Ranjani Raghavan: ನಟಿ ರಂಜನಿ ರಾಘವನ್ ಪುಸ್ತಕ ಬರೆಯೋಕೆ ಶುರು ಮಾಡಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ
Swipe Right | Ranjani Raghavan Book: ‘ಕನ್ನಡತಿ’ ಸೀರಿಯಲ್ ನಟಿ ರಂಜನಿ ರಾಘವನ್ ಅವರು ‘ಸ್ವೈಪ್ ರೈಟ್’ ಕಾದಂಬರಿ ಬರೆದಿದ್ದಾರೆ. ಅವರ ಬರವಣಿಗೆಯ ಪಯಣ ಆರಂಭ ಆಗಿದ್ದರ ಕುರಿತು ಇಲ್ಲಿದೆ ಆಸಕ್ತಿಕರ ವಿಷಯ.
ನಟನೆಯಲ್ಲಿ ತೊಡಗಿಸಿಕೊಂಡವರು ಬರವಣಿಗೆ ಬಗ್ಗೆ ಗಮನ ನೀಡೋಕೆ ಸಮಯ ಸಿಗೋದು ಕಡಿಮೆ. ಅದರಲ್ಲೂ ಧಾರಾವಾಹಿ ನಟ-ನಟಿಯರು ಪ್ರತಿ ದಿನ ಶೂಟಿಂಗ್ನಲ್ಲೇ ಮುಳುಗಿರುತ್ತಾರೆ. ಅದರ ನಡುವೆಯೂ ಕಥೆ, ಕಾದಂಬರಿ ಬರೆಯಬೇಕು ಎಂದರೆ ಸಮಯ ಹೊಂದಿಸಿಕೊಳ್ಳುವುದು ಸುಲಭದ ಮಾತಲ್ಲ. ಆ ಎಲ್ಲ ನೆಪಗಳನ್ನು ಬದಿಗಿಟ್ಟು ನಟಿ ರಂಜನಿ ರಾಘವನ್ (Ranjani Raghavan) ಅವರು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗಾದರೆ ಅವರಿಗೆ ಬರವಣಿಗೆಯ ತುಡಿತ ಹೆಚ್ಚಿದ್ದು ಹೇಗೆ? ಅವರನ್ನು ಪ್ರೇರೇಪಿಸಿದ ಸಂಗತಿಗಳು ಯಾವವು? ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದಾರೆ. ರಂಜನಿ ರಾಘವನ್ ಅವರ ಎರಡನೇ ಪುಸ್ತಕ ‘ಸ್ವೈಪ್ ರೈಟ್’ (Swipe Right Novel) ಡಿ.7ರಂದು ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ಮಂಸೋರೆ, ಗೀತಸಾಹಿತಿ ಕವಿರಾಜ್ ಮುಂತಾದವರ ಸಮ್ಮುಖದಲ್ಲಿ ‘ಸ್ವೈಪ್ ರೈಟ್’ ಕಾದಂಬರಿ ಬಿಡುಗಡೆ ಮಾಡಲಾಗಿದೆ. ಈ ಮೊದಲು ರಂಜನಿ ಬರೆದ ‘ಕಥೆ ಡಬ್ಬಿ’ ಕಥಾಸಂಕಲನಕ್ಕೆ ಓದುಗರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಈಗ ಎರಡನೇ ಕೃತಿಗೂ ಸಖತ್ ಬೇಡಿಕೆ ಬಂದಿದೆ. ನಟಿಯಾಗಿದ್ದ ತಾವು ಬರವಣಿಗೆಯನ್ನು ಕೈಗೆತ್ತಿಕೊಂಡಿದ್ದು ಹೇಗೆ ಎಂಬ ಬಗ್ಗೆ ರಂಜನಿ ಮಾತನಾಡಿದ್ದಾರೆ.
‘ಶಾಲೆಯಲ್ಲಿ ಸ್ಕಿಟ್ ಮಾಡುವಾಗ ಪರಸ್ಪರ ಚರ್ಚೆ ಮಾಡುತ್ತಿದ್ದೆವು. ಸೀರಿಯಲ್ನಲ್ಲೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕಲಾವಿದರು ಇಲ್ಲಿ ಹೇಳಿದ್ದನ್ನಷ್ಟೇ ಮಾಡಿ ಸುಮ್ಮನಾಗಬೇಕು ಎಂಬ ವಾತಾವರಣ ಎದುರಾಯಿತು. ಒಂದೆರಡು ಬಾರಿ ಏನೋ ಹೇಳಲು ಹೋಗಿ ಬೈಯ್ಯಿಸಿಕೊಂಡಿದ್ದೂ ಆಯ್ತು. ಹೇಳುವ ಅಗತ್ಯ ಇದೆ ಅಂತ ಅನಿಸಿದಾಗಲೂ ಬಾಯಿ ಮುಚ್ಚಿಕೊಂಡಿದ್ದುಂಟು’ ಎಂದಿದ್ದಾರೆ ರಂಜನಿ ರಾಘವನ್. ಇಂಥ ಸಂದರ್ಭ ಎದುರಾಗಲೇ ಅವರಿಗೆ ಬರೆಯಬೇಕು ಎಂಬ ಹಂಬಲ ಶುರುವಾಯಿತು.
