು ಬೀರಿದ್ದರು. ಆದರೆ ಅವರು ಮಾಡಿದ ಒಂದು ತಪ್ಪಿನಿಂದ ಮನೆ ಮಂದಿಗೆ ಅವರ ಬಗೆಗಿನ ಅಭಿಪ್ರಾಯ ಬದಲಾಗಿದೆ. ಇದೀಗ ತಾವು ಮಾಡಿದ ತಪ್ಪನ್ನು ನೆನದು ಕಣ್ಣೀರು ಹಾಕಿದ್ದಾರೆ ಜಾನ್ವಿ.

ಬಿಗ್ಬಾಸ್ (Bigg Boss Kannada) ಮನೆಯಲ್ಲಿ ಅಶ್ವಿನಿ ಮತ್ತು ಜಾನ್ವಿ ಅವರುಗಳು ಗಟ್ಟಿ ಸ್ಪರ್ಧಿಗಳಾಗಿ ತಮ್ಮನ್ನು ತಾವು ಪ್ರೊಜೆಕ್ಟ್ ಮಾಡಿಕೊಂಡಿದ್ದಾರೆ. ಅಶ್ವಿನಿ ಹಾಗೂ ಜಾನ್ವಿ ಅವರುಗಳು ಮನೆಯ ಇತರೆ ಸದಸ್ಯರ ಮೇಲೆ ಪ್ರಭಾವ ಬೀರಿದ್ದರು. ಆದರೆ ಮೂರನೇ ವಾರದಲ್ಲಿ ನಡೆದ ಒಂದು ಘಟನೆಯಿಂದ ಮನೆಯವರಿಗೆ ಈ ಇಬ್ಬರ ಮೇಲಿದ್ದ ಅಭಿಪ್ರಾಯ ಸಂಪೂರ್ಣವಾಗಿ ಬದಲಾಗಿದೆ. ಅದರಲ್ಲೂ ಜಾನ್ವಿಯ ಮೇಲಿ ಇದ್ದ ಗೌರವವೆಲ್ಲ ಕರಗಿ ಹೋಗಿದೆ. ಆದರೆ ಆ ವಿಷಯ ಈಗ ಜಾನ್ವಿಗೆ ಅರ್ಥವಾದಂತಿದೆ. ನಾಮಿನೇಟ್ ಆದ ಬಳಿಕ ಪಶ್ಚಾತ್ತಾಪವಾಗಿ ಗಳ-ಗಳನೇ ಅತ್ತಿದ್ದಾರೆ.
ಅಶ್ವಿನಿ ಮತ್ತು ಜಾನ್ವಿ ಅವರು ಮನೆಯ ಕಿರಿಯ ಸದಸ್ಯೆ ರಕ್ಷಿತಾ ಮೇಲೆ ಇಲ್ಲದ ಆರೋಪ ಮಾಡಿದ್ದಲ್ಲದೆ, ಇಡೀ ಮನೆಯವರು ರಕ್ಷಿತಾರನ್ನು ಅನುಮಾನದಿಂದ ನೋಡುವಂತೆ ಮಾಡಿದ್ದರು. ಅದು ಮಾತ್ರವೇ ಅಲ್ಲದೆ, ರಕ್ಷಿತಾಗೆ ಇದರಿಂದ ಹಾನಿ ಆಗುತ್ತಿದೆ, ಆಕೆಗೆ ನೋವಾಗುತ್ತಿದೆ ಎಂದು ಗೊತ್ತಾದ ಬಳಿಕವೂ ಸಹ ಅಶ್ವಿನಿ ಆಗಲಿ ಜಾನ್ವಿ ಆಗಲಿ ತಮ್ಮ ಮೋಸದಾಟವನ್ನು ನಿಲ್ಲಿಸಲಿಲ್ಲ. ಕೊನೆಗೆ ಶನಿವಾರದ ಎಪಿಸೋಡ್ನಲ್ಲಿ ಬಂದ ಸುದೀಪ್ ಅವರು ಇಬ್ಬರಿಗೂ ಚಾಟಿ ಬೀಸಬೇಕಾಗಿ ಬಂತು.
