ಆರ್ಯವರ್ಧನ್ (Aryvardhan) ಯಾವಾಗಲೂ ಕೋಟ್ ಹಾಕಿ ಕಚೇರಿಗೆ ಬರುತ್ತಿದ್ದ. ಇದು ಆತನ ಟ್ರೇಡ್ಮಾರ್ಕ್ ಆಗಿತ್ತು. ಆದರೆ, ಈಗ ಆತ ನಿಧನ ಹೊಂದಿದ್ದಾನೆ ಎಂದು ಎಲ್ಲರೂ ಭಾವಿಸಿದ್ದಾರೆ. ಆತ ಇಲ್ಲದೆ ಕಂಪನಿ ಬಡವಾಗಿದೆ. ಎಲ್ಲರೂ ಆರ್ಯವರ್ಧನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಪಘಾತದ ವೇಳೆ ಆತನಿಗೆ ನೆನಪೆಲ್ಲವೂ ಅಳಿಸಿ ಹೋಗಿದೆ. ಈಗ ಸಂಜು ಆಗಿ ಆರ್ಯವರ್ಧನ್ ಮತ್ತೆ ರಾಜ ನಂದಿನಿ ನಿವಾಸಕ್ಕೆ ಬಂದಿದ್ದಾನೆ. ಆತನಿಗೆ ನಿಧಾನವಾಗಿ ಹಳೆಯ ನೆನಪುಗಳು ಬರುತ್ತಿವೆ. ಹೀಗಿರುವಾಗಲೇ ಆರ್ಯವರ್ಧನ್ ಗೆಟಪ್ನಲ್ಲಿ ಸಂಜು ಆಫೀಸ್ಗೆ ಬಂದಿದ್ದಾನೆ. ಆತನನ್ನು ನೋಡಿ ಪಿ.ಎ. ಮೀರಾ ಹೆಗಡೆ ಅಚ್ಚರಿಗೊಂಡಿದ್ದಾಳೆ. ಈ ಗೆಟಪ್ನಲ್ಲಿ ಸಂಜು ಬಂದಿದ್ದು ಏಕೆ ಮತ್ತು ಹೇಗೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ಅನು ಸಿರಿಮನೆ ಗರ್ಭಿಣಿ. ಈ ಕಾರಣಕ್ಕೆ ಅವಳ ಮನೆಯಲ್ಲಿ ಉಡಿತುಂಬುವ ಶಾಸ್ತ್ರ ನಡೆಯುತ್ತಿತ್ತು. ಈ ಕಾರಣಕ್ಕೆ ಎಲ್ಲರೂ ಅಲ್ಲಿಗೆ ತೆರಳಿದ್ದರು. ಆದರೆ, ಸಂಜು ಮಾತ್ರ ಮನೆಯಲ್ಲೇ ಉಳಿದುಕೊಂಡಿದ್ದ. ಯಾರು ಎಷ್ಟೇ ಹೇಳಿದರೂ ಆತ ಹೊರಡೋಕೆ ರೆಡಿ ಇರಲಿಲ್ಲ. ಹೀಗೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಪ್ಲ್ಯಾನ್ ಮಾಡಿ ಮನೆಯಲ್ಲೇ ಉಳಿದುಕೊಂಡಿದ್ದು ನೋಡಿದರೆ ಇದರ ಹಿಂದೆ ಏನೋ ಇದೆ ಎಂದು ಹರ್ಷನ ಪತ್ನಿ ಮಾನ್ಸಿ ಊಹಿಸಿದ್ದಳು. ಕಾಕತಾಳೀಯ ಎಂಬಂತೆ ಅದು ನಿಜವಾಗಿದೆ.
‘ನಾನು ಹೊರಗೆ ಹೋಗಿ ಬರ್ತೀನಿ’ ಎಂದು ಹೇಳಿ ಹೊರಟ ಸಂಜು ನೇರವಾಗಿ ಹೋಗಿದ್ದು ಕಚೇರಿಗೆ. ಅಚ್ಚರಿ ಎಂದರೆ ಆರ್ಯವರ್ಧನ್ ಸ್ಟೈಲ್ನಲ್ಲೇ ಆತ ಕಚೇರಿಗೆ ತೆರಳಿದ್ದ. ಆತ ಬರುತ್ತಿರುವುದನ್ನು ನೋಡಿದ ಅಲ್ಲಿನ ಸಿಬ್ಬಂದಿ ತಡೆದಿದ್ದಳು. ‘ನೀವು ಯಾರು? ಇಲ್ಲಿಗೆ ಏಕೆ ಬಂದ್ರಿ’ ಎಂದು ಪ್ರಶ್ನೆ ಮಾಡಿದ್ದಳು. ಈ ಪ್ರಶ್ನೆಗಳನ್ನು ಕೇಳಿ ಸಂಜುಗೆ ಏನು ಉತ್ತರಿಸಬೇಕು ಎಂಬುದೇ ತಿಳಿದಿಲ್ಲ. ಹೀಗಾಗಿ, ‘ನಾನು ಆರ್ಯವರ್ಧನ್ಗೆ ಹತ್ತಿರವಾದವನು. ದಯವಿಟ್ಟು ಒಳಗೆ ಹೋಗೋಕೆ ಅವಕಾಶ ನೀಡಿ’ ಎಂದು ಕೋರಿಕೊಂಡಿದ್ದಾನೆ. ಆ ಟೈಮ್ಗೆ ಸರಿಯಾಗಿ ಮೀರಾ ಹೆಗಡೆ ಬಂದಿದ್ದಾಳೆ.