ಇದನ್ನೂ ಓದಿ: ರಂಜನಿ ರಾಘವನ್ಗೆ ಸಿಕ್ತು ‘ಜನ ಮೆಚ್ಚಿದ ನಾಯಕಿ’ ಅವಾರ್ಡ್; ಇಲ್ಲಿದೆ ಗ್ಯಾಲರಿ
ಬರೆಯಬೇಕು ಎಂದುಕೊಳ್ಳುವಷ್ಟರಲ್ಲಿ ಅವರು ಸೀರಿಯಲ್ ನಟಿ ಎಂದು ಗುರುತಿಸಿಕೊಂಡಿದ್ದರು. ನಟಿಯಾದವರು ಬರೆಯಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಎದುರಾಗಿತ್ತು. ನಂತರ ಏನಾಯ್ತು ಎಂಬುದನ್ನು ರಂಜನಿ ವಿವರಿಸಿದ್ದಾರೆ. ‘ವಿಕಾಸ್ ನೇಗಿಲೋಣಿ ಅವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನನಗೆ ಲೇಖಕ ಜೋಗಿ ಅವರ ಪರಿಚಯ ಆಯಿತು. ಕೊವಿಡ್ ಸಂದರ್ಭದಲ್ಲಿ ಆಲೋಚನೆ ಮಾಡಲು ಸಮಯ ಸಿಕ್ಕಿತು. ಅದನ್ನು ಜೋಗಿ ಸರ್ ಬಳಿ ಹೇಳಿಕೊಂಡೆ. ಬರೆಯಬೇಕು ಎಂಬುದರಲ್ಲಿ ನನಗೆ ಯಾವುದೇ ಒತ್ತಡ ಇರಲಿಲ್ಲ. ನಂತರ ಅವಧಿ ಆನ್ಲೈನ್ನಲ್ಲಿ ಕಥೆ ಬರೆಯಲು ಆರಂಭಿಸಿದೆ’ ಎಂದು ರಂಜನಿ ಹೇಳಿದ್ದಾರೆ.
ಇದನ್ನೂ ಓದಿ: Kannadathi Serial: ಕನ್ನಡಿಗರಿಗೆ ಟಾಸ್ಕ್ ಕೊಟ್ಟ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್
‘ನನ್ನ ಕಥೆಗಳಿಗೆ ಜನರು ಉತ್ತಮ ಸ್ಪಂದನೆ ನೀಡಿದರು. ಆಗ ನನಗೆ ಧೈರ್ಯ ಬಂತು. ಆ ಕಥೆಗಳನ್ನೇ ಪುಸ್ತಕವಾಗಿಸಿದೆವು. ಅದನ್ನು ಜನರು ಇಷ್ಟಪಟ್ಟಿದ್ದಾರೆ. ನಂತರ ಕಾದಂಬರಿ ಬರೆಯಬೇಕು ಎನಿಸಿತು. ಆಗ ‘ಸ್ವೈಪ್ ರೈಟ್’ ಬರೆಯಲು ಆರಂಭಿಸಿದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಇಲ್ಲಿನ ವಸ್ತು ವಿಷಯವನ್ನೇ ಆಯ್ದುಕೊಂಡೆ’ ಎಂದಿದ್ದಾರೆ ರಂಜನಿ ರಾಘವನ್.
View this post on Instagram
‘ಯಾವುದು ನನ್ನ ಮನಸ್ಸಿನಿಂದ ಬಂದಿದೆಯೋ ಅದು ಹೆಚ್ಚು ನೈಜವಾಗಿರಲಿದೆ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಎಂಬ ವಿಷಯವನ್ನು ಸ್ವೈಪ್ ರೈಟ್ ಪದ ಸೂಚಿಸುತ್ತದೆ. ರಿಯಲ್ ಜಗತ್ತಿಗಿಂತ ವರ್ಚುವಲ್ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಈ ಕಥೆ ಸಮಕಾಲೀನ ಆಗಿದೆ. ಈ ಬರವಣಿಗೆಯ ಜರ್ನಿ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತಿದೆ’ ಎಂದು ರಂಜನಿ ರಾಘವನ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.