ಸಂಜುನೇ ಆರ್ಯವರ್ಧನ್ ಎಂಬ ಸತ್ಯ ಝೇಂಡೆಗೆ ತಿಳಿದೇ ಹೋಯ್ತು
ಝೇಂಡೆಗೆ ಸಂಜು ತುಂಬಾ ವಿಚಿತ್ರ ವ್ಯಕ್ತಿಯಾಗಿ ಕಾಣುತ್ತಿದ್ದಾನೆ. ಆತನನ್ನು ಹಿಂಬಾಲಿಸಿಕೊಂಡು ಹೋಗುವ ಕೆಲಸ ಝೇಂಡೆಯಿಂದ ಆಗುತ್ತಿದೆ. ಸಂಪಿಗೆಪುರದ ಪ್ರಾಪರ್ಟಿಗಳ ಸುತ್ತ ಅವನು ತಿರುಗಾಡಿದ್ದನ್ನು ನೋಡಿ ಆತನಿಗೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜು ತನಿಖೆಗೆ ಇಳಿದಿದ್ದಾನೆ. ಸಂಪಿಗೆಪುರದ ಪ್ರಾಪರ್ಟಿ ವರ್ಧನ್ ಕಂಪನಿಯ ಕೈತಪ್ಪಿ ಹೋಗಿರುವ ವಿಚಾರದಲ್ಲಿ ಆತನಿಗೆ ಅನುಮಾನ ಬಂದಿದೆ. ಈ ವಿಚಾರದಲ್ಲಿ ಸಂಜು ತನಿಖೆ ನಡೆಸಿದ್ದಾನೆ. ಈ ವಿಚಾರವನ್ನು ಅನು ಎದುರು ಹೇಳಬೇಕು ಎಂಬುದು ಆತನ ಆಲೋಚನೆ ಆಗಿತ್ತು. ಅತ್ತ ಸಂಜುನ ಪತ್ನಿ ಆರಾಧನಾ ಆತನಿಗಾಗಿ ಪರಿತಪಿಸುತ್ತಿದ್ದಾಳೆ. ಆಕೆಗೆ ಮುಂದೇನು ಎನ್ನುವ ಚಿಂತೆ ಕಾಡಿದೆ.
ಝೇಂಡೆಗೆ ಶಾಕ್
ಝೇಂಡೆಗೆ ಸಂಜು ತುಂಬಾ ವಿಚಿತ್ರ ವ್ಯಕ್ತಿಯಾಗಿ ಕಾಣುತ್ತಿದ್ದಾನೆ. ಆತನನ್ನು ಹಿಂಬಾಲಿಸಿಕೊಂಡು ಹೋಗುವ ಕೆಲಸ ಝೇಂಡೆಯಿಂದ ಆಗುತ್ತಿದೆ. ಸಂಪಿಗೆಪುರದ ಪ್ರಾಪರ್ಟಿಗಳ ಸುತ್ತ ಅವನು ತಿರುಗಾಡಿದ್ದನ್ನು ನೋಡಿ ಆತನಿಗೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ಆತ ಯಾರು ಎಂದು ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದ. ಆಗ ಆತನಿಗೆ ಅಸಲಿ ವಿಚಾರ ಗೊತ್ತಾಗಿದೆ.
ಸಂಜುನ ತಾಯಿ ಪ್ರಿಯಾ ಆಸ್ಪತ್ರೆಗೆ ಬಂದಿದ್ದಾಳೆ. ಆತನಿಗೆ ಕೊಡುತ್ತಿರುವ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಲು ಪ್ರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಇದರ ಮಧ್ಯೆ ತನ್ನ ಕೈಯಾರೆ ಎಲ್ಲವನ್ನೂ ಹಾಳು ಮಾಡಿದೆ ಎನ್ನುವ ತಪ್ಪಿತಸ್ಥ ಭಾವನೆ ಅವಳನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ಆರ್ಯವರ್ಧ್ನೇ ಸಂಜು. ಈ ವಿಚಾರವನ್ನು ಪ್ರಿಯಾ ಮುಚ್ಚಿಟ್ಟಿದ್ದಾಳೆ. ಈ ಸತ್ಯವನ್ನು ಯಾರಿಗೂ ಹೇಳದೇ ಒದ್ದಾಡುತ್ತಿದ್ದಳು. ಇದೇ ಸಮಯಕ್ಕೆ ಸರಿಯಾಗಿ ಝೇಂಡೆಯ ಆಗಮನ ಆಗಿದೆ.
