ಬಿಗ್ ಬಾಸ್ ಗೆದ್ದರೂ ಕುರಿ ಕಾಯುವ ಕಾಯಕ ಮುಂದುವರಿಸಲಿದ್ದಾರೆ ಹನುಮಂತ
ಬಿಗ್ ಬಾಸ್ ಕನ್ನಡ ಸೀಸನ್ 11 ರ ವಿಜೇತ ಹನುಮಂತ ಅವರು 50 ಲಕ್ಷ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿಯನ್ನು ಪಡೆದು ತಮ್ಮ ಹುಟ್ಟೂರಿಗೆ ಮರಳಿದ್ದಾರೆ. ಬಿಗ್ ಬಾಸ್ ನಂತರ ‘ಬಾಯ್ಸ್ vs ಗರ್ಲ್ಸ್’ ಶೋನಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಮಧ್ಯೆ ಕುರಿ ಕಾಯುವ ತಮ್ಮ ಕಾಯಕವನ್ನು ಮುಂದುವರಿಸುವುದಾಗಿ ಅವರು ಘೋಷಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿಜೇತ ಹನುಮಂತ ಅವರು 50 ಲಕ್ಷ ರೂಪಾಯಿ ಹಾಗೂ ಕಪ್ ಜೊತೆ ಊರು ತಲುಪಿದ್ದಾರೆ. 100 ದಿನಗಳ ಬಳಿಕ ಅವರು ಹುಟ್ಟೂರು ತಲುಪಿದ್ದಾರೆ. ಬಿಗ್ ಬಾಸ್ಗೆ ಹೋಗುವಾಗ ಆ ಶೋನಲ್ಲಿ ಹೇಗೆ ಇರಬೇಕೇನೋ ಎನ್ನುವ ಭಯ ಅವರಿಗೆ ಕಾಡುತ್ತಿತ್ತು. ಈಗ ಕಪ್ ಗೆದ್ದು ಖುಷಿಯಿಂದ ಹಾವೇರಿಯ ಚಿಲ್ಲೂರಬಡ್ನಿಗೆ ತಲುಪಿದ್ದಾರೆ. ಅವರು ಅಲ್ಲಿ ದೊಡ್ಡ ರೋಡ್ಶೋ ಮಾಡಿದ್ದಾರೆ. ಈಗ ಅವರು ತಮ್ಮ ಕಾಯಕ ಮುಂದುವರಿಸುವ ಘೋಷಣೆ ಮಾಡಿದ್ದಾರೆ.
ಹನುಮಂತ ಅವರು ಕುರಿ ಕಾಯುವ ಕಾಯಕ ಮಾಡಿಕೊಂಡು ಬಂದವರು. ಚಿಕ್ಕ ವಯಸ್ಸಿನಿಂದ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ಕುರಿ ಕಾಯುತ್ತಾ ಹಾಡು ಹೇಳುತ್ತಿದ್ದರು. ಆ ಬಳಿಕ ಜೀ ಕನ್ನಡ ಈ ಪ್ರತಿಭೆಯನ್ನು ಗುರುತಿಸಿ ‘ಸರಿಗಮಪ’ ಶೋನಲ್ಲಿ ಅವಕಾಶ ಕೊಟ್ಟಿತು. ಅಲ್ಲಿಂದ ಅವರ ಬದುಕು ಬದಲಾಯಿತು. ಈ ಶೋಗಳನ್ನು ಮಾಡಿ ಬಂದ ಹೊರತಾಗಿಯೂ ಊರಲ್ಲೇ ಇದ್ದ ಅವರು ಕುರಿ ಕಾಯುತ್ತಿದ್ದರು.
ಈಗ ಹನುಮಂತ ಅವರು ಬಿಗ್ ಬಾಸ್ ಗೆದ್ದು ಬಂದಿದ್ದಾರೆ. ಹುಟ್ಟೂರಿಗೆ ಅವರು ಮರಳಿದ್ದು ಕುರಿ ಕಾಯುವ ಕೆಲಸ ಮುಂದುವರಿಸೋದಾಗಿ ಹೇಳಿದ್ದಾರೆ. ಸದ್ಯ ಹನುಮಂತ ಅವರು ‘ಬಾಯ್ಸ್ vs ಗರ್ಲ್ಸ್’ ಶೋನಲ್ಲಿ ಇದ್ದಾರೆ. ಇದಕ್ಕಾಗಿ ಅವರು ಆಗಾಗ ಬೆಂಗಳೂರಿಗೆ ಬರಬೇಕಾಗುತ್ತದೆ. ಇದರ ಜೊತೆಗೆ ಹಲವು ಕಾರ್ಯಕ್ರಮಗಳಿಗೆ ಅವರಿಗೆ ಆಹ್ವಾನ ಬರುತ್ತದೆ. ಇವುಗಳ ಮಧ್ಯೆ ಅವರು ಕುರಿ ಕಾಯಬೇಕು ಎಂದರೆ ಸ್ವಲ್ಪ ಕಷ್ಟವೇ.
‘ನಾನು ಕುರಿ ಕಾಯೋದನ್ನು ಮುಂದುವರಿಸುತ್ತೇನೆ. ಸದ್ಯ ನಮ್ಮ ಅಣ್ಣ ಇದ್ದಾರೆ. ನನಗೆ ಅದು ಇದು ಕಾರ್ಯಕ್ರಮವೇ ಆಗಿ ಬಿಡುತ್ತದೆ. ಸಮಯ ಸಿಕ್ಕಾಗ ನಾನು ಕುರಿ ಕಾಯುತ್ತೇನೆ’ ಎಂದು ಹನುಮಂತ ಅವರು ಹೇಳಿಕೊಂಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇಷ್ಟು ದೊಡ್ಡ ಹಂತಕ್ಕೆ ಬೆಳೆದ ಬಳಿಕವೂ ಅವರು ತಮ್ಮ ಕಾಯಕ ಮರೆತಿಲ್ಲ ಎಂದು ಅನೇಕರು ಖುಷಿ ಹೊರ ಹಾಕಿದ್ದಾರೆ.
ಇದನ್ನೂ ಓದಿ: Fact Check: ಬಿಗ್ ಬಾಸ್ ಗೆದ್ದ ಬಳಿಕವೂ ಗದ್ದೆಯಲ್ಲಿ ಮರದ ನೆರಳಲ್ಲಿ ಮಲಗಿದ ಹನುಮಂತ?
‘ಬಿಗ್ ಬಾಸ್’ ಮನೆಯಲ್ಲಿ ಇದ್ದಾಗಲೇ ‘ಬಾಯ್ಸ್ vs ಗರ್ಲ್ಸ್’ ಶೋಗೆ ಹನುಮಂತ ಅವಕಾಶ ಪಡೆದರು. ಶನಿವಾರ ಹಾಗೂ ಭಾನುವಾರ ಎಪಿಸೋಡ್ ಪ್ರಸಾರ ಕಾಣಲಿದೆ. ಈ ವಾರದ ಶೂಟ್ ಇತ್ತೀಚೆಗೆ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.