ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ (Chetana Raj) ಅವರು ಅಕಾಲಿಕ ಮರಣ ಹೊಂದಿರುವುದು ನೋವಿನ ಸಂಗತಿ. ಕೇವಲ 22ನೇ ವಯಸ್ಸಿನಲ್ಲಿಯೇ ಅವರು ಇಹಲೋಕ ತ್ಯಜಿಸಿದ್ದಾರೆ. ದೇಹದ ಫ್ಯಾಟ್ ಕರಗಿಸುವ ಸಲುವಾಗಿ ಅವರು ಫ್ಯಾಟ್ ಸರ್ಜರಿಗೆ ಒಳಗಾದರು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಅವರು ಸಾವಿಗೆ ಈಡಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಕುರಿತು ನಟಿ ರೂಪಿಕಾ (Roopika) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಿರುತೆರೆಯ ‘ದೊರೆಸಾನಿ’ ಸೀರಿಯಲ್ನಲ್ಲಿ ಚೇತನಾ ರಾಜ್ ನಟಿಸಿದ್ದರು. ಆ ಧಾರಾವಾಹಿಯಲ್ಲಿ ರೂಪಿಕಾ ಕೂಡ ಅಭಿನಯಿಸುತ್ತಿದ್ದಾರೆ. ಚೇತನಾ ರಾಜ್ ಸಾವಿನ (Chetana Raj Death) ಬಗ್ಗೆ ರೂಪಿಕಾ ಮರುಕ ವ್ಯಕ್ತಪಡಿಸಿದ್ದಾರೆ. ಯಶಸ್ಸಿಗಾಗಿ ನಟಿಯರು ಶಾರ್ಟ್ ಕಟ್ ಬಳಸಬೇಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ರೂಪಿಕಾ ಅವರು ಸಾಕಷ್ಟು ಅನುಭವ ಪಡೆದಿದ್ದಾರೆ. ಅದರ ಆಧಾರದ ಮೇಲೆ ಅವರು ಚೇತನಾ ರಾಜ್ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ‘ಇಂದು ಬೆಳಗ್ಗೆ ನಾನು ಶೂಟಿಂಗ್ಗೆ ಬರುವಾಗ ಚೇತನಾ ರಾಜ್ ಇನ್ನಿಲ್ಲ ಎಂಬ ಸುದ್ದಿ ಗೊತ್ತಾಯಿತು. ಒಂದೆರಡು ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಸಾವಿಗೆ ಕಾರಣ ಏನೆಂಬುದು ತಿಳಿದಾಗ ನನಗೆ ಆಶ್ಚರ್ಯ ಆಗುತ್ತಿದೆ’ ಎಂದು ರೂಪಿಕಾ ಹೇಳಿದ್ದಾರೆ.
‘ಚೇತನಾ ರಾಜ್ ಚಿಕ್ಕ ಹುಡುಗಿ. ಅವರಿಗೆ ಕೇವಲ 21ರಿಂದ 22 ವರ್ಷ ವಯಸ್ಸು. ನೋಡಲು ತುಂಬ ಮುದ್ದಾಗಿದ್ದರು. ಕಲಾವಿದೆಗೆ ಫಿಟ್ನೆಸ್ ತುಂಬ ಮುಖ್ಯ. ಅದನ್ನು ನಾನು ಖಂಡಿತಾ ಒಪ್ಪುತ್ತೇನೆ. ತೆರೆಮೇಲೆ ಕಾಣಿಸಿಕೊಳ್ಳುವ ನಾವು ಫಿಟ್ ಆಗಿರಬೇಕು. ನಮ್ಮ ದೇಹ ಉತ್ತಮ ಶೇಪ್ನಲ್ಲಿ ಇರಬೇಕು ಎಂಬ ಆಸೆ ನಮಗೆ ಇರುತ್ತದೆ. ಆದರೆ ಅದಕ್ಕಾಗಿ ನಾವು ಅಡ್ಡ ಹಾದಿಯಲ್ಲಿ ಹೋಗುವುದನ್ನು ತಡೆಯಬೇಕು’ ಎಂಬುದು ರೂಪಿಕಾ ಅಭಿಪ್ರಾಯ.