‘ನೀವು ಆಫೀಸ್ಗೆ ಬರ್ತೀರಾ ಅನ್ನೋದು ಗೊತ್ತಿತ್ತು. ಆದರೆ, ಇವತ್ತೇ ಬರ್ತೀರಾ ಎಂದುಕೊಂಡಿರಲಿಲ್ಲ’ ಎಂಬ ಮಾತನ್ನು ಮೀರಾ ಹೇಳಿದಳು. ಸಂಜುಗೆ ಕಚೇರಿ ಒಳಗೆ ಬರುತ್ತಿದ್ದಂತೆ ಹಳೆಯ ನೆನಪುಗಳು ಅತಿಯಾಗಿ ಕಾಡಿವೆ. ಹೀಗಾಗಿ ಆತ ಸಂಪೂರ್ಣ ಗೊಂದಲಕ್ಕೆ ಒಳಗಾಗಿದ್ದಾನೆ. ಏನು ಹೇಳಬೇಕು ಎಂಬುದೇ ಆತನಿಗೆ ಗೊತ್ತಾಗಿಲ್ಲ. ನಂತರ ಅನು ಮನೆಗೆ ಸಂಜುನ ಬಿಟ್ಟು ಬಂದಿದ್ದಾಳೆ ಮೀರಾ.
ಅನು ಮನೆಯಲ್ಲಿ ಸಂಜುನ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಅಷ್ಟೇ ಅಲ್ಲ ಆತ ಧರಿಸಿದ್ದ ಬಟ್ಟೆ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ. ಏಕೆಂದರೆ ಆರ್ಯವರ್ಧನ್ ಕೂಡ ಇದೇ ಮಾದರಿಯ ಬಟ್ಟೆ ಹಾಕುತ್ತಿದ್ದ. ಈ ಎಲ್ಲಾ ಕಾರಣದಿಂದ ಅನು ಕುಟುಂಬದವರಿಗೆ ಅಚ್ಚರಿ ಹಾಗೂ ಶಾಕ್ ಆಗಿದೆ. ಸಂಜುನ ನೋಡಿದ ತಕ್ಷಣ ಅನುಗೆ ಆರ್ಯವರ್ಧನ್ ನೆನಪಿಗೆ ಬಂದಿದ್ದಾನೆ.
ಅನುಗೆ ಚುಚ್ಚು ಮಾತು
ಅನು ಗರ್ಭಿಣಿ ಆದ ಕಾರಣ ಉಡಿ ತುಂಬುವ ಶಾಸ್ತ್ರ ನಡೆಯುತ್ತಿತ್ತು. ಅವಳಿಗೆ ಗಂಡ ಸತ್ತು ಹೋಗಿದ್ದಾನೆ ಎನ್ನುವ ಕಾರಣಕ್ಕೆ ಅಕ್ಕ ಪಕ್ಕದ ಮನೆಯವರು ಚುಚ್ಚಿ ಮಾತನಾಡಿದ್ದರು. ‘ಗಂಡ ಸತ್ತವಳಿಗೆ ಅರಿಷಿಣ-ಕುಂಕುಮ ಇಡಬಹುದೇ? ಬಳೆ ತೊಡಿಸಬಹುದೇ’ ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಇದರಿಂದ ಸಿಟ್ಟಾದ ಆರ್ಯವರ್ಧನ್ ತಾಯಿ ಪ್ರಿಯಾ, ‘ಆರ್ಯವರ್ಧನ್ ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಇದ್ದಾನೆ. ಶೀಘ್ರವೇ ಆತ ಬರುತ್ತಾನೆ’ ಎಂಬ ಭರವಸೆ ನೀಡಿದ್ದಾಳೆ. ಇದನ್ನು ಕೇಳಿ ಅನುಗೆ ಖುಷಿ ಆಗಿದೆ.
Published On - 9:56 am, Fri, 14 October 22