‘ಸಂಪಾದನೆ ಮಾಡೋಕೆ ನಾನು ಬಿಗ್ ಬಾಸ್​ಗೆ ಬಂದಿಲ್ಲ’; ಸಿಟ್ಟಲ್ಲಿ ಹೇಳಿದ ಸುದೀಪ್

| Updated By: ರಾಜೇಶ್ ದುಗ್ಗುಮನೆ

Updated on: Dec 18, 2023 | 7:57 AM

ಪ್ರತಿ ದಿನದ ಎಪಿಸೋಡ್​ನ ಸುದೀಪ್ ಅವರು ವೀಕ್ಷಿಸಬೇಕು. ಏನೆಲ್ಲ ಮಾತನಾಡಬೇಕು ಎಂಬುದನ್ನು ಅವರು ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆ ಸಾಕಷ್ಟು ಸಮಯ ಮೀಸಲಿಡಬೇಕಾಗುತ್ತದೆ. ಆದರೆ, ಸ್ಪರ್ಧಿಗಳು ಇದನ್ನು ಗೌರವಿಸಿಲ್ಲ.

‘ಸಂಪಾದನೆ ಮಾಡೋಕೆ ನಾನು ಬಿಗ್ ಬಾಸ್​ಗೆ ಬಂದಿಲ್ಲ’; ಸಿಟ್ಟಲ್ಲಿ ಹೇಳಿದ ಸುದೀಪ್
ಕಿಚ್ಚ ಸುದೀಪ್​
Follow us on

‘ಬಿಗ್ ಬಾಸ್​’ ರಿಯಾಲಿಟಿ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಪ್ರತಿ ಸೀಸನ್​ನಲ್ಲಿ ಕೋಟಿ ಕೋಟಿ ಸಂಪಾದನೆ ಪಡೆಯುತ್ತಾರೆ. ಅವರ ಬಟ್ಟೆ, ಶ್ಯೂ ಕೂಡ ಸಖತ್ ದುಬಾರಿ. ಈ ಖರ್ಚನ್ನು ವಾಹಿನಿಯವರೇ ಭರಿಸುತ್ತಾರೆ. ಸುದೀಪ್ ಅವರು ಹಣಕ್ಕಾಗಿಯೇ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ ಎಂದು ಅನೇಕರು ಹೇಳಿದ್ದಿದೆ. ಆದರೆ, ಸುದೀಪ್ ಅವರು ಇದನ್ನು ಅಲ್ಲಗಳೆದಿದ್ದಾರೆ. ತಾವು ಬಿಗ್ ಬಾಸ್ (Bigg Boss) ನಡೆಸಿಕೊಡುತ್ತಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ಈ ವೇದಿಕೆಗೆ ಇರುವ ಗೌರವದಿಂದ ನಾನು ಬಿಗ್ ಬಾಸ್ ನಡೆಸಿಕೊಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಶನಿವಾರದ (ಡಿಸೆಂಬರ್ 16) ಎಪಿಸೋಡ್​ನಲ್ಲಿ ಸುದೀಪ್ ಅವರು ಸಖತ್ ಸ್ಟ್ರಿಕ್ಟ್ ಆಗಿ ನಡೆದುಕೊಂಡಿದ್ದರು. ಇದಕ್ಕೆ ಕಾರಣವೂ ಇದೆ. ಸುದೀಪ್ ವೇದಿಕೆಗೆ ಬರುವ ಅರ್ಧ ಗಂಟೆ ಮೊದಲು ಬಜರ್ ಆಗುತ್ತದೆ. ಆದರೆ, ಆ ಸಂದರ್ಭದಲ್ಲಿ ಎಲ್ಲರೂ ಹಾಯಾಗಿ ಮಲಗಿದ್ದರು. ಪದೇ ಪದೇ ಎಚ್ಚರಿಕೆ ನೀಡಿದರೂ ಸ್ಪರ್ಧಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸುದೀಪ್​ ವೇದಿಕೆಗೆ ಬಂದರೂ ಎಲ್ಲರೂ ಇನ್ನೂ ರೆಡಿ ಆಗುತ್ತಿದ್ದರು. ಈ ವಿಚಾರಕ್ಕೆ ಸುದೀಪ್ ಅವರು ಬೇಸರ ಹೊರಹಾಕಿದ್ದಾರೆ. ತಾವು ಇಷ್ಟು ಶ್ರಮ ಹಾಕುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರತಿ ದಿನದ ಎಪಿಸೋಡ್​ನ ಸುದೀಪ್ ಅವರು ವೀಕ್ಷಿಸಬೇಕು. ಏನೆಲ್ಲ ಮಾತನಾಡಬೇಕು ಎಂಬುದನ್ನು ಅವರು ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆ ಸಾಕಷ್ಟು ಸಮಯ ಮೀಸಲಿಡಬೇಕಾಗುತ್ತದೆ. ಸಿನಿಮಾ ಕೆಲಸಗಳ ಮಧ್ಯೆ ರಿಯಾಲಿಟಿ ಶೋಗಾಗಿ ಸಮಯ ನೀಡಬೇಕು. ಎಲ್ಲೇ ಶೂಟಿಂಗ್ ನಡೆಯುತ್ತಿದ್ದರೂ ಭಾರತಕ್ಕೆ ಮರಳಬೇಕು. ಇದು ಸುಲಭದ ಮಾತಲ್ಲ. ಆದಾಗ್ಯೂ ಸ್ಪರ್ಧಿಗಳು ಅದನ್ನು ಗೌರವಿಸಿಲ್ಲ ಎನ್ನುವ ಬೇಸರ ಸುದೀಪ್ ಅವರಿಗೆ ಕಾಡಿದೆ. ಹೀಗಾಗಿ, ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಹಣಕ್ಕಾಗಿ ತಾವು ಬಿಗ್ ಬಾಸ್​ಗೆ ಬರುತ್ತಿಲ್ಲ ಎಂದಿದ್ದಾರೆ.

