Nandini CM: ಸರ್ಕಾರಿ ಕೆಲಸದ ಅವಕಾಶ ಇದ್ದರೂ ಇಷ್ಟವಿಲ್ಲದೇ ನೇಣಿಗೆ ಶರಣಾದ ನಟಿ ನಂದಿನಿ ಸಿಎಂ
Nandini CM Death: ‘ಗೌರಿ’ ಸೀರಿಯಲ್ ನಟಿ ನಂದಿಸಿ ಸಿಎಂ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಲಾಗಿದೆ. ಸಾವಿನ ಕುರಿತು ತನಿಖೆ ಶುರುವಾಗಿದೆ. ನಂದಿಸಿ ನಿಧನದ ಬಗ್ಗೆ ಅವರ ಸ್ನೇಹಿತೆ ತನುಜಾ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ..

ಕನ್ನಡ ಕಿರುತೆರೆ ಲೋಕದಲ್ಲಿ ಹೆಸರು ಮಾಡಿ, ತಮಿಳಿನ ‘ಗೌರಿ’ (Gauri Serial) ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡುತ್ತಿದ್ದ ನಟಿ ನಂದಿನಿ ಸಿಎಂ ಅವರು ಆತ್ಮಹತ್ಯೆ ಮಾಡಿಕೊಂಡು ನಿಧನರಾಗಿದ್ದಾರೆ. ಡಿಸೆಂಬರ್ 28ರ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರಿನ ಕೆಂಗೇರಿ ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ನಂದಿನಿ ಸಿಎಂ ಅವರು ಆತ್ಮಹತ್ಯೆ ಮಾಡಿಕೊಂಡರು. ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’, ‘ಅಣ್ಣ-ತಂಗಿ’ ಮುಂತಾದ ಸೀರಿಯಲ್ಗಳಲ್ಲಿ ಅವರು ನಟಿಸಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ನಂದಿನಿ ಸಿಎಂ (Nandini CM) ಬಗ್ಗೆ ಅವರ ಸ್ನೇಹಿತೆ ತನುಜಾ ಪ್ರತಿಕ್ರಿಯೆ ನೀಡಿದ್ದಾರೆ.
‘ನಿಜವಾದ ಕಾರಣ ಏನು ಎಂಬುದು ಗೊತ್ತಿಲ್ಲ. ಅವರ ತಂದೆ ತೀರಿಕೊಂಡಿದ್ದರು. ತಂದೆಯ ಸರ್ಕಾರಿ ಕೆಲಸ ಇವಳಿಗೆ ಬಂದಿತ್ತು. ಆದರೆ ಆ ಕೆಲಸ ಮಾಡಲು ನಂದಿನಿಗೆ ಇಷ್ಟ ಇರಲಿಲ್ಲ. 10 ವರ್ಷದಿಂದ ಕಷ್ಟಪಟ್ಟು ನಟನೆಯಲ್ಲಿ ಈ ಸ್ಥಾನಕ್ಕೆ ಬಂದಿದ್ದಳು. ಹಾಗಾಗಿ ಸರ್ಕಾರಿ ಕೆಲಸ ಬೇಡ ಅಂತ ಹೇಳುತ್ತಿದ್ದರು. ಸರ್ಕಾರಿ ಕೆಲಸಕ್ಕೆ ಸೇರು ಎಂದು ಕುಟುಂಬದವರು ಹೇಳಿದ್ದರು. ಚಿತ್ರರಂಗ ಬೇಡ ಅಂತ ಮನೆಯವರು ಹೇಳಿದ್ದರು. ಆ ಬಗ್ಗೆ ಮಾತುಕಥೆ ನಡೆಯುತ್ತಿತ್ತು. ಹಾಗಾಗಿ ಖಿನ್ನತೆಯಲ್ಲಿ ಇದ್ದಳು’ ಎಂದು ತನುಜಾ ಹೇಳಿದ್ದಾರೆ.
‘ಯಾಕೆ ಈ ಮಾಡಿಕೊಂಡಳು ಎಂಬುದು ಗೊತ್ತಿಲ್ಲ. ನಾನು ಅವಳ ಜೊತೆ ಮಾತನಾಡಿ 3 ದಿನ ಆಯಿತು. ನಾನು ಮಡಿಕೇರಿಯಲ್ಲಿ ಇದ್ದಾಗ ಸಾವಿನ ಸುದ್ದಿ ಬಂತು. ನಾನು ಹೊರಟು ಬಂದೆ. ತಾಯಿ ಹಾಗೂ ಕುಟುಂಬದ ಸದಸ್ಯರು ಬಂದು ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋದರು. ನನಗೆ ಕಳೆದ 5 ವರ್ಷದಿಂದ ಗೊತ್ತಿದ್ದ ಹುಡುಗಿ. ಯಾಕೆ ಈ ನಿರ್ಧಾರ ತೆಗೆದುಕೊಂಡಳೋ ಗೊತ್ತಿಲ್ಲ. ಕೊನೇ ಬಾರಿ ನನಗೆ ಅವಳು ಕರೆ ಮಾಡಬಹುದಿತ್ತು’ ಎಂದಿದ್ದಾರೆ ತನುಜಾ.
‘ಇನ್ನೂ ಒಳ್ಳೆಯ ಪ್ರಾಜೆಕ್ಟ್ ಮಾಡಬೇಕು ಎಂಬ ಗುರಿ ಅವಳಿಗೆ ಇತ್ತು. ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರ ಅಲ್ಲ. ಅವಳು ಇರಬಹುದಿತ್ತು. ಈಗ ಏನು ಸಾಧಿಸಿದಂತೆ ಆಯಿತು? ಏನೂ ಸಾಧನೆ ಮಾಡಿದಂತೆ ಆಗಲೇ ಇಲ್ಲ. ಬದುಕುವ ಮನಸ್ಸು ಮಾಡಬಹುದಿತ್ತು’ ಎಂದು ನಂದಿನಿ ಸ್ನೇಹಿತೆ ತನುಜಾ ಅವರು ದುಃಖ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಗೌರಿ’ ಧಾರಾವಾಹಿ ನಟಿ ನಂದಿನಿ ನಿಧನ: ಬೆಂಗಳೂರಲ್ಲಿ ದುರಂತ ಅಂತ್ಯ
ಡಿಸೆಂಬರ್ 29ರ ಬೆಳಗಿನ ಜಾವ ಆರ್ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯಿತು. ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ ವೈಯುಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಕೇಳಿಬಂದಿದೆ. ಅಲ್ಲದೇ ಅವರಿಗೆ ಆರೋಗ್ಯ ಸಮಸ್ಯೆ ಕೂಡ ಇತ್ತು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



