‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಲ್ಲಿ ಅನು ಸಿರಿಮನೆ ದುಃಖದಲ್ಲಿ ಕೈ ತೊಳೆಯುತ್ತಿದ್ದಾಳೆ. ಪತಿ ಆರ್ಯವರ್ಧನ್ನ ಕಳೆದುಕೊಂಡಿದ್ದೇನೆ ಎನ್ನುವ ಕಣ್ಣೀರಲ್ಲಿ ಅವಳಿದ್ದಾಳೆ. ಹೀಗಾಗಿ ನಿತ್ಯ ಕಣ್ಣೀರು ಹಾಕುತ್ತಿದ್ದಾಳೆ. ಆಕೆಯ ಪಾಲಕರಾದ ಸುಬ್ಬು ಹಾಗೂ ಪುಷ್ಪಾಗೆ ಅನುನ ದುಃಖವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನ್ನದೇ ಮನೆಯಲ್ಲಿ ಆಕೆಯನ್ನು ತಂದು ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಅನು ಮನೆಗೆ ಸಂಜು (ಹೊಸ ಆರ್ಯವರ್ಧನ್) ಬಂದಿದ್ದ. ಆತನನ್ನು ನೋಡಿ ಬೇಸರ ಮಾಡಿಕೊಂಡಿದ್ದಾಳೆ ಅನು. ಆತ ತೋರುವ ಕಾಳಜಿ ಆಕೆಗೆ ಆರ್ಯವರ್ಧನ್ನ ನೆನಪು ಮಾಡುತ್ತಿದೆ.
ಅನು ಹಾಗೂ ಆರ್ಯವರ್ಧನ್ ಮದುವೆ ಆಗಿದ್ದರು. ಆಕೆಯನ್ನು ಆರ್ಯವರ್ಧನ್ ಅತೀವವಾಗಿ ಕೇರ್ ಮಾಡುತ್ತಿದ್ದ. ಆತ ತೋರುತ್ತಿದ್ದ ಪ್ರೀತಿಗೆ ಅನು ಮರುಳಾಗಿದ್ದಳು. ಆದರೆ, ಈಗ ಗಂಡ ಇಲ್ಲ ಎಂಬ ನೋವು ಆಕೆಯನ್ನು ಕಾಡುತ್ತಿದೆ. ಹೀಗಾಗಿ, ಏನು ಮಾಡಬೇಕು ಎಂಬುದು ಆಕೆಗೆ ತಿಳಿಯುತ್ತಿಲ್ಲ. ಇದರ ಜತೆಗೆ ಸಂಜು ತೋರುತ್ತಿರುವ ಕಾಳಜಿ ಆಕೆಗೆ ಉಸಿರುಗಟ್ಟಿಸುತ್ತಿದೆ.
ಸಂಜು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದ. ಮರಳಿ ಬರುವಾಗ ಕಮಲಮ್ಮನ ವಠಾರಕ್ಕೆ ಬಂದಿದ್ದಾನೆ. ಅದು ಅನು ಮನೆ ಎಂಬ ವಿಚಾರ ಆತನಿಗೆ ಗೊತ್ತಿರಲಿಲ್ಲ. ವಠಾರದ ಎದುರಲ್ಲೇ ಸುಬ್ಬು ಎದುರಾಗಿದ್ದ. ಅವನೇ ಆತನನ್ನು ಒಳಗೆ ಕರೆದುಕೊಂಡು ಬಂದಿದ್ದ. ಮೊದಲಿನಿಂದಲೂ ಅನು ಬಗ್ಗೆ ಸಂಜುಗೆ ಒಂದು ಒಳ್ಳೆಯ ಭಾವನೆ ಇದೆ. ಆಕೆಯನ್ನು ಕಂಡರೆ ಸಂಜು ಮರುಗುತ್ತಾನೆ. ಇದು ಅನುಗೆ ಇಷ್ಟ ಆಗುತ್ತಿಲ್ಲ.
ಮನೆಯಿಂದ ಹೊರಡುವುದಕ್ಕೂ ಮುನ್ನ ಅನುಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳಿ ಹೋಗಿದ್ದಾನೆ ಸಂಜು. ಮೊದಲ ದಿನ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಕಾರಿನ ಬಾಗಿಲನ್ನು ತಾನೇ ತೆರೆಯಲು ಬಂದಿದ್ದ. ಆಸ್ಪತ್ರೆಗೆ ಬಂದಾಗಲೂ ಅನು ಬಗ್ಗೆ ಕಾಳಜಿ ತೋರಿದ್ದ. ಇದು ಅನುಗೆ ಇಷ್ಟವಾಗುತ್ತಿಲ್ಲ. ಈ ವಿಚಾರವನ್ನು ತಾಯಿ ಪುಷ್ಪಾ ಬಳಿ ಹೇಳಿಕೊಂಡಿದ್ದಾಳೆ ಅನು.
