ತಾನೇ ಮಾಡಿದ ಅಕ್ರಮವನ್ನು ರಿವೀಲ್ ಮಾಡುತ್ತಿದ್ದಾನೆ ಆರ್ಯವರ್ಧನ್; ಝೇಂಡೆಗೆ ಶುರುವಾಯ್ತು ನಡುಕ
ಸಂಜು ಹಾಗೂ ಮೀರಾ ಹೆಗ್ಡೆ ಕ್ಲೋಸ್ ಆಗುತ್ತಿದ್ದಾರೆ. ಕಂಪನಿ ವಿಚಾರವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲೂ ಝೇಂಡೆಗೆ ಭಯವಿದೆ. ಮತ್ಯಾವ ಹೊಸ ವಿಚಾರಗಳು ರಿವೀಲ್ ಆಗಬಹುದು ಎಂದು ಆತ ಚಿಂತೆಯಲ್ಲಿ ಇದ್ದಾನೆ.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜು ಪತ್ನಿ ಆರಾಧನಾಳ ಆಗಮನ ಆಗಿದೆ. ಇವಳನ್ನು ಕರೆಸಿದ್ದು ಅನು. ಇದು ಸಂಜುಗೆ ಸಿಟ್ಟು ತರಿಸಿದೆ. ತನ್ನಿಂದ ದೂರವಾಗಬೇಕು ಎನ್ನುವ ಕಾರಣಕ್ಕೆ ಅನು ಈ ರೀತಿ ಮಾಡುತ್ತಿದ್ದಾಳೆ ಎಂಬುದು ಸಂಜುವಿನ ಅನುಮಾನ. ಇತ್ತ ಜೋಗ್ತವ್ವ ವಠಾರಕ್ಕೆ ಬಂದಿದ್ದಾಳೆ. ಅನು ತನ್ನ ಸೌಭಾಗ್ಯವನ್ನು ತಾನೇ ಕಳೆದುಕೊಳ್ಳುತ್ತಿದ್ದಾಳೆ ಎಂಬ ಎಚ್ಚರಿಕೆಯನ್ನು ನೀಡಿದ್ದಾಳೆ. ಈ ಒಗಟಿನ ಮಾತು ಅನು ತಾಯಿ ಪುಷ್ಪಾಗೆ ಅರ್ಥವಾಗಿಲ್ಲ.
ಅಕ್ರಮ ಬೈಲಿಗೆಳೆದ ಸಂಜು
ಆರ್ಯವರ್ಧನ್ ಹಾಗೂ ಝೇಂಡೆ ಇಬ್ಬರೂ ಸೇರಿ ವರ್ಧನ್ ಕಂಪನಿಯಲ್ಲಿ ಸಾಕಷ್ಟು ಅಕ್ರಮ ಎಸಗಿದ್ದಾರೆ. ಈ ವಿಚಾರ ಅನು ಗಮನಕ್ಕೆ ಬಂದಿದೆ. ಈ ವಿಚಾರ ಆಕೆಗೆ ಗೊತ್ತಾದ ಸಂದರ್ಭದಲ್ಲೇ ಆರ್ಯವರ್ಧನ್ ಮೃತಪಟ್ಟಿದ್ದ. ತನ್ನಲ್ಲಿದ್ದ ಪ್ರಶ್ನೆಗಳಿಗೆ ಆಕೆ ಉತ್ತರ ಕಂಡುಕೊಳ್ಳಬೇಕು ಎನ್ನುವಾಗಲೇ ಆತ ನಿಧನ ಹೊಂದಿದ್ದ. ವರ್ಧನ್ ಕಂಪನಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಈ ವಿಚಾರವನ್ನು ಈಗ ಸಂಜು ಒಂದೊಂದಾಗಿ ರಿವೀಲ್ ಮಾಡುತ್ತಿದ್ದಾನೆ. ಈ ಮೂಲಕ ತಾನೇ ಮಾಡಿದ ಅಕ್ರಮವನ್ನು ಬಯಲಿಗೆಳೆಯುತ್ತಿದ್ದಾನೆ.
ಸಂಜುನೇ ಆರ್ಯವರ್ಧನ್. ಅಪಘಾತದಲ್ಲಿ ಆತನಿಗೆ ನೆನಪು ಮಾಸಿದೆ. ಇನ್ನು, ಮುಖಚರ್ಯೆ ಬದಲಾಗಿದೆ. ಈ ವಿಚಾರ ಕೆಲವೇ ಕೆಲವು ಮಂದಿಗೆ ಗೊತ್ತಿದೆ. ಸಂಜುಗೆ ತಾನು ಆರ್ಯವರ್ಧನ್ ಎನ್ನುವ ವಿಚಾರ ಗೊತ್ತಿಲ್ಲ. ಹೀಗಾಗಿ, ವರ್ಧನ್ ಕಂಪನಿಯ ಕೆಲ ಸೀಕ್ರೆಟ್ಗಳನ್ನು ಆತ ತನಗೆ ಗೊತ್ತಿಲ್ಲದೆ ಬಯಲಿಗೆ ಎಳೆಯುತ್ತಿದ್ದಾನೆ.
