‘ಕಾಂತಾರಾ’ ಸಿನಿಮಾ (Kantara Movie) ಈ ಪರಿ ಹವಾ ಸೃಷ್ಟಿ ಮಾಡುತ್ತದೆ ಎನ್ನುವ ಊಹೆ ಚಿತ್ರತಂಡದವರಿಗೂ ಇರಲಿಲ್ಲ. ಎಲ್ಲರೂ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮೋಡಿಯನ್ನು ಈ ಸಿನಿಮಾ ಮಾಡಿದೆ. ಪರಭಾಷೆಯಲ್ಲೂ ಚಿತ್ರ ರಿಲೀಸ್ ಆಗಿದ್ದು, ಅಲ್ಲಿಯೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ರಿಷಬ್ ಶೆಟ್ಟಿಯ ಸಿನಿಮಾ ನೋಡಿದ್ದಾರೆ. ಈ ಕಾರಣಕ್ಕೆ ಸಿನಿಮಾದ ಕಲೆಕ್ಷನ್ ಹೆಚ್ಚಿದೆ. ವಿಶೇಷ ಎಂದರೆ ಈ ಚಿತ್ರ ಈಗ 100 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ವಿಶೇಷ ದಾಖಲೆ ಬರೆದಿದೆ.
‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಬಾಯಿ ಮಾತಿನ ಪ್ರಚಾರ ಜೋರಾಗಿಯೇ ಸಿಕ್ಕಿತು. ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿತು. ಸಿನಿಮಾ ನೋಡಿದ ಪ್ರೇಕ್ಷಕರು ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ದಿನ ಕಳೆದಂತೆ ಸಿನಿಮಾದ ಕಲೆಕ್ಷನ್ ಹೆಚ್ಚುತಲೇ ಹೋಯಿತು. ಇನ್ನು, ಸಿನಿಮಾ ಡಬ್ ಮಾಡಿ ತೆರೆಗೆ ತರುವ ಒತ್ತಾಯ ಬಂದಿದ್ದರಿಂದ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಮಾಡಲಾಗಿದೆ. ಹೀಗಾಗಿ, ಕಳೆದ ವೀಕೆಂಡ್ನಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ.
ಶುಕ್ರವಾರ (ಅಕ್ಟೋಬರ್ 14) ‘ಕಾಂತಾರ’ ಸಿನಿಮಾದ ಹಿಂದಿ ವರ್ಷನ್ ರಿಲೀಸ್ ಆಗಿದೆ. ಈ ಚಿತ್ರ ಇಲ್ಲಿವರೆಗೆ ಹಿಂದಿಯಲ್ಲಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸೋಮವಾರ ಕೂಡ ಈ ಚಿತ್ರ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆ ಇದೆ. ಈ ಚಿತ್ರದ ತೆಲುಗು ವರ್ಷನ್ ಕೂಡ ಮೋಡಿ ಮಾಡುತ್ತಿದೆ. ಶನಿವಾರ (ಸೆಪ್ಟೆಂಬರ್ 15) ತೆಲುಗಿನಲ್ಲಿ ರಿಲೀಸ್ ಆದ ಈ ಚಿತ್ರ ಕೇವಲ ಎರಡೇ ದಿನಕ್ಕೆ 10 ಕೋಟಿ ಬಾಚಿಕೊಂಡಿದೆ ಎಂದು ವರದಿ ಆಗಿದೆ.
ತಮಿಳಿನವರೂ ‘ಕಾಂತಾರ’ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ತಮಿಳುನಾಡಿನಲ್ಲಿ ಸೋಮವಾರ (ಸೆಪ್ಟೆಂಬರ್ 29) ‘ಕಾಂತಾರ’ ಚಿತ್ರಕ್ಕೆ ಥಿಯೇಟರ್ ಸಂಖ್ಯೆ ಹೆಚ್ಚಿಸಲಾಗಿದೆ. ಸೆ.30ಕ್ಕೆ ರಿಲೀಸ್ ಆದ ‘ಪೊನ್ನಿಯಿನ್ ಸೆಲ್ವನ್’ ಜಾಗದಲ್ಲಿ ‘ಕಾಂತಾರ’ ಚಿತ್ರ ಆವರಿಸಿಕೊಳ್ಳುತ್ತಿದೆ. ತಮಿಳುನಾಡಿನಲ್ಲಿ ಅನೇಕ ಕಡೆಗಳಲ್ಲಿ ಈ ಸಿನಿಮಾಗೆ ಮುಂಜಾನೆ ಶೋ ನೀಡಲಾಗುತ್ತಿದೆ.
ಇದನ್ನೂ ಓದಿ: Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
ಸದ್ಯ ‘ಕಾಂತಾರ’ 100 ಕೋಟಿ ಗಳಿಕೆ ಮಾಡಿದೆ. ಪರಭಾಷೆಯವರಿಗೆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿರುವುದರಿಂದ 200 ಕೋಟಿ ರೂ. ಕ್ಲಬ್ ಸೇರಲು ಹೆಚ್ಚು ದಿನ ಬೇಕಾಗದೆ ಇರಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಊಹಿಸುತ್ತಿದ್ದಾರೆ.