ಸ್ವಯಂವರ ಟಾಸ್ಕ್‌ನಲ್ಲಿ ಸೌಂದರ್ಯಾ ಬಯಾಸ್ಡ್? ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್

 ಬಿಗ್ ಬಾಸ್ ಸ್ವಯಂವರ ಟಾಸ್ಕ್ ವೇಳೆ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ಅವರು ಯಶಸ್ ಅವರನ್ನು ಆಯ್ಕೆ ಮಾಡಿದ್ದು ಬಯಾಸ್ಡ್ ಎಂಬ ಆರೋಪ ಕೇಳಿಬಂದಿತ್ತು. ಆದರೆ ವೀಕೆಂಡ್ ಪಂಚಾಯಿತಿಯಲ್ಲಿ ವಿಡಿಯೋ ತುಣುಕುಗಳನ್ನು ತೋರಿಸಿ ಗಗನ್ ತಂಡದ ಸೋಲಿನ ಮನಸ್ಥಿತಿಯನ್ನು ವಿವರಿಸಿದ ಕಿಚ್ಚ ಸುದೀಪ್ ಸೌಂದರ್ಯಾ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ವಯಂವರ ಟಾಸ್ಕ್‌ನಲ್ಲಿ ಸೌಂದರ್ಯಾ ಬಯಾಸ್ಡ್? ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್
ಸೌಂದರ್ಯಾ-ಸುದೀಪ್
Edited By:

Updated on: Oct 31, 2026 | 11:23 PM

ಬಿಗ್ ಬಾಸ್ ಕನ್ನಡದ ಈ ವಾರದ ಆಟದಲ್ಲಿ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ವಿರುದ್ಧ ‘ಬಯಾಸ್ಡ್’ (ಪಕ್ಷಪಾತ) ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ವಾರದ ಪ್ರಮುಖ ಆಟವಾಗಿದ್ದ ‘ಸ್ವಯಂವರ’ ಟಾಸ್ಕ್‌ನಲ್ಲಿ ಯಶಸ್ ಹಾಗೂ ಗಗನ್ ಎರಡು ಪ್ರತ್ಯೇಕ ತಂಡಗಳಾಗಿದ್ದರು. ಈ ಇಬ್ಬರ ಪೈಕಿ ಯಾರಾದರೂ ಒಬ್ಬರನ್ನು ವಿಜೇತರೆಂದು ಸೌಂದರ್ಯಾ ಆಯ್ಕೆ ಮಾಡಬೇಕಿತ್ತು. ಟಾಸ್ಕ್ ಮುಗಿದ ಬಳಿಕ ಸೌಂದರ್ಯಾ ಅವರು ಯಶಸ್ ಅವರ ಹೆಸರನ್ನು ವಿಜೇತರೆಂದು ಘೋಷಿಸಿದರು. ಆದರೆ ಯಶಸ್ ತಮಗೆ ಆಪ್ತನೆಂಬ ಕಾರಣಕ್ಕೇ ಸೌಂದರ್ಯಾ ಈ ರೀತಿ ಪಕ್ಷಪಾತ ಧೋರಣೆ ತೋರಿದ್ದಾರೆ ಎಂದು ಮನೆಯಲ್ಲಿ ಕೆಲವರು ಆರೋಪಿಸಿದ್ದರು.

ಈ ಕುರಿತು ವಾರದ ಪಂಚಾಯಿತಿಯಲ್ಲಿ ವೀಕ್ಷಕರ ಮತ್ತು ಸ್ಪರ್ಧಿಗಳ ಮುಖಾಂತರ ಚರ್ಚೆ ನಡೆಸಿದ ನಿರೂಪಕ ಕಿಚ್ಚ ಸುದೀಪ್, “ಸೌಂದರ್ಯಾ ನಿಜಕ್ಕೂ ಬಯಾಸ್ಡ್ ಆಗಿದ್ರಾ?” ಎಂದು ನೇರ ಪ್ರಶ್ನೆ ಹಾಕಿದರು. ಈ ಬಗ್ಗೆ ಮಾತನಾಡಿದ ಧನುಷ್, “ಯಶಸ್ ಗೆದ್ದೇ ಗೆಲ್ತಾರೆ ಅಂತ ನನಗೆ ಮೊದಲೇ ಅನಿಸುತ್ತಿತ್ತು” ಎಂದರು. ಮತ್ತೊಂದೆಡೆ ಆಸಿಯಾ ಅವರು “ಸೌಂದರ್ಯಾ ಬಾಯಾಸ್ಡ್ ಆಗಿದ್ದರು” ಎಂದು ನೇರವಾಗಿ ಅಭಿಪ್ರಾಯಪಟ್ಟರು. ಇದಕ್ಕೆ ಉತ್ತರಿಸಿದ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ, “ಆಟದ ಸಮಯದಲ್ಲಿ ಗಗನ್ ಈಗಾಗಲೇ ಸೋಲೊಪ್ಪಿಕೊಂಡಿದ್ದರು ಎಂದೇ ನನಗೆ ಅನಿಸಿತ್ತು” ಎಂದು ಸ್ಪಷ್ಟನೆ ನೀಡಿದರು.