‘ನಾನು ಇಷ್ಟೊಂದು ಸಿದ್ಧತೆ ಮಾಡಿಕೊಂಡು ಬಂದಾಗ ನೀವು ಅದಕ್ಕೆ ಸ್ಪಂದಿಸಿಲ್ಲ ಎಂದರೆ ಬೇಸರ ಆಗುತ್ತದೆ. ಕೊಡೋ ಸಂಬಳಕ್ಕೆ ಈ ಕೆಲಸ ಮಾಡಬೇಕಾ ಅನಿಸುತ್ತದೆ. ನನಗೆ ಇದರ ಅವಶ್ಯಕತೆ ಇಲ್ಲ. ದೇವರು ಚೆನ್ನಾಗಿ ಇಟ್ಟಿದ್ದಾನೆ. ಇಲ್ಲಿ ನಿಂತುಕೊಂಡು ಸಂಪಾದನೆ ಮಾಡೋಕೆ ನಾನು ಬಿಗ್ ಬಾಸ್​ಗೆ ಬಂದಿಲ್ಲ. ವೇದಿಕೆಗೆ ಇರೋ ತೂಕಕ್ಕೆ, ಜನರು ಕೊಟ್ಟಿರೋ ಗೌರವಕ್ಕೆ ನಾನು ಬಿಗ್ ಬಾಸ್​ಗೆ ಬಂದಿರೋದು ಅಷ್ಟೇ. ಈ ಎಪಿಸೋಡ್​ ಹೀಗೆ ಆರಂಭ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ’ ಎಂದು ಸುದೀಪ್ ಬೇಸರ ಹೊರಹಾಕಿದರು.

ಇದನ್ನೂ ಓದಿ: ‘ಬಿಗ್​ ಬಾಸ್​ನ ಮಾವುತ ಅವಿನಾಶ್​ ಅಲ್ಲ, ಪ್ರತಾಪ್​’; ಹೊಸ ಬಿರುದು ನೀಡಿದ ಸುದೀಪ್

ಇತ್ತೀಚಿನ ದಿನಗಳಲ್ಲಿ ಸ್ಪರ್ಧಿಗಳ ವರ್ತನೆ ಬದಲಾಗಿದೆ. ತುಕಾಲಿ ಸಂತೋಷ್ ಅವರು ಸರಿಯಾಗಿ ಮೈಕ್ ಧರಿಸುವುದಿಲ್ಲ. ಇದಕ್ಕಾಗಿ ಅವರು ಸಾಕಷ್ಟು ಬಾರಿ ಬಿಗ್ ಬಾಸ್​ನಿಂದ ಹೇಳಿಸಿಕೊಂಡಿದ್ದಾರೆ. ಇನ್ನು ಮೈಕಲ್ ಅಜಯ್ ಅವರಿಗೆ ತಾವೇ ಮೇಲು ಎನ್ನುವ ಭಾವನೆ ಕಾಡಿದೆ. ಹೀಗಾಗಿ, ಅರೋಗನ್ಸಿ ತೋರಿಸುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿಲ್ಲ. ಇದೆಲ್ಲವೂ ಸುದೀಪ್​ಗೆ ಬೇಸರ ತರಿಸಿದೆ. ಮನೆ ಮಂದಿ ಬಿಗ್ ಬಾಸ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಸಿಟ್ಟು ಮಾಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ವೀಕ್ಷಿಸುವುದರ ಜೊತೆಗೆ 24 ಗಂಟೆ ಉಚಿತವಾಗಿ ಲೈವ್ ಕೂಡ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