‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿಗೆ ಬಹುಭಾಷಾ ಸಿನಿಮಾ ಆಫರ್​; ಈ ಚಿತ್ರಕ್ಕೆ ಹೀರೋ ಯಾರು?

Megha Shetty: ಖ್ಯಾತ ನಟಿ ಮೇಘಾ ಶೆಟ್ಟಿ ಅವರಿಗೆ ಹೊಸ ಸಿನಿಮಾ ಸಿಕ್ಕಿದೆ. ಈ ಚಿತ್ರ ಬಹುಭಾಷೆಯಲ್ಲಿ ಮೂಡಿಬರಲಿದೆ ಎಂಬುದು ವಿಶೇಷ. ಶೀಘ್ರವೇ ಇದರ ಶೀರ್ಷಿಕೆ ಅನಾವರಣ ಆಗಲಿದ್ದು, ನವೆಂಬರ್​ ತಿಂಗಳಲ್ಲಿ ಶೂಟಿಂಗ್​ ಆರಂಭ ಆಗಲಿದೆ.

‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿಗೆ ಬಹುಭಾಷಾ ಸಿನಿಮಾ ಆಫರ್​; ಈ ಚಿತ್ರಕ್ಕೆ ಹೀರೋ ಯಾರು?
ಕವೀಶ್​ ಶೆಟ್ಟಿ, ಮೇಘಾ ಶೆಟ್ಟಿ

ಕನ್ನಡ ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ ಮೂಲಕ ನಟಿ ಮೇಘಾ ಶೆಟ್ಟಿ ಅವರ ಖ್ಯಾತಿ ಹೆಚ್ಚಿದೆ. ಅನು ಸಿರಿಮನೆ ಎಂಬ ಪಾತ್ರದಿಂದ ಅವರು ಕರುನಾಡಿನಲ್ಲಿ ಮನೆಮಾತಾಗಿದ್ದಾರೆ. ಈ ನಡುವೆ ಅವರಿಗೆ ಸಿನಿಮಾ ಆಫರ್​ಗಳು ಕೂಡ ಹೆಚ್ಚುತ್ತಿವೆ. ‘ಗೋಲ್ಡನ್​ ಸ್ಟಾರ್​’ ಗಣೇಶ್​ ಜೊತೆ ಅವರು ‘ತ್ರಿಬಲ್​ ರೈಡಿಂಗ್​’ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈಗ ಮೇಘಾ ಶೆಟ್ಟಿ ಪಾಲಿಗೆ ಮತ್ತೊಂದು ದೊಡ್ಡ ಆಫರ್​ ಸಿಕ್ಕಿದೆ. ಅವರು ನಟಿಸಲಿರುವ ಹೊಸ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ಮರಾಠಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬರಲಿದೆ ಎಂಬುದು ವಿಶೇಷ.

ಈ ಸಿನಿಮಾದಲ್ಲಿ ಹೊಸ ನಟ ಕವೀಶ್​ ಶೆಟ್ಟಿ ಅವರು ನಾಯಕನಾಗಿ ನಟಿಸಲಿದ್ದಾರೆ. ಅವರಿಗೆ ಜೋಡಿಯಾಗಿ ಮೇಘಾ ಶೆಟ್ಟಿ ಅಭಿನಯಿಸಲಿದ್ದಾರೆ. ಈ ಹಿಂದೆ ‘ಜಿಲ್ಕಾ’ ಸಿನಿಮಾದಲ್ಲಿ ನಟಿಸಿದ್ದ ಕವೀಶ್​ ಶೆಟ್ಟಿ ಅವರಿಗೆ ಇದು ಎರಡನೇ ಚಿತ್ರ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದೆ. ಹಲವು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಡಗರ ರಾಘವೇಂದ್ರ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶೀಘ್ರವೇ ಈ ಸಿನಿಮಾದ ಶೀರ್ಷಿಕೆ ಅನಾವರಣ ಆಗಲಿದ್ದು, ನವೆಂಬರ್​ ತಿಂಗಳಲ್ಲಿ ಶೂಟಿಂಗ್​ ಆರಂಭ ಆಗಲಿದೆ.

ಉಡುಪಿ ಮೂಲದ ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ತಮ್ಮ ಕ್ಲಾಸಿಕ್ ಸ್ಟುಡಿಯೋ ಅಂಗ ಸಂಸ್ಥೆಯ ಅಡಿಯಲ್ಲಿ ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಎನ್ನುವ ನಿರ್ಮಾಣ ಸಂಸ್ಥೆಯ ಮೂಲಕ ಈ ಚಿತ್ರವನ್ನು ಅದ್ದೂರಿಯಾಗಿ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಮರಾಠಿ ಚಿತ್ರರಂಗದ ಪ್ರತಿಷ್ಠಿತ ದೀಪಕ್ ರಾಣೆ ಫಿಲ್ಮ್ಸ್ ಕೂಡ ಕೈ ಜೋಡಿಸಿದೆ.

‘ನಮ್ಮ ಸಿನಿಮಾದಲ್ಲಿ ಅದ್ಭುತವಾದ ಒಂದು ಕಥೆ ಇರಲಿದೆ. ಮೇಕಿಂಗ್​ ಅದ್ದೂರಿಯಾಗಿರಲಿದೆ. ಕನ್ನಡ, ಮರಾಠಿ ಸೇರಿ ಹಲವು ಭಾಷೆಯ ಸ್ಟಾರ್​ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಾರೆ. ನುರಿತ ತಂತ್ರಜ್ಞರು ಕೆಲಸ ಮಾಡಲಿದ್ದಾರೆ’ ಎಂದಿದ್ದಾರೆ ನಿರ್ಮಾಪಕ ವಿಜಯ್​ ಕುಮಾರ್​ ಶೆಟ್ಟಿ.

ಇದನ್ನೂ ಓದಿ:

ದಿಲ್ ಪಸಂದ್ ಚಿತ್ರದ ಕತೆ ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾಗಿ ಚಿತ್ರದ ನಾಯಕಿ ಮೇಘಾ ಶೆಟ್ಟಿ ಹೇಳುತ್ತಾರೆ

ಡಾರ್ಲಿಂಗ್​ ಕೃಷ್ಣ ಜೊತೆ ಮೇಘಾ ಶೆಟ್ಟಿ ‘ದಿಲ್​ ಪಸಂದ್’​; ‘ಜೊತೆ ಜೊತೆಯಲಿ’ ನಟಿಗೆ ಸಿಕ್ಕ ಪಾತ್ರ ಹೇಗಿದೆ?

Click on your DTH Provider to Add TV9 Kannada