Kalyani Kurale Jadhav: ರಸ್ತೆ ಅಪಘಾತಕ್ಕೆ ಖ್ಯಾತ ಕಿರುತೆರೆ ನಟಿ ಕಲ್ಯಾಣಿ ದುರ್ಮರಣ
Kalyani Kurale Jadhav Death: ಕಲ್ಯಾಣಿ ಕುರಳೆ ಜಾಧವ್ ಅವರ ದ್ವಿಚಕ್ರ ವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು, ಎಫ್ಐಆರ್ ದಾಖಲು ಮಾಡಿದ್ದಾರೆ.
ಮರಾಠಿಯ ಹಲವಾರು ಸೀರಿಯಲ್ಗಳಲ್ಲಿ ನಟಿಸಿ ಫೇಮಸ್ ಆಗಿದ್ದ ನಟಿ ಕಲ್ಯಾಣಿ ಕುರಳೆ ಜಾಧವ್ (Kalyani Kurale Jadhav) ಅವರು ಕೊನೆಯುಸಿರು ಎಳೆದಿದ್ದಾರೆ. ಶನಿವಾರ (ನ.12) ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದ (Kalyani Kurale Jadhav Death) ಸುದ್ದಿ ತಿಳಿದು ಮರಾಠಿ ಕಿರುತೆರೆ ಲೋಕಕ್ಕೆ ಆಘಾತ ಆಗಿದೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಕಲ್ಯಾಣಿ ಕುರಳೆ ಜಾಧವ್ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ನ.12ರ ರಾತ್ರಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕಲ್ಯಾಣಿ ಅವರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಅವರು ನಿಧನರಾದರು ಎಂಬ ಮಾಹಿತಿ ಲಭ್ಯವಾಗಿದೆ.
ಕಲ್ಯಾಣಿ ಕುರಳೆ ಜಾಧವ್ ಅವರು ‘ತುಜ್ಯಾತ್ ಜೀವ್ ರಂಗಲಾ’, ‘ದಕ್ಕಂಚ ರಾಜ ಜ್ಯೋತಿಬಾ’ ಮುಂತಾದ ಸೀರಿಯಲ್ಗಳಲ್ಲಿ ನಟಿಸಿದ್ದರು. ಆ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. ಕಲ್ಯಾಣಿ ಕುರಳೆ ಜಾಧವ್ ಅವರಿಗೆ 32 ವರ್ಷ ವಯಸ್ಸಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಹಾಗೂ ಆಪ್ತರು ಪ್ರಾರ್ಥಿಸುತ್ತಿದ್ದಾರೆ.
ಕಿರುತೆರೆಯಲ್ಲಿ ನಟಿಸುತ್ತಿದ್ದ ಕಲ್ಯಾಣಿ ಕುರಳೆ ಜಾಧವ್ ಅವರಿಗೆ ಅಭಿನಯದ ಜೊತೆಗೆ ಸ್ವಂತ ಬಿಸ್ನೆಸ್ ಮಾಡುವ ತುಡಿತ ಕೂಡ ಇತ್ತು. ಇತ್ತೀಚೆಗೆ ಅವರು ರೆಸ್ಟೊರೆಂಟ್ ಆರಂಭಿಸಿದ್ದರು. ಕೊಲ್ಹಾಪುರ ನಗರದ ರಾಜಾರಾಂಪುರಿ ಏರಿಯಾದಲ್ಲಿ ಅವರು ವಾಸವಾಗಿದ್ದರು. ಶನಿವಾರ ರಾತ್ರಿ ರೆಸ್ಟೋರೆಂಟ್ ಕೆಲಸ ಮುಗಿಸಿ ವಾಪಸ್ ಮನೆಗೆ ಬರುವಾಗ, ಕೊಲ್ಹಾಪುರ ನಗರದಿಂದ 20 ಕಿಲೋಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿತು. ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ಖಚಿತಪಡಿಸಿದರು.
ಕಲ್ಯಾಣಿ ಕುರಳೆ ಜಾಧವ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಶಿರೋಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ ಹಾಗೂ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.