ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು
ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಹರ್ಷ ಹಾಗೂ ಭುವಿಗೆ ಡಿವೋರ್ಸ್ ಕೊಡಿಸಬೇಕು ಎಂದು ವರು ಪ್ಲ್ಯಾನ್ ರೂಪಿಸಿದ್ದಳು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಳು. ಇದು ಯಶಸ್ಸು ಕಂಡಿದೆ. ಭುವಿ ಬಳಿ ಡಿವೋರ್ಸ್ ಪತ್ರಕ್ಕೆ ಸಹಿ ಹಾಕಿಸಿದ್ದಾಳೆ.
‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ತನ್ನ ಎಲ್ಲಾ ಆಸ್ತಿಯನ್ನು ಮಗ ಹರ್ಷನಿಗೆ ಬರೆಯದೇ ಸೊಸೆ ಭುವಿಗೆ ಬರೆದಿದ್ದಾಳೆ. ಇದು ಆಕೆಯ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಹೇಳಲೂ ಆಗದೇ ಬಿಡಲೂ ಆಗದೆ ಆಕೆ ಒದ್ದಾಡುತ್ತಿದ್ದಾಳೆ. ಈಗ ಹರ್ಷನ ಎದುರು ಎಲ್ಲವನ್ನೂ ಹೇಳಬೇಕು ಎಂದುಕೊಂಡಿದ್ದಳು. ಆಗಲೇ ಹರ್ಷ ತನ್ನ ನಿಲುವು ಹೇಳಿದ್ದ. ಇದನ್ನು ಕೇಳಿ ರತ್ನಮಾಲಾ ಕೋಮಾಗೆ ಹೋಗಿದ್ದಾಳೆ. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಹರ್ಷನಿಗೆ ಹೇಳಬೇಕು ಎಂದುಕೊಂಡಿದ್ದ ಆಸ್ತಿ ವಿಚಾರ ಮಾತು ರತ್ನಮಾಲಾ ಮನಸ್ಸಲ್ಲೇ ಉಳಿದಿದೆ.
ಮಾಲಾ ಸಂಸ್ಥೆಗೆ ರತ್ನಮಾಲಾ ಎಂ.ಡಿ. ಆಗಿದ್ದಳು. ತನಗೆ ಮರೆವಿನ ಕಾಯಿಲೆ ಶುರುವಾಗಿದೆ ಎಂಬುದು ಆಕೆಗೆ ಈ ಮೊದಲೇ ಗೊತ್ತಾಗಿದೆ. ಹೀಗಾಗಿ, ತಾನು ಸಾಯುವುದಕ್ಕೂ ಮೊದಲು ಎಲ್ಲಾ ಆಸ್ತಿಯನ್ನು ಭುವಿಯ ಹೆಸರಿಗೆ ಬರೆದಿರುವ ವಿಚಾರವನ್ನು ಹರ್ಷನಿಗೆ ಹೇಳಬೇಕು ಎಂದು ಆಕೆ ಅಂದುಕೊಂಡಿದ್ದಳು. ಅಂತೆಯೇ ಆಕೆ ಹೇಳೋಕೆ ಪ್ರಯತ್ನ ಮಾಡಿದಳು. ಅಷ್ಟರಲ್ಲಾಗಲೇ ಹರ್ಷ ತನ್ನ ನಿರ್ಧಾರವನ್ನು ಹೇಳಲು ಶುರು ಮಾಡಿದ.
ಸಾನಿಯಾಳಿಗೆ ಬುದ್ಧಿ ಕಲಿಸಬೇಕು ಎಂಬುದು ಹರ್ಷನ ಆಲೋಚನೆ. ಹರ್ಷನನ್ನು ಕೊಲೆ ಮಾಡಲು ಸಾನಿಯಾ ಈ ಮೊದಲು ಪ್ರಯತ್ನಿಸಿದ್ದಳು. ವರುಧಿನಿಗೂ ತೊಂದರೆ ಆಗಿತ್ತು. ಈಗ ಹರ್ಷನನ್ನು ಜೈಲಿಗೆ ಕಳುಹಿಸುವ ಆಲೋಚನೆಯಲ್ಲಿ ಸಾನಿಯಾ ಇದ್ದಾಳೆ. ಹೀಗಿರುವಾಗಲೇ ಆಕೆಯನ್ನು ಕೆಲಸದಿಂದ ತೆಗೆದು ತಾನೇ ಎಂಡಿ ಪಟ್ಟಕ್ಕೆ ಏರಿದ್ದಾನೆ ಹರ್ಷ. ಈ ವಿಚಾರವನ್ನು ಅಮ್ಮಮ್ಮನ ಎದುರು ಹರ್ಷ ಹೇಳಿಕೊಂಡಿದ್ದಾನೆ. ಒಂದೊಂದಾಗಿ ಎಲ್ಲಾ ವಿಚಾರ ಹೇಳುತ್ತಿದ್ದಂತೆ ರತ್ನಮಾಲಾಗೆ ಶಾಕ್ ಆಗಿದೆ. ಹರ್ಷ ಅಧಿಕಾರಕ್ಕಾಗಿ ಸಾಕಷ್ಟು ಆಸೆಪಟ್ಟಿದ್ದ ಎಂಬುದು ರತ್ನಮಾಲಾಗೆ ಅರಿವಾಗಿದೆ. ಈ ಶಾಕ್ನಿಂದ ಆಕೆ ಕೋಮಾಗೆ ಹೋಗಿದ್ದಾಳೆ. ಸದ್ಯದ ಪರಿಸ್ಥಿತಿಯಲ್ಲಿ ಆಕೆ ಚೇತರಿಕೆ ಕಾಣೋದು ಅನುಮಾನವೇ. ಈಗಾಗಲೇ ಭುವಿಯ ಹೆಸರಿಗೆ ಎಲ್ಲಾ ಆಸ್ತಿ ಬರೆದಿಟ್ಟಿರುವುದರಿಂದ ಮುಂದಿನ ಎಂಡಿಯಾಗಿ ಆಕೆಯೇ ಅಧಿಕಾರ ವಹಿಸಿಕೊಳ್ಳಲಿದ್ದಾಳೆ. ಇದು ಗೊತ್ತಾಗೋದು ಯಾವಾಗ ಅನ್ನೋದು ಸದ್ಯದ ಕುತೂಹಲ.
