
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ ಟಿಆರ್ಪಿ ರೇಸ್ನಲ್ಲಿ ಮುಂದಿದೆ. ಈ ಧಾರಾವಾಹಿ ಗಂಭೀರ ವಿಷಯಗಳ ಜೊತೆಗೆ ವೀಕ್ಷಕರಿಗೆ ನಗೆಯ ಹಬ್ಬವನ್ನೇ ಉಣಬಡಿಸುವ ಕೆಲಸವನ್ನೂ ಮಾಡುತ್ತಿದೆ ಎಂದರೂ ತಪ್ಪಾಗಲಾರದು. ಕೌಟುಂಬಿಕ ಬಾಂಧವ್ಯದ ಜೊತೆಗೆ ಹಾಸ್ಯದ ಎಳೆಯನ್ನು ಬೆರೆಸಿರುವ ಈ ಧಾರಾವಾಹಿಯಲ್ಲಿ, ಕೇಶವ ಮತ್ತು ವಲ್ಲಭನ ನಡುವಿನ ಮಾತುಕತೆ ಈಗ ಹೊಸ ತಿರುವು ಪಡೆದುಕೊಂಡಿದೆ.
ಕೇಶವ ಮತ್ತು ಮೀನಾ ಅವರ ಮದುವೆ ಮೀನಾ ತಂದೆಗೆ ಇಷ್ಟವಿರಲಿಲ್ಲ. ದೇವಸ್ಥಾನದಲ್ಲಿ ಸಿಕ್ಕಾಗ ಕೇಶವನನ್ನು ಮೀನಾ ತಂದೆ ‘ಕಿರಾಣಿ ಅಂಗಡಿಯವ’ ಎಂದು ಹೀಯಾಳಿಸಿದ್ದನು. ಇದು ಕೇಶವನ ಮನಸ್ಸಿಗೆ ತೀವ್ರವಾಗಿ ತಟ್ಟಿದೆ. ಹೇಗಾದರೂ ಮಾಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲೇಬೇಕು ಎಂದು ಕೇಶವ ಪಣ ತೊಟ್ಟರೆ, ಇತ್ತ ತಮ್ಮ ವಲ್ಲಭ ಕೂಡ ಡ್ರೈವಿಂಗ್ ಕೆಲಸದ ಮೂಲಕ ಆರ್ಥಿಕವಾಗಿ ಸದೃಢವಾಗುವ ಕನಸು ಕಾಣುತ್ತಾನೆ.
ಇಬ್ಬರೂ ಸಹೋದರರು ತಮ್ಮ ಗುರಿಗಳ ಬಗ್ಗೆ ಪರಸ್ಪರ ಚರ್ಚಿಸಿ, ‘ಈ ವಿಷಯ ನಮ್ಮ ಪತ್ನಿಯರಿಗೆ ಅಪ್ಪಿತಪ್ಪಿಯೂ ತಿಳಿಯಬಾರದು‘ ಎಂದು ಒಬ್ಬರಿಗೊಬ್ಬರು ಮಾತು ಕೊಟ್ಟುಕೊಳ್ಳುತ್ತಾರೆ. ಆದರೆ, ಈ ‘ಸೀಕ್ರೆಟ್’ ಉಳಿಯುವುದು ಅಷ್ಟು ಸುಲಭವಲ್ಲ ಎಂಬುದು ಅವರಿಗೆ ತಿಳಿದಿರುವುದಿಲ್ಲ.
ಕೇಶವ ಮನೆಗೆ ಬಂದವನೇ ಮೀನಾ ಎದುರು ವಲ್ಲಭನ ಡ್ರೈವಿಂಗ್ ಯೋಜನೆಯನ್ನು ಬಾಯಿ ಬಿಟ್ಟುಬಿಡುತ್ತಾನೆ. ಇತ್ತ ವಲ್ಲಭ ಕೂಡ ಅಮೂಲ್ಯ ಮುಂದೆ ಹೋಗಿ ಕೇಶವನ ಸರ್ಕಾರಿ ಕೆಲಸದ ಕನಸನ್ನು ಹಂಚಿಕೊಳ್ಳುತ್ತಾನೆ. ತಮಾಷೆಯೆಂದರೆ, ಇಬ್ಬರೂ ಕೂಡ ‘ಬೇರೆಯವರಿಗೆ ಹೇಳಬೇಡ’ ಎಂಬ ಕಂಡೀಷನ್ ಹಾಕಿಯೇ ಗುಟ್ಟನ್ನು ಬಿಟ್ಟುಕೊಟ್ಟಿರುತ್ತಾರೆ.
ಇದನ್ನೂ ಓದಿ: ಬಿಗ್ಬಾಸ್ ಮನೆಗೆ ಹೋಗಲು ಇಲ್ಲಿದೆ ಅವಕಾಶ, ಮಾಡಬೇಕಾಗಿದ್ದು ಇಷ್ಟೆ
ಹೊಟ್ಟೆಯಲ್ಲಿ ಗುಟ್ಟು ಇಟ್ಟುಕೊಳ್ಳಲಾಗದೆ ಒದ್ದಾಡುವ ಮೀನಾ, ಅಡುಗೆ ಮನೆಯಲ್ಲಿ ಅಮೂಲ್ಯ ಸಿಕ್ಕ ತಕ್ಷಣ ಎಲ್ಲವನ್ನೂ ಹೇಳಿಯೇ ಬಿಡುತ್ತಾಳೆ. ಅಣ್ಣ-ತಮ್ಮಂದಿರು ಅಂದುಕೊಂಡಿದ್ದ ‘ಸಹೋದರರ ಸವಾಲು’ ಅಂತಿಮವಾಗಿ ಹೆಂಡತಿಯರ ನಡುವಿನ ಹರಟೆಯಲ್ಲಿ ಕರಗಿ ಹೋಗುತ್ತದೆ. ಗಂಡಂದಿರ ಅತಿ ಆತ್ಮವಿಶ್ವಾಸ ಮತ್ತು ಪತ್ನಿಯರ ಮುಗ್ಧ ಹರಟೆಯ ಈ ಜುಗಲ್‌ಬಂದಿ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ‘ನಂದಗೋಕುಲ’ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.