ಪ್ರತಿ ಬಾರಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಆದವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಗುತ್ತವೆ. ಅಲ್ಲದೇ ಇಮ್ಯುನಿಟಿ ಸಿಗುತ್ತದೆ. ಅದಕ್ಕಾಗಿ ಎಲ್ಲರೂ ಕ್ಯಾಪ್ಟನ್ ಆಗಲು ಇಷ್ಟಪಡುತ್ತಾರೆ. ಆದರೆ ಈ ಸೀಸನ್ನಲ್ಲಿ ಮೊದಲ ಕ್ಯಾಪ್ಟನ್ ಆದ ಹಂಸಾ ಅವರು ಸಿಕ್ಕಾಪಟ್ಟೆ ಪೇಜಿಗೆ ಸಿಲುಕಿದ್ದಾರೆ. ಎಲ್ಲ ಟಾಸ್ಕ್ನ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ. ಪ್ರತಿ ಟಾಸ್ಕ್ನಲ್ಲಿಯೂ ಬಿಗ್ ಬಾಸ್ ಮನೆಯ ಸದಸ್ಯರು ಇಲ್ಲಸಲ್ಲದ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಹಂಸಾ ಅವರೇ ಹೊಣೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ದಿನವೂ ಹಂಸಾ ಅವರು ಕಣ್ಣೀರು ಹಾಕುತ್ತಾ ಕಿರಿಕಿರಿ ಅನುಭವಿಸುವಂತಾಗಿದೆ.
ಜಗಳ ಆಡುವುದನ್ನೇ ಆಟದ ತಂತ್ರಗಾರಿಕೆ ಎಂದು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನ ಬಹುತೇಕ ಎಲ್ಲ ಸ್ಪರ್ಧಿಗಳು ಅಂದುಕೊಂಡಂತಿದೆ. ಹಾಗಾಗಿ ಅವಕಾಶ ಸಿಕ್ಕಾಗಲೆಲ್ಲ ಸ್ಪರ್ಧಿಗಳು ಜಗಳ ಆಡುತ್ತಿದ್ದಾರೆ. ಟಾಸ್ಕ್ ಆಡುವಾಗ ಬೇಕುಬೇಕಂತಲೇ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಆಟ ಕೆಟ್ಟು ಹೋಗುತ್ತಿದೆ. ಅಂತಿಮವಾಗಿ ಕ್ಯಾಪ್ಟನ್ ನಿವೇಚನೆಗೆ ಬಿಡಲಾಗುತ್ತದೆ. ಆಗ ಹಂಸಾಗೆ ನಿಜವಾದ ಕಷ್ಟ ಎದುರಾಗುತ್ತದೆ.
ತಮ್ಮ ವಿವೇಚನೆ ಬಳಸಿ ಹಂಸಾ ಅಂತಿಮ ತೀರ್ಮಾನ ನೀಡಿದಾಗ ಸ್ವರ್ಗದವರಾಗಲಿ, ನರಕದವರಾಗಲಿ ಒಪ್ಪಿಕೊಳ್ಳುವುದೇ ಇಲ್ಲ. ಟಾಸ್ಕ್ನ ನಿಯಮಗಳನ್ನು ಸ್ಪರ್ಧಿಗಳು ಅರ್ಧಂಬರ್ಧ ಅರ್ಥ ಮಾಡಿಕೊಂಡು ಇಡೀ ಆಟವನ್ನು ಕೆಡಿಸುತ್ತಿದ್ದಾರೆ. ಟಾಸ್ಕ್ ಉಸ್ತುವಾರಿ ಹೊತ್ತ ಹಂಸಾ ಅವರಿಗೆ ಜಗಳ ಪರಿಹರಿಸುವುದೇ ಕೆಲಸ ಆಗಿ ಬಿಟ್ಟಿದೆ. ಇದರಿಂದ ಸ್ವರ್ಗದವರಿಂದಲೂ, ನರಕದವರಿಂದಲೂ ಹಂಸಾ ಟೀಕೆಗೆ ಗುರಿ ಆಗುವಂತಾಗಿದೆ.
ಇದನ್ನೂ ಓದಿ: ‘ಏನೇನೋ ಬೊಗಳುತ್ತಾನೆ’: ಪದೇಪದೇ ಕೆಣಕಿದ ಜಗದೀಶ್ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಈ ಹಿಂದಿನ ಸೀಸನ್ಗಳಲ್ಲಿ ಮೊದಲ ಎರಡು ವಾರ ಮನೆಯಲ್ಲಿ ಸಾಧ್ಯವಾದಷ್ಟು ಶಾಂತಿ ತುಂಬಿರುತ್ತಿತ್ತು. ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಈ ಸೀಸನ್ನಲ್ಲಿ ಹಾಗಿಲ್ಲ. ಆರಂಭದಿಂದಲೇ ಜಗಳಗಳು ಅತಿಯಾಗಿವೆ. ಹೆಜ್ಜೆ ಹೆಜ್ಜೆಗೂ ಗಲಾಟೆ ನಡೆಯುತ್ತಿದೆ. ಚಿಕ್ಕ ವಿಷಯವನ್ನು ಕೂಡ ಏರು ಧ್ವನಿಯಲ್ಲೇ ಹೇಳಲಾಗುತ್ತಿದೆ. ಬೇಕಂತಲೇ ಗೊಂದಲ ಸೃಷ್ಟಿಸಿ, ಅದರಿಂದ ಜಗಳ ಎಬ್ಬಿಸಿ ಇಡೀ ಮನೆಯ ಶಾಂತಿ ಕೆಡಿಸಲಾಗುತ್ತಿದೆ. ಇದರಿಂದ ಕಿರಿಕಿರಿ ಆಗಿರುವ ಹಂಸಾ ಅವರು ‘ಈ ವಾರ ನಾನೇ ಹೊರಗೆ ಹೋಗುತ್ತೇನೆ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.