‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಸಾನಿಯಾ ಮಧ್ಯೆ ವಾರ್ ನಡೆಯುತ್ತಲೇ ಇರುತ್ತದೆ. ಕೆಲವೊಂದು ವಿಚಾರಗಳಲ್ಲಿ ಶೀತಲ ಸಮರದ ರೀತಿಯಲ್ಲಿ ಕಿತ್ತಾಟ ನಡೆದರೆ ಇನ್ನೂ ಕೆಲ ಸಂದರ್ಭದಲ್ಲಿ ಓಪನ್ ಆಗಿಯೇ ಇಬ್ಬರೂ ಜಗಳ ಆಡಿಕೊಳ್ಳುತ್ತಾರೆ. ಕೆಲವೊಮ್ಮೆ ಅದು ಮಿತಿ ಮೀರಿದ್ದೂ ಇದೆ. ಈಗ ಸಾನಿಯಾಳನ್ನು ಮಟ್ಟಹಾಕಲು ಹರ್ಷ ಪ್ಲ್ಯಾನ್ ಒಂದನ್ನು ರೂಪಿಸಿದ್ದಾನೆ. ಹರ್ಷನ ಪ್ಲ್ಯಾನ್ ಸಕ್ಸಸ್ ಆದರೆ ಸಾನಿಯಾ (Saniya) ಮ್ಯಾನೇಜಿಂಗ್ ಡೈರೆಕ್ಟರ್ ಪೋಸ್ಟ್ನಿಂದ ಕೆಳಗೆ ಇಳಿಯೋದು ಪಕ್ಕಾ ಆಗಲಿದೆ. ಅಷ್ಟಕ್ಕೂ ಹರ್ಷ ಮಾಡಿದ್ದೇನು? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.
ಹರ್ಷನ ಪತ್ನಿ ಭುವಿಯನ್ನು ಕೆಲಸದಿಂದ ತೆಗೆಯಲು ಸಾನಿಯಾ ಪ್ಲ್ಯಾನ್ ಒಂದನ್ನು ರೂಪಿಸಿದ್ದಳು. ಈ ಸಂದರ್ಭದಲ್ಲಿ ಓರ್ವ ಯುವಕನನ್ನು ಆಕೆ ಆಯ್ಕೆ ಮಾಡಿಕೊಂಡಿದ್ದಳು. ಆ ಕೆಲಸವನ್ನು ಆತ ಯಶಸ್ವಿಯಾಗಿ ಪೂರ್ತಿಗೊಳಿಸಿದ್ದ. ಅಂದುಕೊಂಡಂತೆ ಸಾನಿಯಾ ಜಾಬ್ ಹೋಗಿತ್ತು. ಈ ಕಾರಣಕ್ಕೆ ತನ್ನ ಬಲಗೈ ಬಂಟನ ಮೇಲೆ ಸಾನಿಯಾಗೆ ಸಾಕಷ್ಟು ನಂಬಿಕೆ ಬಂದಿದೆ. ಹೀಗಾಗಿ, ಉಂಗುರದ ಮೇಲಿದ್ದ ಡೈಮಂಡ್ ಮಾರಿ ಆತನಿಗೆ ದುಡ್ಡು ನೀಡಿದ್ದಾಳೆ. ಅಷ್ಟೇ ಅಲ್ಲ, ರತ್ನಮಾಲಾ ಬಳಿ ಇರುವ ಪ್ರಮುಖ ಫೈಲ್ ಅನ್ನು ಕದ್ದು ತರುವಂತೆ ಸೂಚಿಸಿದ್ದಾಳೆ.
ಸಾನಿಯಾ ಅಂದುಕೊಂಡಿದ್ದೇ ಒಂದು ಅಲ್ಲಿ ನಡೆದಿದ್ದೇ ಇನ್ನೊಂದು. ಆಕೆಯ ಸಹಚರ ಕೆಲಸದ ವಿಚಾರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದ. ಫೈಲ್ ಕದ್ದು ತರುವಾಗ ಅದು ರತ್ನಮಾಲಾ ಕಾಲ ಕೆಳಗೆ ಬಿದ್ದು ಹೋಗಿದೆ. ಇದನ್ನು ನೋಡಿದ ರತ್ನಮಾಲಾ ಬೈಯ್ಯಬೇಕು ಅಂದುಕೊಂಡಿದ್ದಳು. ಆದರೆ, ಬೈದಿಲ್ಲ. ಬದಲಿಗೆ ಮಾತಿನಲ್ಲೇ ತಿವಿದಿದ್ದಾಳೆ. ಇದಾದ ಮರುದಿನ ಸಾನಿಯಾ ಸಹಚರ ಗನ್ ಹಾಗೂ ಚಾಕು ಹಿಡಿದು ಹರ್ಷನ ಎದುರು ಪ್ರತ್ಯಕ್ಷನಾಗಿದ್ದಾನೆ!
