ಪ್ರತಾಪ್​ ಎಲಿಮಿನೇಟ್​ ಆದ್ರೂ ಹೊರಗೆ ಹೋಗಲಿಲ್ಲ: ಸುದೀಪ್​ ಕಾರಣದಿಂದ ನಡೆಯಿತು ಅಚ್ಚರಿ

6 ಮತ​ಗಳಲ್ಲಿ 3 ಮತಗಳು ಡ್ರೋನ್​ ಪ್ರತಾಪ್​ಗೆ ಬಂದಿದ್ದರಿಂದ ಅವರು ಎಲಿಮಿನೇಟ್​ ಆಗಬೇಕಾಯಿತು. ‘ಬಹುಮತದ ಅನುಸಾರ ಪ್ರತಾಪ್​ ಅವರ ಪಯಣ ಈ ಮನೆಯಲ್ಲಿ ಇಲ್ಲಿಗೆ ಮುಕ್ತಾಯ ಆಗುತ್ತದೆ. ನೀವು ಮುಖ್ಯ ದ್ವಾರದಿಂದ ಹೊರಬರಲು 5 ನಿಮಿಷ ಅವಕಾಶ ಇದೆ’ ಎಂದು ಬಿಗ್​ ಬಾಸ್​ ಘೋಷಿಸಿದರು. ಆದರೆ ಪ್ರತಾಪ್​ಗೆ ಸುದೀಪ್​ ಕಡೆಯಿಂದ ದೊಡ್ಡ ಉಡುಗೊರೆ ಸಿಕ್ಕಿತು.

ಪ್ರತಾಪ್​ ಎಲಿಮಿನೇಟ್​ ಆದ್ರೂ ಹೊರಗೆ ಹೋಗಲಿಲ್ಲ: ಸುದೀಪ್​ ಕಾರಣದಿಂದ ನಡೆಯಿತು ಅಚ್ಚರಿ
ಡ್ರೋನ್​ ಪ್ರತಾಪ್​, ಕಿಚ್ಚ ಸುದೀಪ್​

Updated on: Jan 25, 2024 | 10:16 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (BBK 10) ಶೋನಲ್ಲಿ ಹಲವು ಟ್ವಿಸ್ಟ್​ಗಳು ಎದುರಾಗಿವೆ. ಕೊನೇ ವಾರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಡ್ರೋನ್ ಪ್ರತಾಪ್​ ಅವರು ಎಲಿಮಿನೇಟ್​ ಆದರೂ ಕೂಡ ಬಿಗ್​ ಬಾಸ್​ ಮನೆಯಿಂದ ಹೊರಗೆ ಬರಲಿಲ್ಲ. ಈ ಅಚ್ಚರಿಗೆ ಕಿಚ್ಚ ಸುದೀಪ್​ (Kichcha Sudeep) ಅವರೇ ಕಾರಣ. ಫಿನಾಲೆ ವಾರದಲ್ಲಿ ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ, ವಿನಯ್​ ಗೌಡ ಹಾಗೂ ಡ್ರೋನ್​ ಪ್ರತಾಪ್​ (Drone Prathap) ಇದ್ದಾರೆ. ಮಿಡ್​ ವೀಕ್ ಎಲಿಮಿನೇಷನ್​ನಲ್ಲಿ ಡ್ರೋನ್​ ಪ್ರತಾಪ್​ ಆಟ ಅಂತ್ಯವಾಗಬೇಕಿತ್ತು. ಆದರೆ ಬಿಗ್​ ಬಾಸ್​ ಒಂದು ಟ್ವಿಸ್ಟ್​ ನೀಡಿದರು.

ಎಲಿಮಿನೇಷನ್​ ನಡೆದಿದ್ದು ಹೇಗೆ?

‘ಮೊದಲ ಬಾರಿಗೆ ಮನೆಯ ಸದಸ್ಯರ ವೋಟ್​ನ ಆಧಾರದಲ್ಲಿ ನಿಮ್ಮ ಪೈಕಿ ಒಬ್ಬರು ಹೊರಗೆ ಹೋಗಲಿದ್ದಾರೆ. ಫಿನಾಲೆಗೆ ಕಾಲಿಡಲು ಅರ್ಹತೆ ಇಲ್ಲದ ಒಬ್ಬ ಸದಸ್ಯನ ಹೆಸರನ್ನು ಸೂಕ್ತ ಕಾರಣ ನೀಡಿ ಸೂಚಿಸಿ’ ಎಂದು ಬಿಗ್​ ಬಾಸ್​ ಕಡೆಯಿಂದ ಆದೇಶ ಬಂತು. ತುಕಾಲಿ ಸಂತೋಷ್​, ಕಾರ್ತಿಕ್​ ಮಹೇಶ್​, ವಿನಯ್​ ಗೌಡ ಅವರು ಡ್ರೋನ್​ ಪ್ರತಾಪ್​ ಹೆಸರನ್ನು ಸೂಚಿಸಿದರು.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ಗೆ ಮನೆಮಂದಿ ಚುಚ್ಚುಮಾತು; ಎಲ್ಲವನ್ನೂ ಕೇಳಿಸಿಕೊಂಡು ಕಣ್ಣೀರು ಹಾಕಿದ ಸಂಗೀತಾ