‘ಅಮ್ಮಾ ನೀವೇನು ಇಲ್ಲಿ’ ಎಂದು ಕೇಳಿದ್ದಾನೆ ಝೇಂಡೆ. ಮುಂದುವರಿದು, ‘ನಿಮ್ಮ ಕಷ್ಟ ನೋಡೋಕೆ ಆಗುತ್ತಿಲ್ಲ. ಸಂಜು ನಿಜವಾದ ಸಂಜು ಅಲ್ಲ’ ಎಂಬ ವಿಚಾರ ಗೊತ್ತಿದೆ ಎಂಬುದನ್ನು ಹೇಳಿದ್ದಾನೆ. ಇದನ್ನು ಕೇಳಿ ಪ್ರಿಯಾಗೆ ಶಾಕ್ ಆಗಿದೆ. ‘ಕೇಶವ್, ಈ ವಿಚಾರ ನಿನಗೆ ಗೊತ್ತಿತ್ತಾ?’ ಎಂದು ಮರು ಪ್ರಶ್ನೆ ಹಾಕಿದಾಗ ಝೇಂಡೆಗೆ ಶಾಕ್ ಆಗಿದೆ. ತನ್ನ ಊಹೆ ಸರಿ ಇದೆ ಎಂಬುದು ಆತನಿಗೆ ಗೊತ್ತಾಗಿದೆ. ಆ ಬಳಿಕ ಅಸಲಿ ವಿಚಾರ ಏನು ಎಂಬುದನ್ನು ಹೇಳಿದ್ದಾಳೆ. ವಿಶ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಅದೇ ಸಮಯಕ್ಕೆ ಆರ್ಯವರ್ಧನ್ಗೆ ಕಾರು ಅಪಘಾತ ಆಗಿದ್ದು, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದು. ಹೀಗೆ ಪ್ರತಿ ವಿಚಾರವನ್ನು ಬಿಡಿಸಿ ಹೇಳಿದ್ದಾಳೆ ಪ್ರಿಯಾ. ಇದನ್ನು ಕೇಳಿ ಆರ್ಯವರ್ಧನ್ಗೆ ಶಾಕ್ ಆಗಿದೆ.
ಮುಂದಿದೆ ಸಂಕಷ್ಟ?
ಹಗರಣ ಮಾಡುವಲ್ಲಿ ಝೇಂಡೆ ಕಳ್ಳನೋ ಅಥವಾ ಆರ್ಯವರ್ಧನ್ನೋ ಎಂಬ ಗೊಂದಲ ಇದೆ. ಸಂಪಿಗೆಪುರದ ಪ್ರಾಪರ್ಟಿಯನ್ನು ಝೇಂಡೆ ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ. ಆರ್ಯವರ್ಧನ್ಗೆ ಗೊತ್ತಿಲ್ಲದೆ ಝೇಂಡೆ ಈ ಕೆಲಸ ಮಾಡಿದ್ದಾನೆಯೇ ಎಂಬ ಅನುಮಾನ ಇದೆ. ಹಾಗಾದಲ್ಲಿ, ಝೇಂಡೆಗೆ ಸಂಕಷ್ಟ ಎದುರಾಗಬಹುದು. ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರವನ್ನು ಮುಚ್ಚಿಡುವ ನಿರ್ಧಾರಕ್ಕೆ ಝೇಂಡೆ ಬಂದಿದ್ದಾನೆ. ಈ ನಿರ್ಧಾರವನ್ನು ಝೇಂಡೆ ಯಾಕೆ ತೆಗೆದುಕೊಂಡ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ.
ಅನು ಭೇಟಿ ಮಾಡಿದ ಸಂಜು
ಅನು ಗೆಳತಿಯ ಎಂಗೇಜ್ಮೆಂಟ್ ಇದೆ. ಹೀಗಾಗಿ, ಅನು ವಠಾರಕ್ಕೆ ತೆರಳಿದ್ದಾಳೆ. ಅಲ್ಲಿಗೆ ಸಂಜು ಕೂಡ ಬಂದಿದ್ದ. ಕಂಪನಿಯ ಫೈಲ್ ಹಿಡಿದು ಸಾಗಿದ್ದಾನೆ ಆತ. ಸಂಪಿಗೆಪುರದ ಪ್ರಾಪರ್ಟಿ ವರ್ಧನ್ ಕಂಪನಿಯ ಹಿಡಿತ ತಪ್ಪಿ ಹೋದ ಬಗ್ಗೆ ಆತನಿಗೆ ಆತಂಕ ಇದೆ. ಈ ವಿಚಾರವನ್ನು ಅನುಗೆ ವಿವರಿಸಿದ್ದಾನೆ ಸಂಜು. ಆತ ಹೇಳಿದ ಎಲ್ಲಾ ಮಾತನ್ನು ಅನು ಒಪ್ಪಿದ್ದಾಳೆ. ಇದರಿಂದ ಸಂಜುಗೆ ಖುಷಿ ಆಗಿದೆ. ಆಕೆ ತನ್ನ ಮಾತನ್ನು ನಂಬೋಕೆ ಶುರು ಮಾಡಿದ್ದಾಳೆ ಎನ್ನುವ ವಿಚಾರ ತಿಳಿದು ಆತನಿಗೆ ಖುಷಿ ಆಗಿದೆ.