
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಆಸಕ್ತಿಕರ ಟಾಸ್ಕ್ ನಡೆಯಿತು. ಗುಳ್ಳೆನರಿ ಮತ್ತು ಕಾಗೆ ಎಂದು ಯಶಸ್ ಮತ್ತು ತಾಂಡವ್ ಅವರನ್ನು ಬಿಗ್ಬಾಸ್ ಆರಿಸಿದ್ದರು. ಗುಳ್ಳೆನರಿ, ಕುಯುಕ್ತಿಯ ಕೆಲಸ ಮಾಡಬೇಕಿತ್ತು, ಅದರಂತೆ ಕಾಗೆ, ಆ ಗುಳ್ಳೆನರಿಯನ್ನು ಕಂಡು ಹಿಡಿಯುವ ಕೆಲಸ ಮಾಡಬೇಕಿತ್ತು. ಇಬ್ಬರೂ ಸಹ ಈ ಕೆಲಸವನ್ನು ಮನೆಯ ಎಲ್ಲರ ಕಣ್ಣುತಪ್ಪಿಸಿ ಮಾಡಬೇಕಿತ್ತು. ಈ ಟಾಸ್ಕ್ನಲ್ಲಿ ಯಶಸ್ ಅದ್ಧೂರಿ ಪ್ರದರ್ಶನ ನೀಡಿದರು. ಖುದ್ದು ಬಿಗ್ಬಾಸ್, ಯಶಸ್ ಆಟಕ್ಕೆ ಮಾರು ಹೋದರು.
ಟಾಸ್ಕ್ ಗೆದ್ದವರಿಗೆ ವಿಶೇಷ ಅಧಿಕಾರವನ್ನು ಬಿಗ್ ಬಾಸ್ ಮೊದಲೇ ಘೋಷಿಸಿದ್ದರು. ಅದರಂತೆ ಯಶಸ್, ಟಾಸ್ಕ್ ಗೆದ್ದರು. ಆದರೆ ಮನೆಯ ಸದಸ್ಯರಿಗೆ ಗುಳ್ಳೆ ನರಿ ಯಾರೆಂದು ಗೊತ್ತಿರಲಿಲ್ಲ. ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಎದುರು ಆ ಗುಟ್ಟು ರಟ್ಟಾಯ್ತು. ಸುದೀಪ್ ಅವರೇ ಖುದ್ದು ಎಲ್ಲ ಮನೆಯ ಸದಸ್ಯರ ಮುಂದೆ ಬಲು ವಿಶೇಷವಾಗಿ ಗುಳ್ಳೆನರಿ ಯಾರೆಂದು ಘೋಷಣೆ ಮಾಡಿದರು. ಯಶಸ್, ಗುಳ್ಳೆನರಿ ಎಂದಾಗ ಮನೆಯ ಎಲ್ಲರೂ ಶಾಕ್ ಆದರು.
ಗುಳ್ಳೆನರಿ ಟಾಸ್ಕ್ನಲ್ಲಿ ಅದ್ಭುತ ಆಟವಾಡಿದ ಯಶಸ್ ಅನ್ನು ಸುದೀಪ್ ಮೆಚ್ಚಿ ಕೊಂಡಾಡಿದರು. ‘ಇತರೆ ಸದಸ್ಯರು ಟಾಸ್ಕ್ ಅನ್ನು ಲಘುವಾಗಿ ಪರಿಗಣಿಸಿರುವಾಗ ನೀವು ಟಾಸ್ಕ್ಗೆ ಕಟ್ಟುಬಿದ್ದು ನಿಯಮ ಇರುವಂತೆಯೇ ಆಟ ಆಡಿದಿರಿ. ನಿಮ್ಮ ಆತ್ಮೀಯ ಗೆಳೆಯರಿಗೂ ಸಹ ನೀವು ಸಣ್ಣ ಸುಳಿವನ್ನು ಸಹ ನೀಡಲಿಲ್ಲ. ಅದು ಮಾತ್ರವೇ ಅಲ್ಲದೆ ಬಿಗ್ಬಾಸ್ ಮನೆಯಲ್ಲೂ ಸಹ ನೀವು ಮೊದಲಿನಿಂದಲೂ ಒಳ್ಳೆಯ ಆಟ ಆಡುತ್ತಾ ಬರುತ್ತಿದ್ದೀರಿ, ಒಳ್ಳೆಯ ವ್ಯಕ್ತಿತ್ವ ಪ್ರದರ್ಶಿಸುತ್ತಾ ಬರುತ್ತಿದ್ದೀರಿ’ ಎಂದರು. ಕಿಚ್ಚನ ಚಪ್ಪಾಳೆ ನೀಡುವ ಜೊತೆಗೆ ತಮ್ಮ ವಿಶೇಷ ಜಾಕೆಟ್ ಒಂದನ್ನು ಯಶಸ್ ಅವರಿಗಾಗಿ ಕೊಟ್ಟರು ಸುದೀಪ್.
ಇದನ್ನೂ ಓದಿ:ಬಿಗ್ಬಾಸ್: ಗುಳ್ಳೆನರಿಗೆ ಸಿಂಹದ ಕಿರೀಟ, ನಡೆಯಲಿಲ್ಲ ಕಾಗೆಯ ಆಟ
ಕಿಚ್ಚನ ಚಪ್ಪಾಳೆ, ಜಾಕೆಟ್ ಬಳಿಕ ಬಿಗ್ಬಾಸ್ ಕಡೆಯಿಂದ ಯಶಸ್ ಅವರಿಗೆ ಕಿರೀಟ ಒಂದನ್ನು ನೀಡಲಾಯ್ತು. ಕಿರೀಟವನ್ನು ಬಿಗ್ಬಾಸ್ ಕಳಿಸಿದ್ದರು. ಬಳಿಕ ಅಶ್ವಸೂರ್ಯ ರಿಯಾಲಿಟೀಸ್ ಕಡೆಯಿಂದ ಯಶಸ್ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನವೂ ಸಹ ದೊರಕಿತು. ಅದಾದ ಬಳಿಕ ಬಿಗ್ಬಾಸ್ ಮೊದಲೇ ಘೋಷಿಸಿದ್ದಂತೆ ಯಶಸ್ ಅವರಿಗೆ ಅಡ್ವಾಂಟೇಜ್ ಒಂದನ್ನು ನೀಡಿದರು. ಈ ಹಿಂದೆ ಯಶಸ್, ಪ್ರತಿ ವಾರ ನಾಮಿನೇಟ್ ಆಗಿದ್ದರು, ಆದರೆ ಅದನ್ನು ಬೇರೆಯವರಿಗೆ ವರ್ಗಾವಣೆ ಮಾಡುವ ಅಧಿಕಾರ ಪಡೆದುಕೊಂಡರು. ಯಶಸ್, ಕೂಡಲೇ ನಾಮಿನೇಷನ್ ಅನ್ನು ಗಗನ್ಗೆ ವರ್ಗಾವಣೆ ಮಾಡಿದರು. ಒಟ್ಟಾರೆ ಒಂದು ಒಳ್ಳೆಯ ಟಾಸ್ಕ್ ಆಡಿದ್ದಕ್ಕೆ ಹಲವು ಬಹುಮಾನಗಳು ಯಶಸ್ ಅವರಿಗೆ ದೊರಕಿದಂತಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