‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಸೆಪ್ಟೆಂಬರ್ 29ರಂದು ಅದ್ದೂರಿಯಾಗಿ ಲಾಂಚ್ ಆಗಲಿದೆ. ಆ ಬಗ್ಗೆ ಮಾತನಾಡಲು ಇಂದು (ಸೆ.23) ಪ್ರೆಸ್ಮೀಟ್ ಮಾಡಲಾಯಿತು. ಈ ವೇಳೆ ಕಿಚ್ಚ ಸುದೀಪ್ ಅವರಿಗೆ ಅನೇಕ ಪ್ರಶ್ನೆಗಳು ಎದುರಾದವು. ‘ಈ ಬಾರಿ ನಿರೂಪಣೆ ಬೇಡ ಅಂತ ನೀವು ಅಂದುಕೊಂಡಿದ್ದು ನಿಜವೇ?’ ಎಂಬ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದರು. ‘ಬಿಗ್ ಬಾಸ್ನ ಈ ಸೀಸನ್ಗೆ ಗ್ಯಾಪ್ ನೀಡೋಣ ಎಂಬ ಆಲೋಚನೆ ನನಗೆ ಇತ್ತು. ಗಿಮಿಕ್ ಮಾಡಿ ಯಾವುದೇ ಪ್ರೋಮೋ ಮಾಡುವ ಅವಶ್ಯಕತೆ ನಮಗೆ ಇಲ್ಲ. ಗಿಮಿಕ್ನಿಂದ ಓಡುವ ಜೀವನವನ್ನು ನಾವು ನಡೆಸುತ್ತಿಲ್ಲ’ ಎಂದಿದ್ದಾರೆ ಸುದೀಪ್.
‘ನಾನು ಓಪನ್ ಆಗಿ ಕಲರ್ಸ್ ವಾಹಿನಿಯವರ ಮುಂದೆ ನನ್ನ ನಿರ್ಧಾರ ತಿಳಿಸಿದ್ದು ನಿಜ. ಅದರಿಂದ ನನಗೂ ಮತ್ತು ಕಲರ್ಸ್ ವಾಹಿನಿಯವರಿಗೆ ಹೊಂದಾಣಿಕೆ ಇಲ್ಲ ಅಂತೇನೂ ಅಲ್ಲ. ಹೊಂದಾಣಿಕೆ ಇಲ್ಲದೇ ಇದ್ದಿದ್ದರೆ 10 ವರ್ಷಗಳ ಜರ್ನಿ ಆಗುತ್ತಿರಲಿಲ್ಲ. ಬಿಗ್ ಬಾಸ್, ಕ್ರಿಕೆಟ್ ಅಂತ ಬ್ಯುಸಿ ಆಗಿದ್ದೆ. ಬರೀ ಅದರಲ್ಲೇ ಇದ್ದೀನಿ. ಹೋಗೋಕೆ ಆಗುತ್ತಿಲ್ಲ. ಬಿಗ್ ಬಾಸ್ ಒಳ್ಳೆಯ ಕಾರ್ಯಕ್ರಮ ಎಂಬುದು ಹೌದು. ಜನರು ಇಷ್ಟಪಟ್ಟಿದ್ದಾರೆ. ಅದಕ್ಕಾಗಿ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಶುರುವಾದರೆ ನನ್ನ ಲೈಫ್ ಸ್ವಲ್ಪ ಮ್ಯೂಟ್ ಆಗುತ್ತೆ’ ಎಂದು ಪ್ರಾಕ್ಟಿಕಲ್ ವಿಚಾರವನ್ನು ಸುದೀಪ್ ತೆರೆದಿಟ್ಟಿದ್ದಾರೆ.
‘ವಾರದಲ್ಲಿ 4 ದಿನ ಮಾತ್ರ ನಾನು ಎಲ್ಲಿಗಾದರೂ ಹೋಗಬಹುದು. ಶುಕ್ರವಾರ ಎಲ್ಲಿಯೇ ಇದ್ರೂ ವಾಪಸ್ ಈ ಸ್ಟುಡಿಯೋಗೆ ನಾನು ಬರಲೇಬೇಕು. ಯಾಕೆಂದರೆ ನಾನು ಎಲ್ಲ ಎಪಿಸೋಡ್ ನೋಡಬೇಕು. ಎಲ್ಲರಿಗೂ ನ್ಯಾಯ ಒದಗಿಸಬೇಕು. ಶನಿವಾರ ಇಡೀ ದಿನ ಶೂಟಿಂಗ್ ಆಗುತ್ತೆ. ರಾತ್ರಿವರೆಗೆ ಸಾಗುತ್ತದೆ. ಭಾನುವಾರ ಬೆಳಗ್ಗೆ ತನಕ ಅದರಲ್ಲೇ ಬ್ಯುಸಿ. ಹಾಗಾಗಿ ವಾಹಿನಿಯವರ ಜೊತೆ ನಾನು ಮಾತನಾಡಿದೆ. 10 ವರ್ಷ ಕಳೆದಿದೆ. ಬೇರೆ ಯಾರ ಜೊತೆಗಾದರೂ ಮುಂದುವರಿಯಿರಿ ಎಂದೆ. ಅದು ಯಾವುದೇ ತಪ್ಪು ತಿಳಿವಳಿಕೆಯಿಂದ ಆಗಿದ್ದಲ್ಲ. ನನ್ನ ನಿರ್ಧಾರ ಹೇಳಿದ ಬಳಿಕ ಕಲರ್ಸ್, ಎಂಡಮಾಲ್ ಕಂಪನಿಗಳಿಂದ ಅನೇಕರು ನನ್ನನ್ನು ಒಪ್ಪಿಸಲು ನಮ್ಮ ಮನೆಗೆ ಬಂದರು. 10 ವರ್ಷದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದ್ದು’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ ಸುದೀಪ್
ಈ ನಡುವೆ ಕಿಚ್ಚ ಸುದೀಪ್ ಬದಲು ರಿಷಬ್ ಶೆಟ್ಟಿ ಅವರು ಬಿಗ್ ಬಾಸ್ ನಿರೂಪಣೆ ಮಾಡುತ್ತಾರೆ ಎಂಬ ಗಾಸಿಪ್ ಕೇಳಿಬಂದಿತ್ತು. ಆದರೆ ಅದು ನಿಜವಾಗಿಲ್ಲ. ಅಂತಿಮವಾಗಿ ಸುದೀಪ್ ಅವರೇ ನಿರೂಪಕನ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸತತ 11ನೇ ಬಾರಿಗೆ ಅವರು ನಿರೂಪಣೆ ಮಾಡುತ್ತಿರುವುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.