ಬಿಗ್ಬಾಸ್ನಲ್ಲಿ (BiggBoss) ಈ ವಾರ ಜಗಳಗಳು ಬಹಳ ಜೋರಾಗಿವೆ. ರಾಕ್ಷಸರು-ಗಂಧರ್ವರು ಎಂದು ಗುಂಪುಗಳನ್ನಾಗಿ ವಿಂಗಡಿಸಿದ್ದು ಜಗಳಗಳಿಗೆ ಸರಿಯಾದ ವೇದಿಕೆಯನ್ನೇ ಒದಗಿಸಲಾಗಿತ್ತು. ಬುಧವಾರದ ಎಪಿಸೋಡ್ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ರಾಕ್ಷಸ ವೇಷದಲ್ಲಿದ್ದ ಸಂಗೀತಾ, ಕಾರ್ತಿಕ್ ಅವರುಗಳು ಕುರ್ಚಿಯ ಮೇಲೆ ಕೂರಿಸಲಾಗಿದ್ದ ನಾಲ್ವರು ಗಂಧರ್ವರಲ್ಲಿ ಇಬ್ಬರನ್ನು ಕುರ್ಚಿ ಬಿಟ್ಟು ಏಳುವಂತೆ ಮಾಡಬೇಕಿತ್ತು.
ಟಾಸ್ಕ್ ಆಡುವ ವೇಳೆ ಯಾವುದೋ ಮಾತಿಗೆ ವಿನಯ್, ಕಾರ್ತಿಕ್ ಅನ್ನು ತಗಡು ಎಂದು ರೇಗಿಸಲು ಪ್ರಾರಂಭಿಸಿದರು. ಕಾರ್ತಿಕ್ ಸಹ ಅದಕ್ಕೆ ತಕ್ಕಂತೆ ವಿನಯ್ ಅನ್ನು ತಗಡು ಎಂದು ಪ್ರತಿಕ್ರಿಯಿಸಲು ಆರಂಭಿಸಿದರು. ಈ ವೇಳೆ ಮಹಿಳೆಯರ ಬಗ್ಗೆಯೂ ಮಾತೊಂದು ಬಂತು, ಆ ಮಾತು ಹಾಗೆಯೇ ಮುಂದುವರೆದು ಇಬ್ಬರ ನಡುವೆ ತುಸು ಜೋರಾದ ಜಗಳವಾಯ್ತು.
ಈ ವೇಳೆ ವಿನಯ್ ತೀವ್ರ ಸಿಟ್ಟಿನಿಂದ ವರ್ತಿಸಿದರು. ಕಾರ್ತಿಕ್ ಸಹ. ಕಾರ್ತಿಕ್ ಬಳಿ ಬಂದ ವಿನಯ್ ಕೆಲವು ಆಂಗಿಕ ಸಂಜ್ಞೆಗಳನ್ನು ಮಾಡಿದರು. ಈ ವೇಳೆ ಕಾರ್ತಿಕ್ ಧ್ವನಿ ಹೊರಡಿಸದೆ ಕೆಲವು ಮಾತುಗಳನ್ನು ಆಡಿದರು. ಆದರೆ ಆ ಬಳಿಕ ವಿನಯ್, ಕಾರ್ತಿಕ್ ನನ್ನನ್ನು ಕೆಟ್ಟ ಮಾತಿನಿಂದ ಬೈದ ಎಂದು ಒಮ್ಮೆಲೆ ಜೋರಾಗಿ ಕೂಗಾಡಿದರು. ಕುಟುಂಬದ ವಿಷಯವನ್ನು ಚರ್ಚೆಗೆ ತಂದ, ಅವನಿಗೂ ಅಮ್ಮ, ತಂಗಿ ಇದ್ದಾರೆ ಅವನು ನನ್ನನ್ನು ಕೆಟ್ಟದಾಗಿ ಬೈದ ಎಂದು ಜೋರಾಗಿ ಕೂಗಾಡಿದರು. ‘ನೀನು ನನ್ನ ಟಾರ್ಗೆಟ್, ನೀನೊಬ್ಬನೆ ನನ್ನ ಟಾರ್ಗೆಟ್’ ಎಂದು ವಿನಯ್ ಧಮ್ಕಿ ಸಹ ಹಾಕಿದರು. ಅದಕ್ಕೆ ಕಾರ್ತಿಕ್ ಆಯ್ತು ಹೋಗೋಲೆ ಎಂದು ಕೂಗಾಡಿದರು.
ಇದನ್ನೂ ಓದಿ:ಬಿಗ್ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು
ವಿನಯ್ ಮಾಡಿದ ಆರೋಪವನ್ನು ಕಾರ್ತಿಕ್ ಸಂಪೂರ್ಣವಾಗಿ ಅಲ್ಲಗಳೆದರು. ನಾನು ಕೆಟ್ಟ ಪದಗಳನ್ನು ಬಳಸಿದ್ದರೆ ನನ್ನನ್ನು ಈ ಕೂಡಲೇ ಈ ಮನೆಯಿಂದ ಹೊರಗೆ ಹಾಕಿ, ಈ ಕೂಡಲೇ ನಾನು ಹೊರಗೆ ಹೋಗಲು ಸಿದ್ಧ. ನಾನು ಖಂಡಿತ ಹಾಗೆ ಅಂದಿಲ್ಲ ಎಂದರು. ವಿಡಿಯೋ ಇದೆ ಬೇಕಾದರೆ ವೀಡಿಯೋದಲ್ಲಿ ನೋಡಿಕೊಳ್ಳಲಿ ಎಂದು ಸವಾಲು ಹಾಕಿದರು.
ಆದರೆ ವಿನಯ್, ತುಕಾಲಿ, ನಮ್ರತಾ ಇನ್ನಿತರರ ಮುಂದೆ ಕಾರ್ತಿಕ್ ಬಗ್ಗೆ ಬೋಡ ಇನ್ನಿತರೆ ಮಾತುಗಳನ್ನು ಬೈಯ್ಯುತ್ತಲೇ ಇದ್ದರು. ನಿಜವಾಗಿಯೂ ಕಾರ್ತಿಕ್, ವಿನಯ್ಗೆ ಕೆಟ್ಟ ಪದಗಳನ್ನು ಬಳಸಿದರೇ ಅಥವಾ ಇಲ್ಲವೇ ಎಂಬುದು ಪ್ರೇಕ್ಷಕರಿಗೆ ತಿಳಿಯಲಿಲ್ಲ. ಬಹುಷಃ ವಾರಾಂತ್ಯದಲ್ಲಿ ಸುದೀಪ್ ಅವರು ಬಂದಾಗ ಈ ಗೊಂದಲಕ್ಕೆ ಪರಿಹಾರ ಸಿಗಬಹುದು. ನಿಜವಾಗಿಯೂ ಕಾರ್ತಿಕ್ ಕೆಟ್ಟ ಪದಗಳನ್ನು ಬಳಸಿದ್ದಾರೆಯೇ ಅಥವಾ ವಿನಯ್ ಉದ್ದೇಶಪೂರ್ವಕವಾಗಿ ಕಾರ್ತಿಕ್ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಯೇ ತಿಳಿಯಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 pm, Wed, 6 December 23