‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಅನು ಸಿರಿಮನೆಗೆ ಸಂಜು ಕ್ಲೋಸ್ ಆಗುತ್ತಿದ್ದಾನೆ. ಆಕೆಯ ಜತೆ ಏನೋ ಕನೆಕ್ಷನ್ ಇದೆ ಎಂಬ ನಂಬಿಕೆ ಆತನದ್ದು. ಯಾವುದೋ ರೀತಿಯಲ್ಲಿ ಆಕೆಗೆ ತಾನು ಕನೆಕ್ಟ್ ಆಗಿದ್ದೀನಿ ಎಂದು ಆತನಿಗೆ ಅನ್ನಿಸುತ್ತಲೇ ಇದೆ. ಅನುನ ಕಂಡರೆ ಪದೇಪದೇ ಮಾತನಾಡಬೇಕು ಎಂದು ಸಂಜುಗೆ ಅನಿಸುತ್ತದೆ. ಆಕೆ ಮಾತನಾಡದೇ ಇದ್ದರೆ ಚಿಂತೆ ಕಾಡುತ್ತದೆ. ಈಗ ಅನು ಜತೆ ಹಲವು ವಿಚಾರಗಳನ್ನು ಸಂಜು ಹೇಳಿಕೊಂಡಿದ್ದಾನೆ. ಈ ಮಾತಿಗೆ ಅನು ಸಿಟ್ಟಾಗಿದ್ದಾಳೆ.
ಅನು ಹಾಗೂ ಸಂಜು ಫ್ಯಾಕ್ಟರಿ ವಿಸಿಟ್ಗೆ ಹೊರಟಿದ್ದರು. ಕಾರಿನಲ್ಲಿ ತೆರಳುವಾಗ ಅನು ಜತೆ ಸಂಜು ಮಾತನಾಡಿದ್ದಾನೆ. ಅಷ್ಟೇ ಅಲ್ಲ, ‘ನಿಮ್ಮನ್ನು ನೋಡಿದ್ರೆ ಸದಾ ಮಾತನಾಡುತ್ತಾ ಇರಬೇಕು ಅನ್ನಿಸುತ್ತದೆ. ನಿಮ್ಮ ಜತೆ ಏನೋ ಕನೆಕ್ಷನ್ ಇದೆ ಎಂಬ ಭಾವನೆ ನನಗೆ ಕಾಡುತ್ತದೆ. ಅದು ಯಾಕೆ ಹೀಗೆ ಎಂಬ ವಿಚಾರ ನನಗೆ ಗೊತ್ತಿಲ್ಲ. ನಾನು ನಿಮಗೆ ಕ್ಲೋಸ್ ಆಗಿದ್ದೇನೆ’ ಎಂದಿದ್ದಾನೆ ಸಂಜು. ಈ ಮಾತನ್ನು ಕೇಳಿ ಅನುಗೆ ಸಿಟ್ಟು ಬಂದಿದೆ. ಈ ರೀತಿ ನಡೆದುಕೊಂಡರೆ ಸರಿ ಇರುವುದಿಲ್ಲ ಎಂಬ ಎಚ್ಚರಿಕೆ ಅನು ಕಡೆಯಿಂದ ಬಂದಿದೆ.
ಸಂಜು ಮೇಲೆ ಹೊಸ ಭರವಸೆ:
ಅನು ಪ್ರೆಗ್ನೆಂಟ್. ಈ ಸಂದರ್ಭದಲ್ಲೂ ಆಕೆ ಕಚೇರಿಗೆ ತೆರಳುತ್ತಿದ್ದಾಳೆ. ಹಲವು ಜವಾಬ್ದಾರಿಗಳನ್ನು ಆಕೆ ವಹಿಸಿಕೊಂಡಿದ್ದಾಳೆ. ಇದರಿಂದ ಆಕೆಯ ತಂದೆ-ತಾಯಿ ಸುಬ್ಬು ಹಾಗೂ ಪುಷ್ಪಾಗೆ ಚಿಂತೆ ಶುರುವಾಗಿದೆ. ಈ ಸಂದರ್ಭದಲ್ಲೇ ಅನು ಬಗ್ಗೆ ಸಂಜು ಕಾಳಜಿ ತೋರುತ್ತಿದ್ದಾನೆ. ಇತ್ತೀಚೆಗೆ ಕಚೇರಿಗೆ ಅನು ಬಂದಿದ್ದಳು. ಅವಳು ಮನೆಗೆ ಹೋದ ನಂತರದಲ್ಲಿ ಯಾರೊಬ್ಬರೂ ಆ ಬಗ್ಗೆ ವಿಚಾರಿಸಿಕೊಳ್ಳಲಿಲ್ಲ. ಆದರೆ, ಸಂಜು ಮಾತ್ರ ಮನೆಗೆ ಬಂದ ನಂತರದಲ್ಲಿ ಶಾರದಾ ದೇವಿ ಅವರಲ್ಲಿ ಈ ವಿಚಾರವನ್ನು ಚರ್ಚೆ ಮಾಡಿದ್ದ. ಈ ವೇಳೆ ಅನುಗೆ ಕರೆ ಮಾಡಿದ ಶಾರದಾ ದೇವಿ, ‘ಸಂಜು ಮನೆಗೆ ಬಂದು ನೀವು ಮನೆಗೆ ಹೋಗಿ ಮುಟ್ಟಿದಿರಾ ಎಂದು ವಿಚಾರಿಸಿದ. ಎಂತಹ ಕಾಳಜಿ’ ಎಂದು ಹೊಗಳಿದರು. ಅನು ಮೇಲೆ ಸಂಜುಗೆ ಇರುವ ಕಾಳಜಿ ನೋಡಿ ಸುಬ್ಬುಗೆ ಹೊಸ ಭರವಸೆ ಮೂಡಿದೆ. ಈ ಬಗ್ಗೆ ಪುಷ್ಪಾ ಬಳಿ ಚರ್ಚೆ ಮಾಡಿದ್ದಾನೆ.