‘ಅವರು ಇದ್ದಾಗ ನನಗೆ ಉಸಿರುಗಟ್ಟಿದಂತೆ ಆಗುತ್ತದೆ. ಅವರು ತೋರಿಸುವ ಕಾಳಜಿ ನನಗೆ ಆರ್ಯ ಸರ್ ಅನ್ನು ನೆನಪು ಮಾಡಿಸುತ್ತದೆ. ಆರ್ಯ ಸರ್ ನನಗೆ ಯಾವಾಗಲೂ ಇಷ್ಟೇ ಪ್ರೀತಿ ತೋರುತ್ತಿದ್ದರು. ಅವರನ್ನು ಬಿಟ್ಟು ಬೇರೊಬ್ಬರು ಇಷ್ಟು ಕಾಳಜಿ ತೋರಿಸುವುದು ನನಗೆ ಇಷ್ಟ ಆಗುವುದಿಲ್ಲ’ ಎಂದಿದ್ದಾಳೆ ಅನು. ಇದಕ್ಕೆ ಪುಷ್ಪಾ ಸಿಟ್ಟಾಗಿದ್ದಾಳೆ. ‘ನಿನ್ನನ್ನು ಆರ್ಯವರ್ಧನ್ ಅವರು ಬಿಟ್ಟು ಬೇರೆ ಯಾರೂ ಕಾಳಜಿ ತೋರಬಾರದು ಎಂದರೆ ಹೇಗೆ? ಇಷ್ಟು ಸಣ್ಣ ವಿಚಾರಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಂಡರೆ ಸಮಸ್ಯೆ ಆಗುತ್ತದೆ’ ಎಂದು ಪುಷ್ಪಾ ಬುದ್ಧಿವಾದ ಹೇಳಿದ್ದಾಳೆ. ಆದರೆ, ಅನು ದುಃಖ ಮಾತ್ರ ಕಡಿಮೆ ಆಗಿಲ್ಲ.
ಝೇಂಡೆ ಗೊತ್ತಾಯಿತು ಅಸಲಿ ವಿಚಾರ?
ರಾಜ ನಂದಿನಿ ನಿವಾಸಕ್ಕೆ ಹೊಸಬನ ಎಂಟ್ರಿ ಆಗಿದೆ. ಅದುವೇ ಸಂಜು. ಈತನ ಮೂಲ ಹೆಸರು ವಿಶ್ವಾಸ್ ದೇಸಾಯಿ. ಈತ ಯಾರು? ಈತ ಇಲ್ಲಿಗೆ ಬಂದಿದ್ದು ಯಾಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಅನೇಕರಿಗೆ ಅನುಮಾನ ಮೂಡಿದೆ. ಆರ್ಯವರ್ಧನ್ನ ಪಿ.ಎ. ಆಗಿದ್ದ ಮೀರಾ ಹೆಗಡೆ ಈ ಬಗ್ಗೆ ತನಿಖೆ ಮಾಡಿದ್ದಾಳೆ. ವಿಶ್ವಾಸ್ ಓದಿನಲ್ಲಿ ಮುಂದಿದ್ದ, ಬಿಸ್ನೆಸ್ ಮೈಂಡ್ ಆಗಿತ್ತು ಎಂಬಿತ್ಯಾದಿ ವಿಚಾರಗಳನ್ನು ಕಂಡು ಹಿಡಿದಿದ್ದಾಳೆ ಮೀರಾ. ಜತೆಗೆ ಆತ ಚಿಕಿತ್ಸೆ ಪಡೆದಿದ್ದು ಎಲ್ಲಿ ಎಂಬುದನ್ನೂ ಆಕೆ ಕಂಡು ಹಿಡಿದಿದ್ದಳು.
ಇದೇ ಮಾಹಿತಿ ಇಟ್ಟುಕೊಂಡು ಝೇಂಡೆ ಆ ಆಸ್ಪತ್ರೆಗೆ ತೆರಳಿದ್ದಾನೆ. ಆಸ್ಪತ್ರೆಯಲ್ಲಿ ವಿಚಾರಿಸಿದಾಗ ‘ವಿಶ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದು ನಿಜ. ಆದರೆ, ಆತ ಹೊರ ಹೋಗಿಲ್ಲ. ಆತ ಸತ್ತಿದ್ದಾನೆ’ ಎನ್ನುವ ಉತ್ತರ ಬಂತು. ಇದನ್ನು ಕೇಳಿ ಝೇಂಡೆಗೆ ಅನುಮಾನ ಬಲವಾಗಿದೆ.
Published On - 7:30 am, Wed, 12 October 22