ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ನಂಜ-ಪುಟ್ಮಲ್ಲಿ ಮೋಡಿ; ಉಮಾಶ್ರೀ ಜತೆ ರವಿಚಂದ್ರನ್
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಜನಮೆಚ್ಚುಗೆ ಗಳಿಸಿ ಮುನ್ನುಗ್ಗುತ್ತಿದೆ. ಈ ಕಥೆಯ ಪ್ರಮುಖ ಘಟ್ಟದಲ್ಲಿ ಕೌತುಕ ಹೆಚ್ಚಾಗಿದೆ. ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಕೂಡ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಪುಟ್ಟಕ್ಕನ ಕಥೆಯಲ್ಲಿ ಪುಟ್ನಂಜ ಬಂದಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಆ ಬಗ್ಗೆ ಇಲ್ಲಿದೆ ವಿವರ..

ಜೀ ಕನ್ನಡ ವಾಹಿನಿಯಲ್ಲಿ ಸಂಜೆ 6.30ಕ್ಕೆ ಪ್ರಸಾರವಾಗುವ ಅತ್ಯಂತ ಯಶಸ್ವಿ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’. ಪ್ರಸಾರದ ಮೊದಲ ವಾರದಲ್ಲಿ ಅತೀ ಹೆಚ್ಚು, ಅಂದರೆ 13.5 ಟಿ.ಆರ್.ಪಿ ಪಡೆದು ಕನ್ನಡಿಗರ ಮನಸುಗಳನ್ನ ಗೆದ್ದ ಖ್ಯಾತಿ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿಯದು. ಇದೀಗ 900 ಸಂಚಿಕೆಗಳನ್ನು ಪೂರೈಸಿ ಸಾವಿರ ಸಂಚಿಕೆಗಳತ್ತ ಹೆಜ್ಜೆ ಇಡುತ್ತಿದ್ದರೂ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದೆ ಮುನ್ನುಗ್ಗುತ್ತಿದೆ. ‘ಹೆಣ್ಣು ಮಕ್ಕಳ ಹೆತ್ತೋರು ಎಲ್ಲ ದೇವರಿಗೂ ದೊಡ್ಡೋರು’ ಎನ್ನುವ ಈ ಧಾರಾವಾಹಿಯ ಹಾಡಿನ ಸಾಲು ಪುಟ್ಟಕ್ಕನ ಕಥೆಯ ಸಾರವನ್ನು ತೋರಿಸುತ್ತದೆ.
ಗಂಡು ಮಗು ಆಗಿಲ್ಲ ಎನ್ನುವ ಕಾರಣಕ್ಕೆ ಗಂಡ ಗೋಪಾಲ ಪುಟ್ಟಕ್ಕನನ್ನು ಬಿಟ್ಟು ಹೋಗುತ್ತಾನೆ. ತಂದೆ ಇಲ್ಲದೆ ತಬ್ಬಲಿಯಾದ ಮೂರು ಹೆಣ್ಣು ಮಕ್ಕಳನ್ನು ಹೆಗಲಿಗೆ ಕಟ್ಟಿಕೊಂಡು, ಅವರಿಗೆ ಬದುಕಿನ ದಾರಿ ತೋರಿಸಲು ಹೋರಾಡುವ ದಿಟ್ಟ ಮಹಿಳೆಯ ಕಥೆಯೇ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ. ಧಾರಾವಾಹಿಯ ಮುಖ್ಯ ಪಾತ್ರವಾದ ‘ಪುಟ್ಟಕ್ಕ’ನ ಪಾತ್ರವನ್ನು ಕನ್ನಡದ ಖ್ಯಾತ ನಟಿ ಉಮಾಶ್ರೀ ಅವರು ಮಾಡುತ್ತಿದ್ದಾರೆ. ಪುಟ್ಟಕ್ಕನಿಗೆ ಜೊತೆಯಾಗಿ ನಿಂತವರು ಮಗಳು ಸಹನಾ, ಸ್ನೇಹಾ, ಸುಮಾ. ಗೆಳತಿ ಬಂಗಾರಮ್ಮ. ಅಳಿಯ ಕಂಠಿ ಮತ್ತಿತರ ಪಾತ್ರ.
ಇದೀಗ ಈ ಧಾರಾವಾಹಿ ಮಹತ್ತರ ಘಟ್ಟದಲ್ಲಿ ಬಂದು ನಿಂತಿದೆ. ತನ್ನ ಆಸೆ, ಕನಸಿನಂತೆ ಜಿಲ್ಲಾಧಿಕಾರಿ ಆಗಿದ್ದ ಸ್ನೇಹಾ, ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಳು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಆಗಿದ್ದ ಅವಳ ಮೇಲೆ ನಿಧನದ ಬಳಿಕವೂ ಅವ್ಯವಹಾರದ ಆರೋಪ ಬಂದಿದ್ದು, ಮಗಳ ಪರವಾಗಿ ಪುಟ್ಟಕ್ಕ ಹೋರಾಟಕ್ಕೆ ಮುಂದಾಗಿದ್ದಾಳೆ. ಮಗಳು ಸ್ನೇಹಾ ಮೇಲಿನ ಸುಳ್ಳು ಆರೋಪಕ್ಕೆ ಪ್ರತಿಯಾಗಿ ಪಾದಯಾತ್ರೆ ಮಾಡುತ್ತಿದ್ದು, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾಳೆ.
ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಗುಡ್ಬೈ ಹೇಳಿದ ಸಂಜನಾ ಈಗೇನು ಮಾಡ್ತಿದ್ದಾರೆ?
ಮಗಳಿಗೆ ಅಂಟಿದ ಕಳಂಕ ತೊಳೆಯುವ ಈ ಕಾರ್ಯಕ್ಕೆ ಯಾರಿಂದಲೂ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಹೀಗೆ ಬೇಸತ್ತಿರುವ ಪುಟ್ಟಕ್ಕನಿಗೆ ಸಾಥ್ ಕೊಡಲು ‘ಕ್ರೇಜಿ ಸ್ಟಾರ್ ರವಿಚಂದ್ರನ್’ ಮುಂದಾಗಿದ್ದಾರೆ. ಜಸ್ಟಿಸ್ ಫಾರ್ ಸ್ನೇಹಾ ಹೋರಾಟಕ್ಕೆ ಪುಟ್ನಂಜ ಕೈ ಜೋಡಿಸಿದ್ದಾರೆ. ಪುಟ್ನಂಜ ಸಿನಿಮಾದಲ್ಲಿ ಮೋಡಿ ಮಾಡಿದ್ದ ಉಮಾಶ್ರೀ ಮತ್ತು ರವಿಚಂದ್ರನ್, ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಅವರಿಂದ ಪುಟ್ಟಕ್ಕನ ಹೋರಾಟಕ್ಕೆ ನ್ಯಾಯ ಸಿಗುತ್ತಾ? ಮಗಳಿಗೆ ಅಂಟಿದ ಕಳಂಕ ಹೋಗುತ್ತಾ ಎನ್ನೋದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.