
‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಇದೀಗ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಹಕ್ಕುಗಳ ವಿಷಯವಾಗಿ ಎರಡು ‘ತಂಡ’ಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಶೀಘ್ರವೇ ಇದು ಬಹಿರಂಗ ವಿವಾದವಾಗುವ ಮುನ್ಸೂಚನೆ ದೊರೆಯುತ್ತಿದೆ.
‘ಜೈ ಹನುಮಾನ್’ ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ವರ್ಮಾ ಈ ಹಿಂದೆ ‘ಹನುಮ್ಯಾನ್’ ಸಿನಿಮಾ ನಿರ್ದೇಶಿಸಿದ್ದರು. ತೇಜ್ ಸಜ್ಜಾ ನಾಯಕನಾಗಿ ನಟಿಸಿದ್ದ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಹಿಟ್ ಆಗಿತ್ತು. ಸಿನಿಮಾವನ್ನು ಪ್ರೈಂ ಶೋ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಾಣ ಮಾಡಿತ್ತು. ಆದರೆ ಸಿನಿಮಾ ಹಿಟ್ ಆದ ಬಳಿಕ ನಿರ್ದೇಶಕ ಪ್ರಶಾಂತ್ ವರ್ಮಾ ಹಾಗೂ ನಿರ್ಮಾಪಕರಾದ ನಿರಂಜನ್ ರೆಡ್ಡಿ, ಚೈತನ್ಯಾ ರೆಡ್ಡಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು. ಪ್ರಶಾಂತ್ ವರ್ಮಾ ಅವರು ಪ್ರೈಂ ಶೋ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಯಿಂದ ದೂರಾಗಿ ಮೈತ್ರಿ ಮೂವಿ ಮೇಕರ್ಸ್ ಜೊತೆ ಸೇರಿ ರಿಷಬ್ ಶೆಟ್ಟಿ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ‘ಜೈ ಹನುಮಾನ್’ ಘೋಷಿಸಿದರು.
ಆದರೆ ‘ಜೈ ಹನುಮಾನ್’ ಸಿನಿಮಾದ ಹಕ್ಕು ಪ್ರೈಂ ಶೋ ಎಂಟರ್ಟೈನ್ಮೆಂಟ್ ಬಳಿಯೇ ಇದೆ ಎನ್ನಲಾಗಿತ್ತು. ಬಳಿಕ ಮೈತ್ರಿ ಮೂವಿ ಮೇಕರ್ಸ್ ಮಧ್ಯಪ್ರವೇಶಿಸಿ ಸಂಧಾನ ನಡೆಸಿ, ಪ್ರಶಾಂತ್ ವರ್ಮಾಗೆ ನೀಡಲಾಗಿದ್ದು ಎನ್ನಲಾದ 23 ಕೋಟಿ ಹಣವನ್ನು ಮರುಪಾವತಿಸಿ, ‘ಹನುಮಾನ್’ ಸಿನಿಮಾದ ಕತೆಯನ್ನು ಬಳಸುವಂತಿಲ್ಲ ಎಂದೆಲ್ಲ ಒಪ್ಪಂದ ಆಗಿತ್ತು. ಆದರೆ ಇದೀಗ ಪ್ರೈಂ ಶೋ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಯು ‘ಹನುಮ್ಯಾನ್ 2’ ಸಿನಿಮಾ ಘೋಷಣೆ ಮಾಡಿದೆ. ಇದೀಗ ಮತ್ತೆ ಹಕ್ಕುಗಳ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ:ಗೋವಾ ಚಿತ್ರೋತ್ಸವ ಸಮಾರೋಪ: ನಟ ರಿಷಬ್ ಶೆಟ್ಟಿ ವಿಶೇಷ ಅತಿಥಿ
ಈ ಕುರಿತಾಗಿ ಮಾತನಾಡಿರುವ ಚೈತನ್ಯಾ ರೆಡ್ಡಿ, ‘ಹನುಮ್ಯಾನ್ 2’ ಸಿನಿಮಾ ಮಾಡಲು ಅಗತ್ಯವಾದ ದಾಖಲೆಗಳು ನಮ್ಮ ಬಳಿ ಇವೆ, ನಮ್ಮ ಬಳಿ ಇರುವ ದಾಖಲೆಗಳನ್ನು ನಾವು ಮಾಧ್ಯಮಗಳ ಮುಂದೆ ಹಾಜರುಪಡಿಸಲು ರೆಡಿ ಇದ್ದೇವೆ’ ಎಂದಿದ್ದಾರೆ. ಈ ಹಿಂದೆ ನಡೆದ ಸಂಧಾನದ ಪ್ರಕಾರ, ಪ್ರೈಂ ಶೋ ಎಂಟರ್ಟೈನ್ಮೆಂಟ್ ಅವರು ‘ಹನುಮಾನ್’ ಕತೆ ಆಧರಿಸಿದ ಸಿನಿಮಾ ಮಾಡುವಂತಿರಲಿಲ್ಲ. ಆದರೆ ಈಗ ಸಿನಿಮಾ ಘೋಷಣೆ ಮಾಡಿದೆ. ಈ ವಿಷಯ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಸಮಸ್ಯೆ ಆಗುವ ಸಾಧ್ಯತೆ ಇದೆ.
ಪ್ರಶಾಂತ್ ವರ್ಮಾ ಅವರ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದು, ಈ ಸಿನಿಮಾ ‘ಹನುಮ್ಯಾನ್’ ಸಿನಿಮಾದ ಮುಂದುವರಿದ ಭಾಗ ಎನ್ನಲಾಗುತ್ತಿದೆ. ‘ಹನುಮ್ಯಾನ್’ ಸಿನಿಮಾದಲ್ಲಿ ನಟಿಸಿದ್ದ ತೇಜ್ ಸಜ್ಜಾ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಾಮಿಕಾ ಗಬ್ಬಿ ಸಿನಿಮಾದ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಹನುಮ ಜಯಂತಿಗೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