ಕಲರ್ಸ್ ಕನ್ನಡದಲ್ಲಿ ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋ; ಏನು ಇದರ ವಿಶೇಷ?
‘ಕ್ವಾಟ್ಲೆ ಕಿಚನ್’ ಕಾರ್ಯಕ್ರಮಕ್ಕೆ ನಟಿ ಶ್ರುತಿ ಮತ್ತು ಪ್ರಸಿದ್ಧ ಶೆಫ್ ಕೌಶಿಕ್ ಅವರು ತೀರ್ಪುಗಾರರಾಗಿದ್ದಾರೆ. ಅಡುಗೆ ಮತ್ತು ತಮಾಷೆಯ ಜಗಲ್ಬಂದಿ ಈ ಶೋನಲ್ಲಿ ಇರಲಿದೆ. ಅನುಪಮಾ ಗೌಡ ಮತ್ತು ಕುರಿ ಪ್ರತಾಪ್ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಹಲವು ಬಗೆಯ ರಿಯಾಲಿಟಿ ಶೋಗಳ (Reality Show) ಮೂಲಕ ‘ಕಲರ್ಸ್ ಕನ್ನಡ’ ವಾಹಿನಿ ಮನರಂಜನೆ ನೀಡುತ್ತಿದೆ. ಈಗ ಒಂದು ಹೊಸ ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ‘ಕ್ವಾಟ್ಲೆ ಕಿಚನ್’ (Kwatle Kitchen) ಎಂಬುದು ಈ ರಿಯಾಲಿಟಿ ಶೋ ಹೆಸರು. ಹೆಸರೇ ಸೂಚಿಸುತ್ತಿರುವಂತೆ ಇದು ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ. ಜೂನ್ 14ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ‘ಕ್ವಾಟ್ಲೆ ಕಿಚನ್’ ಪ್ರಸಾರ ಆಗುತ್ತಿದೆ. ‘ನನ್ನಮ್ಮ ಸೂಪರ್ ಸ್ಟಾರ್’, ‘ರಾಜ ರಾಣಿ’, ‘ಗಿಚ್ಚಿ ಗಿಲಿಗಿಲಿ’, ‘ಬಿಗ್ ಬಾಸ್’ ಮುಂತಾದ ಟಾಪ್ ರೇಟಿಂಗ್ ಕಾರ್ಯಕ್ರಮಗಳನ್ನು ನೀಡಿರುವ ‘ಕಲರ್ಸ್ ಕನ್ನಡ’ (Colors Kannada) ವಾಹಿನಿಯು ಈಗ ‘ಕ್ವಾಟ್ಲೆ ಕಿಚನ್’ ಮೂಲಕ ಜನರನ್ನು ರಂಜಿಸುತ್ತಿದೆ.
ಕಿರುತೆರೆಯಲ್ಲಿ ಈಗಾಗಲೇ ಅಡುಗೆಗೆ ಸಂಬಂಧಿಸಿದ ಶೋಗಳನ್ನು ಜನರು ನೋಡಿದ್ದಾರೆ. ಆದರೆ ‘ಕ್ವಾಟ್ಲೆ ಕಿಚನ್’ ಸಂಪೂರ್ಣ ಭಿನ್ನವಾಗಿ ಇರಲಿದೆ. ಇದು ನೂರಕ್ಕೆ ನೂರು ಕಾಮಿಡಿ ಕುಕ್ಕಿಂಗ್ ಶೋ ಎಂದು ವಾಹಿನಿ ಹೇಳಿದೆ. ಅಡುಗೆಯ ಜತೆಗೆ ನಗುವಿನ ಔತಣ ಉಣಬಡಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಇದರಲ್ಲಿ ಜೋಡಿಗಳ ಜೊತೆಯಾಟ ಇರುತ್ತದೆ.
ಟ್ವಿಸ್ಟ್ ಏನೆಂದರೆ, ಈ ಜೋಡಿಯಲ್ಲಿ ಒಬ್ಬರಿಗೆ ಅಡುಗೆ ಬರುತ್ತದೆ, ಮತ್ತೊಬ್ಬರಿಗೆ ಪಾಕಶಾಸ್ತ್ರದ ಅಆಇಈ ಸಹ ತಿಳಿದಿರುವುದಿಲ್ಲ! ಐವರು ನಳಪಾಕ ಪ್ರವೀಣರಿಗೆ ಸಹಾಯಕರಾಗಿ ಮತ್ತೈದು ನಗೆಪಾಕ ಪ್ರವೀಣರು ಇರುತ್ತಾರೆ. ಕುಕ್ ಹಾಗೂ ಕ್ವಾಟ್ಲೆಗಳು ಸೇರಿ ಅಡುಗೆ ಮಾಡುವಾಗ ಹುಟ್ಟುವ ತಮಾಷೆಯೇ ಈ ಕಾರ್ಯಕ್ರಮದ ಹೈಲಟ್.
