ಗಿಲ್ಲಿ ಬಗ್ಗೆ ಗುಟ್ಟಾಗಿ ಮಾತಾಡಿದ ಕಾವ್ಯಾ ಫ್ಯಾಮಿಲಿ: ಕೂಡಲೇ ಹೊರಗೆ ಕಳಿಸಿದ ಬಿಗ್ ಬಾಸ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಫಿನಾಲೆ ಹತ್ತಿರ ಆಗುತ್ತಿದೆ. ಹಾಗಾಗಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳ ಕುಟುಂಬದವರು ಒಬ್ಬೊಬ್ಬರಾಗಿಯೇ ಬಿಗ್ ಬಾಸ್ ಮನೆಗೆ ಬಂದು ಹೋಗುತ್ತಿದ್ದಾರೆ. ಇತ್ತೀಚೆಗೆ ಕಾವ್ಯಾ ಅವರ ಸಹೋದರ ಕಾರ್ತಿಕ್ ಹಾಗೂ ತಾಯಿ ಸಾವಿತ್ರಿ ಅವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಆಗ ಒಂದು ತಪ್ಪು ಮಾಡಿದರು.

ಬಿಗ್ ಬಾಸ್ ಮನೆಗೆ ಕಾವ್ಯಾ ಅವರ ಕುಟುಂಬದವರು ಬಂದಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಅವರನ್ನು ವಾಪಸ್ ಕಳಿಸಲಾಗಿದೆ. ಬಿಗ್ ಬಾಸ್ (BBK 12) ಮನೆಯ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಈ ಘಟನೆಯಿಂದಾಗಿ ಕಾವ್ಯಾ ಶೈವ (Kavya Shaiva) ಅವರಿಗೆ ತುಂಬಾ ನೋವಾಗಿದೆ. ತಾಯಿ ಮತ್ತು ತಮ್ಮ ದಿಢೀರ್ ಅಂತ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವ ಪರಿಸ್ಥಿತಿ ಬಂತಲ್ಲ ಎಂದು ಕಾವ್ಯಾ ಅವರು ಕಣ್ಣೀರು ಹಾಕಿದ್ದಾರೆ. ಗಿಲ್ಲಿ ನಟ (Gilli Nata) ಬಗ್ಗೆ ಕಾವ್ಯಾ ಕುಟುಂಬದವರು ಗುಟ್ಟಾಗಿ ಮಾತನಾಡಿದ್ದೇ ಇದಕ್ಕೆಲ್ಲ ಕಾರಣ ಆಗಿದೆ.
ಹೊರಗಿನಿಂದ ಬಂದ ಕುಟುಂಬದವರು ಬಿಗ್ ಬಾಸ್ ಮನೆಗೆ ಸಂಬಂಧಿಸಿದ ಹೊರ ಜಗತ್ತಿನ ವಿಷಯಗಳನ್ನು ಇಲ್ಲಿ ಚರ್ಚೆ ಮಾಡುವುದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಇದನ್ನು ಎಲ್ಲರಿಗೂ ಮೊದಲೇ ತಿಳಿಸಲಾಗಿರುತ್ತದೆ. ಆದರೂ ಕೂಡ ಕಾವ್ಯಾ ಕುಟುಂಬದವರು ಆ ನಿಮಯ ಉಲ್ಲಂಘನೆ ಮಾಡಿದರು. ಗಿಲ್ಲಿ ನಟ ಬಗ್ಗೆ ಅವರು ಗುಟ್ಟಾಗಿ ಮಾತನಾಡಿದರು.
‘ನೋಡುವವರಿಗೆ ನೀನು ಆಡುತ್ತಿಲ್ಲ ಅಂತೇನೂ ಕಾಣಿಸುತ್ತಿಲ್ಲ. ನೀನು ಹಾಕುತ್ತಿರುವ ಎಫರ್ಟ್ಸ್ ಕಾಣಿಸುತ್ತಿದೆ. ನೀನು ಜಾಸ್ತಿ ಕಾಣಿಸಿಕೊಳ್ಳಬೇಕು. ತಲೆ ಕೆಡಿಸಿಕೊಳ್ಳಬೇಡ. ನಿನ್ನ ಮತ್ತು ಗಿಲ್ಲಿ ಸ್ನೇಹ ನೆಕ್ಟ್ಸ್ ಲೆವೆಲ್ನಲ್ಲಿ ಇದೆ. ನಾಮಿನೇಷನ್ನಲ್ಲಿ ಅವನ ಹೆಸರು ತೆಗೆದುಕೊಳ್ಳುತ್ತೀಯ. ಆದರೂ ಅವನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಕಾವ್ಯಾಗೆ ಕಾರ್ತಿಕ್ ಹೇಳಿದರು. ಅಷ್ಟು ಹೊತ್ತಿಗಾಗಲೇ ಬಿಗ್ ಬಾಸ್ ಒಂದು ಬಾರಿ ವಾರ್ನಿಂಗ್ ನೀಡಿದರು!