ಈ ಚರ್ಚೆಯ ಬಳಿಕ ಮನೆಯಲ್ಲಿ ನಡೆದ ಟಾಸ್ಕ್‌ಗೆ ಸಂಬಂಧಿಸಿದ ‘ವಿಟಿ’ ಪ್ರದರ್ಶಿಸಲಾಯಿತು. ವಿಟಿಯಲ್ಲಿ ಸ್ಪಷ್ಟವಾಗಿ ಕಾಣಿಸಿದಂತೆ, ಗಗನ್ ತಂಡದವರು ಸೋಲನ್ನು ಒಪ್ಪಿಕೊಂಡಿರುವಂತೆ ವರ್ತಿಸಿದ್ದರು ಮತ್ತು ಗಗನ್ ಕಡೆಯಿಂದ ಯಾವುದೇ ಗಂಭೀರ ಪ್ರಯತ್ನ ಅಥವಾ ಬೆಂಬಲ ಸಿಕ್ಕಿರಲಿಲ್ಲ. ಹೊರಗೆ ಕುಳಿತವರಿಗೂ ಗಗನ್ ಆಟದಲ್ಲಿ ಹಿಂದೆ ಸರಿದಿರುವುದು ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ ಗಗನ್ ಆ ರೀತಿ ಸುಮ್ಮನಿದ್ದು ಕೊನೆಯಲ್ಲಿ ಟಾಸ್ಕ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅವರ ಗಿವ್-ಅಪ್ ಸ್ವಭಾವವನ್ನು ಸುದೀಪ್ ಎತ್ತಿ ತೋರಿಸಿದರು.

ವಿಟಿಯ ಆಧಾರದ ಮೇಲೆ ಅಂತಿಮ ತೀರ್ಪು ನೀಡಿದ ಕಿಚ್ಚ ಸುದೀಪ್, ಯಶಸ್ ತಂಡದವರು ಆಟದಲ್ಲಿ ಸಾಕಷ್ಟು ಎಫೆಕ್ಟ್ ಹಾಕಿದ್ದಾರೆ ಮತ್ತು ಗೆಲ್ಲಲು ಬೇಕಾದ ಪರಿಶ್ರಮ ಪಟ್ಟಿದ್ದಾರೆ ಎಂಬುದನ್ನು ಖಚಿತಪಡಿಸಿದರು. ಗಗನ್ ತಂಡದವರೇ ತಮ್ಮ ತಂಡಕ್ಕೆ ಸರಿಯಾದ ಬೆಂಬಲ ನೀಡಲಿಲ್ಲ ಎಂಬುದನ್ನು ವಿವರಿಸುವ ಮೂಲಕ ಸುದೀಪ್ ಅವರು ಸೌಂದರ್ಯಾ ಅವರ ನಿರ್ಧಾರ ತಪ್ಪಲ್ಲ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಒಂದು ಸಮುದಾಯಕ್ಕೆ ನೋವಾಗುವಂತೆ ನಡೆದುಕೊಂಡ ವಿಚಾರ; ಕ್ಷಮೆ ಕೇಳಿದ ಯಶಸ್

ಸುದೀಪ್ ಅವರ ಈ ಸ್ಪಷ್ಟನೆಯಿಂದಾಗಿ ಸೌಂದರ್ಯಾ ಮೇಲಿದ್ದ ಪಕ್ಷಪಾತದ ಆರೋಪಕ್ಕೆ ತೆರೆ ಬಿದ್ದಂತಾಗಿದೆ. ಆಟದಲ್ಲಿ ಸೋಲನ್ನು ಮುಂಚಿತವಾಗಿ ಒಪ್ಪಿಕೊಳ್ಳುವವರನ್ನುಳಿದು, ಕಷ್ಟಪಟ್ಟು ಆಡುವವರನ್ನು ಗೆಲ್ಲಿಸುವುದು ನ್ಯಾಯಯುತ ಎಂಬ ಸಂದೇಶವನ್ನು ಸುದೀಪ್ ಈ ವಾರದ ಪಂಚಾಯಿತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us