ಮನೆಯಲ್ಲಿ ಆರಾಧನಾ ನೀಡುತ್ತಿದ್ದ ಟಾರ್ಚರ್ನಿಂದ ತಪ್ಪಿಸಿಕೊಳ್ಳಲು ಆತ ಕಚೇರಿಗೆ ಬಂದಿದ್ದ. ಅಲ್ಲಿ ಮೀರಾ ಬಳಿ ತನಗೆ ಕೆಲಸ ನೀಡಲು ಕೋರಿದ್ದ. ಆಕೆ ಆಡಿಟ್ಗೆ ಸಂಬಂಧಿಸಿದ ಕೆಲ ಫೈಲ್ಗಳನ್ನು ನೀಡಿದ್ದಳು. ಇದನ್ನು ನೋಡುವಾಗ ಆತನಿಗೆ ಕೆಲ ವಿಚಾರ ಗೊತ್ತಾಗಿದೆ.
‘ಕಂಪನಿಗೆ ಸಂಬಂಧಿಸಿದ ಕೆಲ ಪ್ರಾಪರ್ಟಿಗಳಿಗೆ ಟ್ಯಾಕ್ಸ್ ಕಟ್ಟಿಲ್ಲ. ಆದಾಗ್ಯೂ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ಇದರ ಅರ್ಥ ಆ ಪ್ರಾಪರ್ಟಿಗಳು ವರ್ಧನ್ ಕಂಪನಿಯ ಹಿಡಿತದಲ್ಲಿ ಇಲ್ಲ ಎಂದರ್ಥ’ ಎಂಬುದಾಗಿ ಮನಸ್ಸಲ್ಲೇ ಹೇಳಿಕೊಂಡಿದ್ದಾನೆ ಸಂಜು. ಈ ವಿಚಾರವನ್ನು ಮೀರಾ ಹೆಗ್ಡೆ ಬಳಿ ವಿಚಾರಿಸಿದ್ದಾನೆ.
ಝೇಂಡೆಯನ್ನು ಭೇಟಿ ಮಾಡಲು ಮೀರಾ ಹೆಗ್ಡೆ ತೆರಳಿದ್ದಳು. ಇದೇ ಸಂದರ್ಭಕ್ಕೆ ಸರಿಯಾಗಿ ಮೀರಾಗೆ ಸಂಜು ಕರೆ ಮಾಡಿದ್ದಾನೆ. ಕಂಪನಿಯಲ್ಲಿ ನಡೆದ ಅಕ್ರಮಗಳ ವಿಚಾರವನ್ನು ಅವಳ ಬಳಿ ವಿವರಿಸಿದ್ದಾನೆ. ಆದರೆ, ಇದನ್ನು ಆಕೆ ಕೇಳಲೇ ಇಲ್ಲ. ಆರ್ಯವರ್ಧನ್ ಹಾಗೂ ಝೇಂಡೆ ಇಬ್ಬರೂ ಸೇರಿ ಈ ಅಕ್ರಮ ಎಸಗಿದ್ದಾರೆ ಅನ್ನೋದು ಇವಳಿಗೆ ಗೊತ್ತಿದೆ. ಈ ಬಗ್ಗೆ ಝೇಂಡೆ ಬಳಿ ಪ್ರಶ್ನೆ ಮಾಡಿದ್ದಾಳೆ ಮೀರಾ. ‘ನಾನು ಕಂಪನಿಯ ಒಳ್ಳೆಯದಕ್ಕೆ ಮಾಡಿದ್ದು. ಆರ್ಯವರ್ಧನ್ ಅವರು ಏನು ಹೇಳಿದ್ರೋ ಅದನ್ನು ಮಾಡಿದ್ದೇನೆ ಅಷ್ಟೇ. ನನ್ನದೇನು ಇಲ್ಲ’ ಎಂದು ಝೇಂಡೆ ಜಾರಿಕೊಂಡಿದ್ದಾನೆ.
ಮತ್ತೊಂದು ಕಡೆಯಲ್ಲಿ ಝೇಂಡೆಗೆ ಭಯ ಶುರುವಾಗಿದೆ. ಸಂಜು ಒಂದೊಂದೇ ಅಕ್ರಮವನ್ನು ಹೊರಗೆ ತೆಗೆಯುತ್ತಿದ್ದಾನೆ. ಇದು ಹೀಗೆಯೇ ಮುಂದುವರಿದರೆ ತಾನು ಮಾಡಿದ ಅಕ್ರಮಗಳು ಹೊರಗೆ ಬೀಳಬಹುದು ಎನ್ನುವ ಭಯ ಶುರುವಾಗಿದೆ. ಹೀಗಾಗಿ, ಆತನನ್ನು ಮುಗಿಸುವ ನಿರ್ಧಾರಕ್ಕೆ ಝೇಂಡೆ ಬಂದಿದ್ದಾನೆ. ಜತೆಗೆ ವರ್ಧನ್ ಕಂಪನಿಯ ಎಲ್ಲಾ ಆಸ್ತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾನೆ.
ಸಂಜು ಹಾಗೂ ಮೀರಾ ಹೆಗ್ಡೆ ಕ್ಲೋಸ್ ಆಗುತ್ತಿದ್ದಾರೆ. ಕಂಪನಿ ವಿಚಾರವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲೂ ಝೇಂಡೆಗೆ ಭಯವಿದೆ. ಮತ್ಯಾವ ಹೊಸ ವಿಚಾರಗಳು ರಿವೀಲ್ ಆಗಬಹುದು ಎಂದು ಆತ ಚಿಂತೆಯಲ್ಲಿ ಇದ್ದಾನೆ.
ಶ್ರೀಲಕ್ಷ್ಮಿ ಎಚ್.
Published On - 7:30 am, Sat, 12 November 22