‘ಗಿಲ್ಲಿಯಿಂದ ಕಾವ್ಯಾ ಅಂತ ಹೇಳಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ. ಸುದೀಪ್ ಸರ್ ಕೂಡ ಅದನ್ನು ಹೇಳಿದ್ದರು. ಅವರ ಆಟ ಅವರಿಗೆ ಆಡೋಕೆ ಬಿಡು ಅಂತ ಗಿಲ್ಲಿಗೆ ಸುದೀಪ್ ಸರ್ ಹೇಳಿದ್ದರು. ಮತ್ತೆ ಅವನು ಕರೆದಾಗ ಹೋದರೆ ನಾನಾಗಿಯೇ ಇದನ್ನೆಲ್ಲ ಮಾಡುತ್ತಿದ್ದೇನೆ ಅಂತ ಆಗುತ್ತದೆ. ಒಬ್ಬರನ್ನು ಕೆಳಗೆ ಇಟ್ಟು ಮಾತಾಡೋದು ಅವನ ಉದ್ದೇಶ ಆಗಿರಲ್ಲ. ಮಾತಿನ ಭರದಲ್ಲಿ ಹೇಳುತ್ತಾನೆ. ಅದನ್ನು ಕಟ್ ಮಾಡಲು ನಾನು ಅವನನ್ನು ನಾಮಿನೇಟ್ ಮಾಡಿದೆ. ಅದು ಹೊರಗಡೆ ಬೇರೆ ರೀತಿ ಬಿಂಬಿತ ಆಗಿದೆಯಾ’ ಎಂದು ಕಾವ್ಯಾ ಅವರು ಮತ್ತೆ ವಿಚಾರಿಸಿದರು.
‘ಗಿಲ್ಲಿಗೆ ಯಾವಾಗಲೂ ಅಣ್ಣ ಅಣ್ಣ ಅನ್ನೋಕೆ ಹೋಗಬೇಡ. ಅವನು ನಿನ್ನ ಫ್ರೆಂಡ್’ ಎಂದು ಕಾವ್ಯಾ ಅವರ ತಾಯಿ ಹೇಳಿದರು. ‘ಇಷ್ಟು ದಿನ ನಿಮ್ಮಿಬ್ಬರ ಸ್ನೇಹ ಬ್ರೇಕ್ ಆಗದೇ ಬಂದಿದೆ. ಅದು ನೆಕ್ಸ್ಟ್ ಲೆವೆಲ್’ ಎಂದು ಕಾವ್ಯಾ ಅವರ ಸಹೋದರ ಹೇಳಿದರು. ಇದನ್ನೆಲ್ಲ ಮಾತನಾಡಿದ್ದಕ್ಕಾಗಿ ಬಿಗ್ ಬಾಸ್ ಕ್ರಮ ತೆಗೆದುಕೊಳ್ಳಲು ಮುಂದಾದರು. ಆಗ ಎಲ್ಲರಿಗೂ ಶಾಕ್ ಆಯಿತು.
ಇದನ್ನೂ ಓದಿ: ಕಾವ್ಯಾ ಜತೆ ಮದುವೆ ಬಗ್ಗೆ ಮನಸಾರೆ ಮಾತಾಡಿದ ಗಿಲ್ಲಿ: ಆ ಕಡೆಯಿಂದ ಬಂದ ಉತ್ತರ ಏನು?
‘ಹೊರಜಗತ್ತಿನ ಮಾಹಿತಿಯನ್ನು ಈ ಮನೆಯಲ್ಲಿ ಅತಿಥಿಗಳು ಹಂಚಿಕೊಳ್ಳುವಂತಿಲ್ಲ. ಆ ವಿಚಾರವಾಗಿ ಒಂದು ಎಚ್ಚರಿಕೆ ನೀಡಲಾಗಿತ್ತು. ಆದರೂ ಕೂಡ ಅದೇ ತಪ್ಪನ್ನು ಮತ್ತೆ ಮಾಡಿದ್ದೀರಿ. ಈ ಮನೆಯ ಮೂಲ ನಿಯಮದ ಉಲ್ಲಂಘನೆ ಆಗಿದೆ. ಕಾರ್ತಿಕ್ ಹಾಗೂ ಸಾವಿತ್ರಿ ನೀವಿಬ್ಬರು ಈ ಕೂಡಲೇ ಮುಖ್ಯದ್ವಾರದಿಂದ ಹೊರಗೆ ಬರಬೇಕು’ ಎಂದು ಬಿಗ್ ಬಾಸ್ ಆದೇಶಿಸಿದರು. ಕೂಡಲೇ ಅವರಿಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಯಿತು. ಎಲ್ಲರೂ ಕ್ಷಮೆ ಕೇಳಿದರೂ ಕೂಡ ಬಿಗ್ ಬಾಸ್ ಕ್ಷಮಿಸಲಿಲ್ಲ. ಕಾವ್ಯ ಕಣ್ಣೀರು ಹಾಕಿದರೂ ಕೂಡ ಬಿಗ್ ಬಾಸ್ ಮನಸ್ಸು ಬದಲಾಗಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