ಒಂದು ಸಮಯದಲ್ಲಿ ರೂಪಿಕಾ ಅವರು ಕೂಡ ತುಂಬ ದಪ್ಪ ಇದ್ದರು. ನಂತರ 18 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡರು. ಅವರು ಅನುಸರಿಸಿದ ಮಾರ್ಗಗಳೇ ಬೇರೆ. ‘ಮೂರು ತಿಂಗಳು ನಾನು ವ್ಯಾಯಾಮ ಮತ್ತು ಡಯೆಟ್ ಮಾಡಿದೆ. ಆ ಟ್ರೀಟ್ಮೆಂಟ್ ಹಂಗಿರತ್ತೆ, ಈ ಟ್ರೀಟ್ಮೆಂಟ್ ಹಿಂಗಿರತ್ತೆ ಅಂತ ಎಲ್ಲರೂ ಹೇಳ್ತಾರೆ. ಒಬ್ಬಬ್ಬರ ದೇಹ ಒಂದೊಂದು ರೀತಿ ಇರುತ್ತದೆ. ವೈದ್ಯರ ಮೂಲಕ ಚಿಕಿತ್ಸೆ ಪಡೆದರೂ ಕೂಡ ಚೇತನಾ ರಾಜ್ ಅವರಿಗೆ ಈ ರೀತಿ ಆಗಿದೆ. ತಂದೆ-ತಾಯಿಗೂ ಗೊತ್ತಿಲ್ಲದೇ ಈ ರೀತಿ ಟ್ರೇಟ್ಮೆಂಟ್ ಮಾಡಿಸಿಕೊಂಡಿದ್ದು ಗಾಬರಿ ಆಗುವಂತಹ ಸಂಗತಿ’ ಎಂದು ರೂಪಿಕಾ ಹೇಳಿದ್ದಾರೆ.
‘20ರಿಂದ 25ನೇ ವಯಸ್ಸಿನವರೆಗೆ ಚಂಚಲ ಮನಸ್ಥಿತಿ ಇರುತ್ತದೆ. ಆದರೆ ಈಗ ನಷ್ಟ ಯಾರಿಗೆ ಹೇಳಿ? ಖಂಡಿತವಾಗಿಯೂ ಬೇಜಾರು ಆಗತ್ತೆ. ಸೀರಿಯಲ್, ಸಿನಿಮಾ ಮಾಡಬೇಕು ಎಂದು ದೊಡ್ಡ ಕನಸು ಇಟ್ಟುಕೊಂಡಿರುತ್ತಾರೆ. ಹೆಸರು ಮಾಡಬೇಕು ಎಂಬ ಆಸೆಗೋಸ್ಕರವೇ ಜನರು ಇಂಡಸ್ಟ್ರಿಗೆ ಬರುತ್ತಾರೆ. ಆದರೆ ಈ ರೀತಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದು ಗೊತ್ತಾದಾಗ ಅದನ್ನು ಒಪ್ಪಿಕೊಳ್ಳುವುದು ಕಷ್ಟ ಆಗುತ್ತದೆ. ಶಾರ್ಟ್ ಕಟ್ ದಾರಿಗಳು ಶಾಶ್ವತ ಅಲ್ಲ. ತಾಳ್ಮೆ ಇರಲಿ. ಪ್ರಾರಂಭದಲ್ಲಿ ಯಾರಿಗೂ ಯಶಸ್ಸು ಸಿಗುವುದಿಲ್ಲ. ಒಂದಷ್ಟು ಹಂತಗಳನ್ನು ದಾಟಿಕೊಂಡು ಬರಲೇಬೇಕು. ಸರಿಯಾಗಿ ಊಟ ಮಾಡಿ ವ್ಯಾಯಾಮಾ ಮಾಡಿದರೆ ಫಿಟ್ ಆಗಿ ಇರಬಹುದು. ಯಾರೋ ಏನೋ ಹೇಳುತ್ತಾರೆ ಅಂತ ಕೇಳಬಾರದು. ನಿಮ್ಮನ್ನು ನೀವು ಪ್ರೀತಿಸಬೇಕು. ತಾಳ್ಮೆ ಇಲ್ಲದವರು ಈ ಕ್ಷೇತ್ರಕ್ಕೆ ಬರಲೇಬೇಡಿ’ ಎಂದಿದ್ದಾರೆ ರೂಪಿಕಾ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:41 pm, Tue, 17 May 22