ವರು ಬಳಿ ಸಹಾಯ ಕೇಳಿದ ಹರ್ಷ
ಹರ್ಷನ ವಿರುದ್ಧ ದೂರು ನೀಡಲು ಸಾನಿಯಾ ಪ್ಲ್ಯಾನ್ ರೂಪಿಸಿದ್ದಾಳೆ. ಆತ ಗನ್ ಎತ್ತಿ ಶೂಟ್ ಮಾಡಿದ್ದ. ಹೀಗಾಗಿ, ಈ ಸಂಬಂಧ ಸಾನಿಯಾ ಕೇಸ್ ದಾಖಲಿಸಿದರೆ ಹರ್ಷನನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿ ಮಾಧ್ಯಮದವರ ಬಳಿ ವಿಡಿಯೋ ಕೂಡ ಇದೆ. ಇದನ್ನು ಪ್ರಮುಖ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲು ಸಾನಿಯಾ ಪ್ಲ್ಯಾನ್ ರೂಪಿಸಿದ್ದಾಳೆ. ಈ ಕಾರಣಕ್ಕೆ ಹರ್ಷ ನೇರವಾಗಿ ವರುಧಿನಿ ಬಳಿ ತೆರಳಿ ಸಹಾಯ ಕೇಳಿದ್ದಾನೆ.
ಸಾನಿಯಾಗೆ ಅಚ್ಚರಿ ತಂದ ವರು ಹೇಳಿಕೆ
ಹರ್ಷನಿಗೆ ಸಹಾಯ ಮಾಡೋಕೆ ವರು ಒಪ್ಪಿದ್ದಾಳೆ. ಹೀಗಾಗಿ, ಆಕೆ ನೇರವಾಗಿ ಸಾನಿಯಾ ಬಳಿ ತೆರಳಿ ಆಕೆಗೆ ಎಚ್ಚರಿಕೆ ನೀಡಿದ್ದಾಳೆ. ‘ಹರ್ಷ ನಿಮ್ಮ ಮೇಲೆ ಗನ್ ಎತ್ತಿದ್ದಕ್ಕೆ ಸಾಕ್ಷಿ ಇದೆ. ಆದಾಗ್ಯೂ ಅವರು ಅಷ್ಟು ಕೂಲ್ ಆಗಿದ್ದಾರೆ ಎಂದರೆ ನಿಮ್ಮ ವಿರುದ್ಧ ಯಾವುದೋ ದೊಡ್ಡ ಸಾಕ್ಷ್ಯ ಇದೆ ಎಂದೇ ಅರ್ಥವಲ್ಲವೇ’ ಎಂದು ಸಾನಿಯಾ ತಲೆಗೆ ವರು ಹುಳ ಬಿಟ್ಟಿದ್ದಾಳೆ. ಇದನ್ನು ಕೇಳಿ ಸಾನಿಯಾಗೆ ಶಾಕ್ ಆಗಿದೆ. ಈ ಮೊದಲು ರತ್ನಮಾಲಾಳನ್ನು ಕೊಲ್ಲಲು ಸಾನಿಯಾ ಪ್ರಯತ್ನಿಸಿದ್ದಳು. ಈ ವಿಚಾರದಲ್ಲಿ ಆಕೆಗೆ ಭಯ ಇದೆ. ಹೀಗಾಗಿ, ಸೈಲೆಂಟ್ ಆಗುವ ಸೂಚನೆ ನೀಡಿದ್ದಾಳೆ.
ಶ್ರೀಲಕ್ಷ್ಮಿ ಎಚ್.