‘ಮೆಟ್ಟು ತಗೊಂಡು ಹೊಡಿತೀನಿ’: ಮತ್ತೆ ನಾಲಿಗೆ ಹರಿಬಿಟ್ಟ ಚೈತ್ರಾ ಕುಂದಾಪುರ
ಜಗದೀಶ್ ಅವರು ಅವಾಚ್ಯ ಪದಗಳನ್ನು ಬಳಸುತ್ತಾರೆ ಎಂದು ಎಲ್ಲರೂ ಆರೋಪಿಸಿದ್ದರು. ಹಾಗಂತ ಚೈತ್ರಾ ಕುಂದಾಪುರ ಅವರ ಮಾತು ಸರಿ ಇದೆಯಾ ಎಂದು ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಸುದೀಪ್ ಅವರು ಬುದ್ಧಿ ಹೇಳಿದ ನಂತರವೂ ಚೈತ್ರಾ ಅವರ ಮಾತಿನ ವರಸೆ ಬದಲಾಗಿಲ್ಲ. ‘ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ’ ಎಂಬ ಮಾತು ಅವರಿಂದ ಬಂದಿದೆ.
ಜಾಸ್ತಿ ಮಾತನಾಡುತ್ತಾರೆ ಎಂಬ ಕಾರಣದಿಂದಲೇ ಚೈತ್ರಾ ಕುಂದಾಪುರ ಅವರು ಹೈಲೈಟ್ ಆಗುತ್ತಾರೆ. ಆದರೆ ಆ ಮಾತೇ ಅವರಿಗೆ ಮುಳುವಾಗುತ್ತಿದೆ. ಕಳೆದ ವಾರ ಅವರು ‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್ಗೆ ಹೇಳಿದ್ದರು. ಆ ಮಾತನ್ನು ಕಿಚ್ಚ ಸುದೀಪ್ ಅವರು ಕಟುವಾಗಿ ಖಂಡಿಸಿದ್ದರು. ಹಾಗಂತ ಚೈತ್ರಾ ಅವರು ತಮ್ಮ ಮಾತಿನ ವರಸೆಯನ್ನು ಬದಲಿಸಿಕೊಂಡಿದ್ದಾರಾ? ಖಂಡಿತಾ ಇಲ್ಲ. ಸೋಮವಾರದ (ಅಕ್ಟೋಬರ್ 21) ಸಂಚಿಕೆಯಲ್ಲಿ ಅವರು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಚಪ್ಪಲಿಯಲ್ಲಿ ಹೊಡೆಯುವ ಬಗ್ಗೆ ಅವರು ಮಾತನಾಡಿದ್ದಾರೆ.
ಕಳೆದ ವಾರ ಜಗದೀಶ್ ಅವರಿಗೆ ಉಗ್ರಂ ಮಂಜು ಅವರು ಚಪ್ಪಲಿ ತೋರಿಸಿದ್ದರು. ಅದು ಸರಿಯಲ್ಲ ಎಂದು ಸುದೀಪ್ ಅವರು ಹೇಳಿದ್ದರು. ಇಂಥ ಹಲವು ಕಾರಣಗಳಿಂದಾಗಿ ಮನೆಯ ಸದಸ್ಯರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟಾದರೂ ಕೂಡ ಚೈತ್ರಾ ಅವರು ಮಾತಿನ ವರಸೆ ಬದಲಾಯಿಸಿಕೊಂಡಿಲ್ಲ. ಸಂದರ್ಭ ಬಂದರೆ ತಾವು ಮೆಟ್ಟಿನಲ್ಲಿ ಹೊಡೆಯುವುದಾಗಿ ಚೈತ್ರಾ ಹೇಳಿದ್ದಾರೆ.
ಈ ಮೊದಲು ಹಂಸಾ ಅವರ ಬಗ್ಗೆ ಗೋಲ್ಡ್ ಸುರೇಶ್ ಏನೇನೋ ಕಮೆಂಟ್ ಮಾಡಿದ್ದರು. ಹಂಸಾ ಅವರದ್ದು ಲವ್ ಸ್ಟೋರಿ ನಡೆಯುತ್ತಿತ್ತು ಎಂದು ಅವರು ಹೇಳಿದ್ದರು. ಅದರಿಂದ ಹಂಸಾಗೆ ಬೇಸರ ಆಯಿತು. ಹಾಗಾಗಿ ಅವರು ಈ ವಿಚಾರವನ್ನು ಚೈತ್ರಾ ಕುಂದಾಪುರ ಜೊತೆ ಚರ್ಚೆ ಮಾಡುತ್ತಿದ್ದರು. ಆಗ ಚೈತ್ರಾ ಅವರ ಮಾತುಗಳು ಮೆಟ್ಟಿನ ತನಕ ಹೋಯಿತು.
ಇದನ್ನೂ ಓದಿ: ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಉದ್ಧಟತನ ಮುಂದುವರಿಸಿದ ಚೈತ್ರಾ ಕುಂದಾಪುರ
‘ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತಾಡಿದರೆ ಮೆಟ್ಟು ತಗೊಂಡು ಹೊಡಿತೀನಿ. ಅದರಿಂದ ನಾನು ಹೊರಗೆ ಹೋದ್ರೂ ಚಿಂತೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ’ ಎಂದು ಚೈತ್ರಾ ಕುಂದಾಪುರ ಅವರ ಹೇಳಿದ್ದಾರೆ. ಇಂಥ ಮಾತುಗಳನ್ನು ಆಡಿದ್ದಕ್ಕೆ ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಯಾವ ರೀತಿ ಪಂಚಾಯ್ತಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.