6 ವೋಟ್​ಗಳಲ್ಲಿ 3 ವೋಟ್​ ಡ್ರೋನ್​ ಪ್ರತಾಪ್​ಗೆ ಬಂದಿದ್ದರಿಂದ ಅವರು ಎಲಿಮಿನೇಟ್​ ಆಗಬೇಕಾಯಿತು. ‘ಬಹುಮತದ ಅನುಸಾರ ಪ್ರತಾಪ್​ ಅವರ ಪಯಣ ಈ ಮನೆಯಲ್ಲಿ ಇಲ್ಲಿಗೆ ಮುಕ್ತಾಯ ಆಗುತ್ತದೆ. ನೀವು ಮುಖ್ಯ ದ್ವಾರದಿಂದ ಹೊರಬರಲು 5 ನಿಮಿಷ ಅವಕಾಶ ಇದೆ’ ಎಂದು ಬಿಗ್​ ಬಾಸ್​ ಘೋಷಿಸಿದರು. ಇದನ್ನು ಕೇಳಿ ಡ್ರೋನ್​ ಪ್ರತಾಪ್​ ಗಳಗಳನೆ ಅತ್ತರು. ‘ಇದು ನ್ಯಾಯವಲ್ಲ’ ಎಂದು ಸಂಗೀತಾ ಶೃಂಗೇರಿ ಕೂಡ ಕಣ್ಣೀರು ಹಾಕಿದರು.

ಡ್ರೋನ್​ ಪ್ರತಾಪ್​ ಮಾತು:

‘ಜನರ ಪ್ರೀತಿ ಸಿಕ್ಕಿದೆ ಎಂದು ಭಾವಿಸಿದ್ದೇನೆ. ನನ್ನ ವರ್ತನೆಗಳನ್ನು ಬಿಗ್​ ಬಾಸ್​ ತಂಡ ಸಹಿಸಿಕೊಂಡಿದೆ. ಅದಕ್ಕೆ ನಾನು ಋಣಿ. ಅಪ್ಪ-ಅವ್ವ, ಪುಟ್ಟಿಗೆ ನನ್ನ ಆಟ ಖುಷಿ ನೀಡಿದೆ ಎಂದುಕೊಳ್ಳುತ್ತೇನೆ. ಸುದೀಪ್​ ಸರ್​ಗೆ ಧನ್ಯವಾದ. ಅಭಿಮಾನ ತೋರಿಸಿದ ಜನತೆಗೆ ಧನ್ಯವಾದ’ ಎಂದು ಹೇಳುವ ಮೂಲಕ ಡ್ರೋನ್​ ಪ್ರತಾಪ್​ ಎಮೋಷನಲ್​ ಆದರು. ಇನ್ನುಳಿದ ಸದಸ್ಯರಿಗೆ ಅವರು ‘ಆಲ್​ ದಿ ಬೆಸ್ಟ್​’ ತಿಳಿಸಿದರು. ಬಳಿಕ ಅವರು ಮುಖ್ಯದ್ವಾರಕ್ಕೆ ಬಂದರು. ಅಲ್ಲಿ ಅವರಿಗೆ ಸರ್ಪ್ರೈಸ್​ ಕಾದಿತ್ತು.

ಇದನ್ನೂ ಓದಿ: ‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?

ಕಾದಿತ್ತು ಟ್ವಿಸ್ಟ್​:

ಡ್ರೋನ್​ ಪ್ರತಾಪ್​ ಅವರು ಮುಖ್ಯದ್ವಾರದ ಬಳಿ ಬಂದರೂ ಕೂಡ ಬಾಗಿಲು ತೆರೆಯಲಿಲ್ಲ. ಅಲ್ಲಿ ಪ್ರತಾಪ್​ಗಾಗಿ ಒಂದು ಲಕೋಟೆ ಇಡಲಾಗಿತ್ತು. ಅದನ್ನು ತೆರೆದು ಓದುವಂತೆ ಸೂಚಿಸಲಾಯಿತು. ‘ಈ ವಾರ ಮಿಡ್​ ವೀಕ್​ ಎಲಿಮಿನೇಷನ್​ ಇರುವುದಿಲ್ಲ’ ಎಂದು ಅದರಲ್ಲಿ ಬರೆದಿತ್ತು. ಆ ಸಂದೇಶ ಓದಿ ಡ್ರೋನ್​ ಪ್ರತಾಪ್​ ಸಖತ್​ ಖುಷಿಪಟ್ಟರು. ಮಿಡ್​ ವೀಕ್​ ಎಲಿಮಿನೇಷನ್​ ಇರುವುದಿಲ್ಲ ಎಂಬುದು ಸುದೀಪ್​ ಅವರ ನಿರ್ಧಾರ. ‘ಈ ಸೀಸನ್​ನಲ್ಲಿ ಟಾಪ್​ 5 ಬದಲಿಗೆ, ಟಾಪ್​ 6 ಸದಸ್ಯರು ಫಿನಾಲೆಗೆ ತಲುಪುತ್ತಾರೆ. ಇದು ಸುದೀಪ್​ ಅವರ ಉಡುಗೊರೆ’ ಎಂದು ಬಿಗ್​ ಬಾಸ್​ ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us