ಝೇಂಡೆನ ಹೊರಗಟ್ಟಿದ ಹರ್ಷ:
ಆರ್ಯವರ್ಧನ್ನ ಹಾಗೂ ಝೇಂಡೆ ಒಟ್ಟಾಗಿ ಬೆಳೆದವರು. ಆರ್ಯವರ್ಧನ್ ಇದ್ದ ಸಂದರ್ಭದಲ್ಲಿ ಕಂಪನಿಗೆ ಝೇಂಡೆ ದಿನಾ ಬರುತ್ತಿದ್ದ. ಆದರೆ, ಈಗ ಇವರ ಪಾಲಿಗೆ ಆರ್ಯವರ್ಧನ್ ಸತ್ತಿದ್ದಾನೆ. ಆರ್ಯವರ್ಧನ್ ಯಾರೋ ಕೊಲೆ ಮಾಡಿದ್ದಾರೆ ಎಂಬುದು ಅನೇಕರ ಊಹೆ. ಝೇಂಡೆ ಸರಿಯಾಗಿ ಇದ್ದಿದ್ದರೆ ಆರ್ಯವರ್ಧನ್ ಮೃತಪಡುತ್ತಿರಲಿಲ್ಲ ಎಂಬುದು ಹಲವರ ಅಭಿಪ್ರಾಯ. ಆರ್ಯವರ್ಧನ್ ಇಲ್ಲದ ಈ ಸಂದರ್ಭದಲ್ಲಿ ಝೇಂಡೆ ವರ್ಧನ್ ಕಂಪನಿಯ ಕಚೇರಿಗೆ ಬಂದಿದ್ದಾನೆ. ಇದನ್ನು ನೋಡಿದ ಹರ್ಷ ಸಿಟ್ಟಾಗಿದ್ದಾನೆ. ಅಲ್ಲದೆ ಆತನನ್ನು ಹೊರಗೆ ಅಟ್ಟಿದ್ದಾನೆ.
ಸಂಜುಗೆ ಅನು ಟಿಪ್ಸ್:
ಝೇಂಡೆ ಹಾಗೂ ಸಂಜು ಮುಖಾಮುಖಿ ಆಗಿದ್ದರು. ‘ನಿಮ್ಮ ಪರಿಚಯ ನನಗೆ ಮೊದಲೇ ಇದೆ’ ಎಂಬ ಮಾತನ್ನು ಸಂಜುಗೆ ಝೇಂಡೆ ಹೇಳಿದ್ದ. ಈ ವಿಚಾರದಲ್ಲಿ ಸಂಜುಗೆ ಗೊಂದಲ ಶುರುವಾಗಿದೆ. ಆತನಿಗೆ ಹಳೆಯ ಯಾವ ನೆನಪು ಕೂಡ ಇಲ್ಲ. ಈ ಕಾರಣಕ್ಕೆ ಆತ ಯಾರು ಎಂಬ ಗೊಂದಲ ಸಂಜುಗೆ ಕಾಡಿದೆ. ಈ ವಿಚಾರದ ಬಗ್ಗೆ ಅನು ಜತೆ ಸಂಜು ಚರ್ಚೆ ಮಾಡಿದ್ದಾನೆ. ‘ಆತನಿಂದ ಅಂತರ ಕಾಯ್ದುಕೊಳ್ಳಿ. ಅದು ನಿಮಗೆ ಒಳ್ಳೆಯದು’ ಎಂಬ ಟಿಪ್ಸ್ ನೀಡಿದ್ದಾಳೆ ಅವಳು.
ಶ್ರೀಲಕ್ಷ್ಮಿ ಎಚ್.