‘ಕ್ಷಮಿಸಿ ವಿನಯ್, ನಿಮ್ಮ ಬಳಗ ಮತ್ತಷ್ಟು ಸಣ್ಣದಾಯಿತು’: ನೇರವಾಗಿ ಹೇಳಿದ ಸುದೀಪ್
Bigg Boss Kannada: ವಿನಯ್ ಬಳಗದ ಒಬ್ಬೊಬ್ಬರಾಗಿ ಹೊರಗೆ ಹೋಗಿದ್ದಾರೆ. ವಿನಯ್ ಗ್ಯಾಂಗ್ನ ಕೊನೆಯ ಸದಸ್ಯೆ ನಮ್ರತಾ ಸಹ ಭಾನುವಾರದ ಎಪಿಸೋಡ್ನಲ್ಲಿ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ (BiggBoss) ಮನೆಯಲ್ಲಿ ವಿನಯ್ ಗೌಡ (Vinay Gowda) ಅವರು ಗ್ರೂಪ್ ಒಂದನ್ನು ಕಟ್ಟಿಕೊಂಡಿದ್ದರು. ಇದೇ ಗ್ರೂಪ್ ಅನ್ನು ಇಟ್ಟುಕೊಂಡು ಫಿನಾಲೆ ತಲುಪೋ ಕನಸು ಕಂಡಿದ್ದರು. ಅಚ್ಚರಿಯ ಸಂಗತಿ ಎಂದರೆ ಈ ಗುಂಪಿನಿಂದ ಎಲ್ಲರೂ ಔಟ್ ಆಗುತ್ತಾ ಬಂದರು. ಅವರ ಗ್ರೂಪ್ ನ ಕೊನೆಯ ಸದಸ್ಯೆ ನಮ್ರತಾ ಗೌಡ ಅವರು ಕೂಡ ಎಲಿಮಿನೇಟ್ ಆಗಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ನಿಮ್ಮ ಬಳಗ ಮತ್ತಷ್ಟು ಸಣ್ಣದಾಗಿದೆ ಎಂದಿದ್ದಾರೆ ಸುದೀಪ್. ವೀಕೆಂಡ್ ಎಪಿಸೋಡ್ನಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ವಿನಯ್ ಅವರಿಗೆ ಒಂಟಿತನ ಕಾಡುತ್ತಿದೆ.
ಬಿಗ್ ಬಾಸ್ ಆರಂಭ ಆಗಿ ಒಂದು ತಿಂಗಳು ಕಳೆದಿತ್ತು. ಈ ವೇಳೆ ಟಾಸ್ಕ್ ಒಂದನ್ನು ನೀಡಲಾಗಿತ್ತು. ಇದಕ್ಕಾಗಿ ವಿನಯ್ ಒಂದು ಟೀಂ ಕಟ್ಟಿಕೊಂಡಿದ್ದರು. ಈ ತಂಡದಲ್ಲಿ ತುಕಾಲಿ ಸಂತೋಷ್, ರಕ್ಷಕ್, ಈಶಾನಿ, ಸ್ನೇಹಿತ್ ಗೌಡ, ನಮ್ರತಾ ಗೌಡ, ಮೈಕಲ್ ಅಜಯ್, ನೀತು ವನಜಾಕ್ಷಿ ಇದ್ದರು. ಇದೇ ಟೀಂನ ಇಟ್ಟುಕೊಂಡು ಫಿನಾಲೆ ಹೋಗುವ ಕನಸು ಕಂಡಿದ್ದರು ವಿನಯ್. ಆದರೆ, ಅಲ್ಲಾಗಿದ್ದೇ ಬೇರೆ.