ಹರ್ಷ ದೂರವಾಣಿಯಲ್ಲಿ ಏನನ್ನೋ ಮಾತನಾಡುತ್ತಿದ್ದ. ಆ ಸಂದರ್ಭಕ್ಕೆ ಸರಿಯಾಗಿ ಸಾನಿಯಾ ಸಹಚರ ಹರ್ಷನ ಎದುರು ಪ್ರತ್ಯಕ್ಷನಾಗಿದ್ದಾನೆ. ಅವನ ಕೈನಲ್ಲಿ ಗನ್ ಹಾಗೂ ಚಾಕು ಇತ್ತು. ಇದನ್ನು ನೋಡಿದ ತಕ್ಷಣವೇ ಹರ್ಷನಿಗೆ ಕೋಪ ಉಕ್ಕಿದೆ. ಆತನಿಗೆ ಬದಲಾಗುವಂತೆ ಈ ಮೊದಲೇ ಹರ್ಷ ಬುದ್ಧಿವಾದ ಹೇಳಿದ್ದ. ಆದರೆ, ಈತ ಬದಲಾಗುವವನಲ್ಲ ಎಂದು ಭಾವಿಸಿ ಆತನ ಮೇಲೆ ಹರ್ಷ ಹಲ್ಲೆ ಮಾಡಿದ್ದಾನೆ. ಮುಖಮೂತಿ ನೋಡದೆ ಹೊಡೆದಿದ್ದಾನೆ.
ಹರ್ಷನ ಏಟು ಬೀಳುತ್ತಿದ್ದಂತೆ ಸಾನಿಯಾ ಸಹಚರ ಅಸಲಿ ವಿಚಾರ ಏನು ಎಂಬುದನ್ನು ಒಪ್ಪಿಕೊಂಡಿದ್ದಾನೆ. ‘ನನ್ನ ತಾಯಿ ಆಸ್ಪತ್ರೆ ಸೇರಿದ್ದರು. ಅವರನ್ನು ಭುವಿ ಅವರೇ ಬದುಕಿಸಿದ್ದಾರೆ. ನಮ್ಮ ಟೀಚರ್ಗೆ ಮೋಸ ಮಾಡೋಕೆ ಮನಸ್ಸು ಬರುತ್ತಿಲ್ಲ. ಹೀಗಾಗಿ ಸರೆಂಡರ್ ಆಗೋಕೆ ಬಂದಿದ್ದೇನೆ. ಈ ಗನ್ ಹಾಗೂ ಚಾಕು ನೀಡಿದ್ದು ಸಾನಿಯಾ. ನನ್ನ ರಕ್ಷಣೆಗೆಂದು ಅವರೇ ನನಗೆ ಇದನ್ನೆಲ್ಲ ನೀಡಿದ್ದರು’ ಎಂದು ತಪ್ಪು ಒಪ್ಪಿಕೊಂಡಿದ್ದಾನೆ ಆತ. ಈ ಮಾತನ್ನು ಕೇಳಿ ಹರ್ಷನಿಗೆ ಅಚ್ಚರಿ ಆಗಿದೆ. ಗನ್ ಹಿಡಿದು ಆತ ಸಾಯಿಸಲು ಬಂದಿದ್ದಾನೆ ಎಂದು ಹರ್ಷ ಭಾವಿಸಿದ್ದ. ಆದರೆ ಅಲ್ಲಿ ನಡೆದಿದ್ದೇ ಬೇರೆ.
ಇದನ್ನೂ ಓದಿ: ಸಾನಿಯಾ ಬಲಗೈ ಬಂಟನ ಅವಾಂತರ; ರತ್ನಮಾಲಾ ಎದುರು ಹೊರ ಬೀಳಲಿದೆಯೇ ಅಸಲಿ ವಿಚಾರ?
ಸಾನಿಯಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಹರ್ಷ ಕಾಯುತ್ತಲೇ ಇದ್ದಾನೆ. ಈಗ ಸಾನಿಯಾ ಬಲಗೈ ಬಂಟನೇ ಬಂದು ಹರ್ಷನ ಬಳಿ ತಪ್ಪು ಒಪ್ಪಿಕೊಂಡಿದ್ದಾನೆ. ಈ ಕಾರಣದಿಂದ ಹರ್ಷನಿಗೆ ತನ್ನ ಹಗೆ ತೀರಿಸಿಕೊಳ್ಳಲು ಒಂದೊಳ್ಳೆಯ ಅವಕಾಶ ಸಿಕ್ಕಂತೆ ಆಗಿದೆ. ಸಾನಿಯಾ ಎದುರು ಈತನನ್ನು ಕರೆದುಕೊಂಡು ಹೋಗಿ ನಿಲ್ಲಿಸಿ, ಅಸಲಿ ವಿಚಾರ ಬಯಲು ಮಾಡಿದರೆ ಸಾನಿಯಾ ಮತ್ತೊಂದು ಮುಖ ಅನಾವರಣ ಆಗಬಹುದು ಎಂಬುದು ಹರ್ಷನ ಆಲೋಚನೆ. ಧಾರಾವಾಹಿಗೆ ಯಾವ ರೀತಿಯಲ್ಲಿ ಟ್ವಿಸ್ಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಶ್ರೀಲಕ್ಷ್ಮಿ ಎಚ್.