ಬಹಳ ಬೇಗ ಅಡುಗೆ ಮಾಡಿ ಮುಗಿಸಲು ಹೊರಟ ಪಾಕಪ್ರವೀಣರಿಗೆ ಕ್ವಾಟ್ಲೆ ಸಹಾಯಕರು ಅಡ್ಡಗಾಲಾಗಿ ನಿಲ್ಲುತ್ತಾರೆ. ಟಾರ್ಚರ್ ಕೊಡಲೆಂದೇ ಬಂದ ಕ್ವಾಟ್ಲೆಗಳು ಸ್ವತಃ ಜೋಕರ್‌ಗಳಾಗುವ ಪ್ರಸಂಗ ಕೂಡ ಇರುತ್ತದೆ. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಈ ಶೋನಲ್ಲಿ ಕುಕ್‌ಗಳು ಎಲಿಮಿನೇಟ್ ಆಗುತ್ತಾರೆ. ಆದರೆ ಕ್ವಾಟ್ಲೆಗಳು ಎಲಿಮಿನೇಟ್ ಆಗುವುದಿಲ್ಲ.
‘ಕ್ವಾಟ್ಲೆ ಕಿಚನ್’ ಶೋನಲ್ಲಿ ಪ್ರತಿ ವಾರವೂ ಕುಕ್ ಮತ್ತು ಕ್ವಾಟ್ಲೆಗಳ ಜೋಡಿ ಬದಲಾಗುತ್ತದೆ. ಒಳ್ಳೆಯ ಸಹಾಯಕ ಬರಲಿ ಎಂದು ಕಾಯುತ್ತಿರುವ ಕುಕ್‌ಗಳಿಗೆ ಬೆಳ್ಳುಳ್ಳಿ ಹಾಗೂ ಈರುಳ್ಳಿಯ ನಡುವೆ ವ್ಯತ್ಯಾಸ ಕೂಡ ಗೊತ್ತಿರದ ಕ್ವಾಟ್ಲೆ ಸಹಾಯಕರು ಸಿಗುತ್ತಾರೆ. ಇದರಿಂದ ಉಂಟಾಗುವ ಕಾಮಿಡಿಯಿಂದ ವೀಕ್ಷಕರಿಗೆ ಸಖತ್ ಮನರಂಜನೆ ಸಿಗುತ್ತದೆ. ನಟಿ ಶ್ರುತಿ ಮತ್ತು ಶೆಫ್ ಕೌಶಿಕ್ ಅವರು ‘ಕ್ವಾಟ್ಲೆ ಕಿಚನ್’ ತೀರ್ಪುಗಾರರಾಗಿರುತ್ತಾರೆ. ಈ ಕಾರ್ಯಕ್ರಮವನ್ನು ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ಅವರು ನಡೆಸಿಕೊಡುತ್ತಿದ್ದಾರೆ.
ಇದನ್ನೂ ಓದಿ: ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು; ಟಾಪ್ 5 ಸೀರಿಯಲ್ ಲಿಸ್ಟ್ ಇಲ್ಲಿದೆ
ಬೆಳ್ಳುಳ್ಳಿ ಕಬಾಬ್ ಚಂದ್ರು, ದಿಲೀಪ್ ಶೆಟ್ಟಿ, ಆರ್.ಕೆ. ಚಂದನ್, ರಾಘವೇಂದ್ರ, ಕೆಂಪಮ್ಮ, ಕಾವ್ಯ ಗೌಡ, ಪ್ರೇರಣ ಕಂಬಮ್, ಶಿಲ್ಪಾ ಕಾಮತ್, ಸೋನಿಯಾ ಪೊನ್ನಮ್ಮ, ಶರ್ಮಿತಾ ಗೌಡ ಅವರು ಈ ಕಾರ್ಯಕ್ರಮದಲ್ಲಿ ಕುಕ್‌ಗಳಾಗಿ ಭಾಗವಸುತ್ತಿದ್ದಾರೆ. ಲ್ಯಾಗ್ ಮಂಜು, ತುಕಾಲಿ ಸಂತೋಷ್, ಧನರಾಜ್ ಆಚಾರ್, ನಿವೇದಿತಾ ಗೌಡ, ಸೂರಜ್, ಪ್ರಶಾಂತ್, ಗಿಲ್ಲಿ ನಟ, ವಾಣಿ ಗೌಡ, ಸೋನಿ ಮುಲೆವ, ದಿಶಾ ಉಮೇಶ್ ಅವರು ಕ್ವಾಟ್ಲೆ ಕೊಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








