
ಬಿಗ್ಬಾಸ್ ಮನೆಯಲ್ಲಿ ಈ ವಾರ ಊಹಿಸಲಾರದ ಹಲವು ಘಟನೆಗಳು ನಡೆದಿವೆ. ವಾರವೆಲ್ಲ ಗಂಧರ್ವ ಮತ್ತು ರಾಕ್ಷಸ ಟಾಸ್ಕ್ನಲ್ಲಿ ಸ್ಪರ್ಧಿಗಳು ಥೇಟ್ ರಾಕ್ಷಸರಂತೆ ವರ್ತಿಸಿದ್ದಾರೆ. ಮಾಡರ್ನ್ ಕವಿ ಮಂಜನಂತೂ ಅತಿಯಾಗಿ ಕ್ರೂರತೆ ಮೆರೆದಿದ್ದ. ಅದೇ ಕಾರಣಕ್ಕೆ ಮಂಜನಿಗೆ ರೆಡ್ ಕಾರ್ಡ್ ನೀಡಿ ಮನೆಯಿಂದ ಹೊರಗೆ ಹಾಕಲಾಯ್ತಯ. ಮಂಜ ಹೊರಗೆ ಹೋಗಿದ್ದನ್ನು ಪ್ರೇಕ್ಷಕರು ಹಾಗೂ ಮನೆ ಮಂದಿ ಇಬ್ಬರೂ ಸಂಭ್ರಮಿಸಿದ್ದಾರೆ. ಆದರೆ ಮನೆಯ ಮೆಚ್ಚಿನ ಸ್ಪರ್ಧಿಯೂ ಒಬ್ಬರು ಮಂಜನ ಜೊತೆಗೆ ಹೊರಗೆ ಹೋಗಿದ್ದಾರೆ. ಇದು ಪ್ರೇಕ್ಷಕರ ಜೊತೆಗೆ ಮನೆ ಮಂದಿಗೂ ಸಹ ಶಾಕ್ ಆಗಿದೆ.
ಈ ಸೀಸನ್ನ ಮೊದಲ ಕ್ಯಾಪ್ಟನ್ ಮತ್ತು ಮನೆಯ ಸೌಮ್ಯ ಸ್ಪರ್ಧಿ ಆಗಿದ್ದ ಸಂಗೀತ ಭಟ್ ಅವರು ಸಹ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಸಂಗೀತಾ ಅವರು ಅನಾರೋಗ್ಯದಿಂದಾಗಿ ಕಳೆದ ವಾರ ಆಸ್ಪತ್ರೆ ಸೇರಿದ್ದರು. ಅವರು ಚಿಕಿತ್ಸೆ ಪಡೆದು ಮತ್ತೆ ಬಿಗ್ಬಾಸ್ ಮನೆಗೆ ಮರಳಿದ್ದರು. ಆದರೆ ಮನೆಗೆ ಮರಳಿದಾಗಿನಿಂತಲೂ ಅವರು ಹೆಚ್ಚೇನೂ ಸಕ್ರಿಯವಾಗಿರಲಿಲ್ಲ. ಇದೀಗ ಅವರು ಅನಾರೋಗ್ಯದ ಕಾರಣದಿಂದಾಗಿ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಸುದೀಪ್ ಅವರು ಖುದ್ದಾಗಿ ಅವರನ್ನು ವೇದಿಕೆಗೆ ಬರಮಾಡಿಕೊಂಡು ಅವರಿಗೆ ಬೀಳ್ಕೊಡುಗೆ ನೀಡಿದ್ದಾರೆ.
ಸಂಗೀತಾ ಅವರಿಗೆ ಆಂಕ್ಸೈಟಿ ಅಟ್ಯಾಕ್ ಸೇರಿದಂತೆ ಇನ್ನೂ ಕೆಲವು ಆರೋಗ್ಯ ಸಮಸ್ಯೆಗಳು ಒಳಗಿದ್ದಾಗ ಕಾಡಿದವಂತೆ. ಟಾಸ್ಕ್ ಒಂದರ ವೇಳೆ ಅವರು ನಿತ್ರಾಣರಾಗಿ ಬಿದ್ದು ಬಿಟ್ಟಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಸಹ ಅವರ ಆರೋಗ್ಯ ಸಂಪೂರ್ಣವಾಗಿ ಸರಿ ಹೋಗಿರಲಿಲ್ಲ. ಇದೀಗ ಅವರ ಖಾಸಗಿ ವೈದ್ಯರ ಸಲಹೆ ಮೇರೆಗೆ ಅವರನ್ನು ಗೇಮಿನಿಂದ ಹೊರಗೆ ಕಳಿಸಲಾಗಿದೆ. ಈ ಕಾರಣಕ್ಕಾಗಿ ಈ ವಾರ ಮತಗಳ ಆಧಾರದಲ್ಲಿ ಎವಿಕ್ಷನ್ ಆಗಲಿಲ್ಲ ಆದರೂ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋದರು.
ಇದನ್ನೂ ಓದಿ:ಬಿಗ್ಬಾಸ್ ಮನೆಗೆ ನುಗ್ಗಿದ ಕಮಾಂಡೋಗಳು: ಹೊರಗೆಳೆದುಕೊಂಡು ಹೋಗಿದ್ದು ಯಾರನ್ನು?
ಇಬ್ಬರು ಹೊರಗೆ ಹೋದರಾದರೂ ಅದಕ್ಕೆ ಪ್ರತಿಯಾಗಿ ಇಬ್ಬರು ಸ್ಪರ್ಧಿಗಳು ಈ ವಾರ ಬಿಗ್ಬಾಸ್ ಮನೆಗೆ ಸೇರುತ್ತಿದ್ದಾರೆ. ಅದರಲ್ಲಿ ಒಬ್ಬರು ಕುಮಾರಿ. ಅಗ್ನಿಪರೀಕ್ಷೆಗೆ ಬಂದಿದ್ದ ಕುಮಾರಿ ಅಂತಿಮ ಸುತ್ತಿನ ವರೆಗೆ ಬಂದಿದ್ದರು. ಆದರೆ ಕಾರಣಾಂತರಗಳಿಂದ ಅವರು ಆಯ್ಕೆ ಆಗಿರಲಿಲ್ಲ. ಅವರನ್ನು ಈಗ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕರೆಸಿಕೊಳ್ಳಲಾಗಿದೆ. ಸುದೀಪ್ ಅವರು ಕುಮಾರಿ ಅವರನ್ನು ಮಾತನಾಡಿಸಿ ಮನೆಯ ಒಳಗೆ ಕಳಿಸಿದರು. ಜೊತೆಗೆ ಮತ್ತೊಬ್ಬ ಸ್ಪರ್ಧಿಯನ್ನು ಸಹ ವೈಲ್ಡ್ ಕಾರ್ಡ್ ಮೂಲಕ ಒಳಗೆ ಕಳಿಸಲಾಗುತ್ತದೆ ಎಂದು ಸುದೀಪ್ ಅವರು ಮಾಹಿತಿ ನೀಡಿದರು. ಆದರೆ ಅವರ ಪರಿಚಯ ವಾರದ ಮಧ್ಯಭಾಗದಲ್ಲಿ ಆಗಲಿದೆ. ಅವರೂ ಸಹ ಅಗ್ನಿಪರೀಕ್ಷೆ ಸ್ಪರ್ಧಿಯೇ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 pm, Sun, 11 October 26