ಇಂದಿನ ನಾಮಿನೇಷನ್ನಲ್ಲಿ ಇದೇ ವಿಷಯವನ್ನು ಮುಖ್ಯವಾಗಿ ಇರಿಸಿಕೊಂಡು ಮನೆಯ ಹಲವು ಸದಸ್ಯರು ಜಾನ್ವಿ ಮತ್ತು ಅಶ್ವಿನಿ ಅವರನ್ನು ನಾಮಿನೇಟ್ ಮಾಡಿದರು. ಆಗ ಜಾನ್ವಿಗೆ ತಾವು ಮಾಡಿದ ತಪ್ಪಿನ ಅರಿವಾಯ್ತು ಎನಿಸುತ್ತದೆ. ಕಾವ್ಯಾ ಜೊತೆಗೆ ಮಾತನಾಡುತ್ತಾ ಇದ್ದಕ್ಕಿದ್ದಂತೆ ಅಳಲು ಆರಂಭಿಸಿದರು. ನಾನು ಹಾಗೆ ಮಾಡಬಾರದಿತ್ತು. ನಾನು ರಕ್ಷಿತಾ ಅಳುವುದು ಕಣ್ಣಾರೆ ನೋಡಿದೆ. ಆದರೂ ಸಹ ನಾನು ಸುಮ್ಮನಾಗಲಿಲ್ಲ. ಗೊತ್ತಿದ್ದು-ಗೊತ್ತಿದ್ದು ತಪ್ಪು ಮಾಡಿದೆ. ನಮ್ಮ ಹಳ್ಳ ನಾವೇ ತೋಡಿಕೊಂಡೆವು ಎಂದು ಅತ್ತುಬಿಟ್ಟರು.
ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು
ನನ್ನ ತಾಯಿ, ಮಗ, ಗೆಳೆಯರು, ಅಣ್ಣಂದಿರು ಎಲ್ಲ ಬಹಳ ಪ್ರೋತ್ಸಾಹ ಕೊಟ್ಟು ನನ್ನನ್ನು ಇಲ್ಲಿಗೆ ಕಳಿಸಿದ್ದಾರೆ. ನಾನು ಹೀಗೆ ತಪ್ಪು ಮಾಡಿ ಹೊರಗೆ ಹೋದರೆ ಅವರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಈಗ ನಾನು ಹೊರಗೆ ಹೋದರೆ ನನ್ನ ಸಹೋದರರೆ ನನ್ನನ್ನು ಬಿಡುವುದಿಲ್ಲ, ಆ ಪುಟ್ಟ ಹುಡುಗಿ ಕಣ್ಣಲ್ಲಿ ನೀರು ಹಾಕಿಸಿದ್ದೀಯ ಎಂದು ನನ್ನನ್ನು ಬೈಯ್ಯುತ್ತಾರೆ, ನಾನು ತಪ್ಪು ಮಾಡಿಬಿಟ್ಟೆ’ ಎಂದು ಕಣ್ಣೀರು ಹಾಕಿದರು ಜಾನ್ವಿ.
ಜಾನ್ವಿಗೆ ಅಶ್ವಿನಿ ಮತ್ತು ಕಾವ್ಯಾ ಅವರುಗಳು ಸಮಾಧಾನ ಮಾಡಿದರು. ಈ ವಾರ ಅಶ್ವಿನಿ, ಜಾನ್ವಿ, ಗಿಲ್ಲಿ, ರಾಶಿಕಾ, ಧ್ರುವಂತ್, ರಕ್ಷಿತಾ ಮತ್ತು ಸ್ಪಂದನಾ ಅವರುಗಳು ನಾಮಿನೇಟ್ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