ಮೊದಲು ತುಕಾಲಿ ಸಂತೋಷ್ ಅವರು ತಂಡ ತೊರೆದರು. ಅವರು ವರ್ತೂರು ಸಂತೋಷ್ ಜೊತೆ ಸ್ನೇಹ ಬೆಳೆಸಿಕೊಂಡು ನೊಂದವರ ಗುಂಪನ್ನು ಕಟ್ಟಿಕೊಂಡರು. ವಿನಯ್ ಟೀಂ ಮಾಡಿದ ವಾರವೇ ರಕ್ಷಕ್ ಔಟ್ ಆದರು. ನಂತರ ಈಶಾನಿ, ನೀತು, ಮೈಕಲ್ ಔಟ್ ಆದರು. ಅವರ ಟೀಂನಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದು ವಿನಯ್ ಹಾಗೂ ನಮ್ರತಾ ಮಾತ್ರ ಆಗಿತ್ತು.
ನಮ್ರತಾ ಅವರು ಭಾನುವಾರ ಔಟ್ ಆಗಿದ್ದಾರೆ. ವರ್ತೂರು ಸಂತೋಷ್, ಕಾರ್ತಿಕ್ ಮಹೇಶ್, ವಿನಯ್ ಗೌಡ, ಡ್ರೋನ್ ಪ್ರತಾಪ್ ಹಾಗೂ ನಮ್ರತಾ ನಾಮಿನೇಟ್ ಆಗಿದ್ದರು. ಈ ಪೈಕಿ ಕಡಿಮೆ ವೋಟ್ ಪಡೆದು ನಮ್ರತಾ ಎಲಿಮಿನೇಟ್ ಆಗಿದ್ದಾರೆ. ಈ ವೇಳೆ ಸುದೀಪ್ ಮಾತನಾಡಿದ್ದಾರೆ. ‘ನಮ್ರತಾ ಅವರೇ ನೀವು ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದ್ದೀರಿ. ನಿಮ್ಮ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಈಗ ನಿಮ್ಮ ಪರಿಚಯ ಆಯಿತು’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ
‘ವಿನಯ್ ಸಾರಿ. ನಿಮ್ಮ ಬಳಗ ಮತ್ತಷ್ಟು ಸಣ್ಣದಾಗಿದೆ. ಆದರೆ, ನಿಮ್ಮ ಸಿಸ್ಟರ್ ನಿಜಕ್ಕೂ ಉತ್ತಮವಾಗಿ ಆಡಿದ್ದಾರೆ’ ಎಂದರು ಸುದೀಪ್. ನಮ್ರತಾನ ಕಳಿಸುವಾಗ ವಿನಯ್ ಅವರು ಭಾವುಕರಾಗಿದ್ದಾರೆ. ಎಲ್ಲಾ ಸದಸ್ಯರನ್ನು ಕಳೆದುಕೊಂಡು ಅವರು ಒಬ್ಬಂಟಿ ಆಗಿದ್ದಾರೆ.
ಇತ್ತೀಚೆಗೆ ಮಾತನಾಡಿದ್ದ ಪ್ರತಾಪ್ ಅವರು, ‘ವಿನಯ್ ಅವರ ಗುಂಪಿನಿಂದ ಒಬ್ಬೊಬ್ಬರೇ ಔಟ್ ಆಗುತ್ತಾ ಬಂದರು. ಈ ರೀತಿ ಔಟ್ ಆದವರ ಬೆಡ್ಶೀಟ್ ವಿನಯ್ ಅವರ ಬೆಡ್ ಸೇರಿತ್ತು’ ಎಂದಿದ್ದರು ಪ್ರತಾಪ್. ಈ ಮಾತು ವಿನಯ್ಗೆ ಕೋಪ ತರಿಸಿತ್ತು. ಸ್ವಲ್ಪ ಸಮಯದ ನಂತರ ಅವರಿಗೆ ಪ್ರತಾಪ್ ಹೇಳಿದ ಮಾತು ನಿಜ ಎನಿಸಿದೆ. ‘ನನ್ನ ಗುಂಪಿನವರೇ ಎಲ್ಲರೂ ಹೋಗಿದ್ದಾರೆ. ಪ್ರತಾಪ್ ಹೇಳಿದ್ದು ನಿಜ ಎನಿಸುತ್ತದೆ’ ಎಂದಿದ್ದರು ಅವರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