ಕಿಚ್ಚ ಸುದೀಪ್ ನಡೆಸಿಕೊಡುವ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ (Bigg Boss Kannada Season 9) ಎರಡನೇ ವಾರದ ಎಲಿಮಿನೇಷನ್ ನಡೆದಿದೆ. ಈ ವಾರ ವೀಕ್ಷಕರಿಂದ ಕಡಿಮೆ ವೋಟ್ ಪಡೆದ ನವಾಜ್ (Bigg Boss Nawaz) ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮಯೂರಿ, ನವಾಜ್, ದರ್ಶ್, ಅಮೂಲ್ಯ ಗೌಡ, ನೇಹಾ ಗೌಡ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್ ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಆರ್ಯವರ್ಧನ್, ದೀಪಿಕಾ ದಾಸ್ ಮತ್ತು ಅಮೂಲ್ಯ ಸೇಫ್ ಆಗಿದ್ದರು. ಭಾನುವಾರದ (ಅ.9) ಎಪಿಸೋಡ್ನಲ್ಲಿ ನವಾಜ್ ಎಲಿಮಿನೇಟ್ (Bigg Boss Elimination) ಆದರು ಎಂಬುದನ್ನು ಕಿಚ್ಚ ಸುದೀಪ್ ಘೋಷಿಸಿದರು. ಪ್ರಾಸದ ಮೂಲಕ ಸಿನಿಮಾ ವಿಮರ್ಶೆ ಮಾಡಿ ನವಾಜ್ ಫೇಮಸ್ ಆಗಿದ್ದರು. ಆದರೆ ಬಿಗ್ ಬಾಸ್ನಲ್ಲಿ ಅವರ ಪ್ರಾಸದ ಆಟ ನಡೆಯಲಿಲ್ಲ.
ದಿನ ಕಳೆದಂತೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಆಟ ರಂಗೇರುತ್ತಿದೆ. ಮೊದಲ ವಾರ ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆ ಔಟ್ ಆಗಿದ್ದರು. ಈ ವಾರ ನವಾಜ್ ಎಲಿಮಿನೇಟ್ ಆಗಿದ್ದರಿಂದ ದೊಡ್ಮನೆ ಸದಸ್ಯರ ಸಂಖ್ಯೆ 16ಕ್ಕೆ ಕುಸಿದಿದೆ. 100 ದಿನಗಳ ಕಾಲ ಈ ಆಟದಲ್ಲಿ ಸ್ಥಾನ ಉಳಿಸಿಕೊಳ್ಳಬೇಕು ಎಂಬುದು ಎಲ್ಲ ಸ್ಪರ್ಧಿಗಳ ಆಸೆ ಆಗಿರುತ್ತದೆ. ಅಲ್ಲಿಯವರೆಗೂ ಪೈಪೋಟಿ ನೀಡುವವರಿಗೆ ಫಿನಾಲೆಯಲ್ಲಿ ಸ್ಥಾನ ಸಿಗುತ್ತದೆ. ಅದಕ್ಕಾಗಿ ಪ್ರತಿವಾರದ ಎಲಿಮಿನೇಷನ್ನಿಂದ ಬಚಾವ್ ಆಗಬೇಕು.
ಈ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋನ ಆಟ ಭಿನ್ನವಾಗಿದೆ. 9 ಹಳೇ ಸ್ಪರ್ಧಿಗಳು ಹಾಗೂ 9 ಹೊಸ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು. ಅನುಭವ ಇರುವವರೆ ಜೊತೆಗೆ ಹೊಸಬರು ಹಣಾಹಣಿ ನಡೆಸುತ್ತಿದ್ದಾರೆ. ಸ್ಪರ್ಧಿಗಳು ವೀಕ್ಷಕರ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ಈ ಆಟದಲ್ಲಿ ಹತ್ತಾರು ತಂತ್ರಗಳನ್ನು ಮಾಡುತ್ತಾರೆ. ಟಾಸ್ಕ್ಗಳನ್ನು ಚೆನ್ನಾಗಿ ಆಡುವುದರ ಜೊತೆಗೆ ಮನರಂಜನೆ ನೀಡುವುದು ಕೂಡ ತುಂಬ ಮುಖ್ಯ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರೂ ಆಟ ಮುಂದುವರಿಸಬೇಕಿದೆ.
ಕಿಚ್ಚನ ಚಪ್ಪಾಳೆ ಪಡೆದ ಅನುಪಮಾ ಗೌಡ:
ನಟಿ ಮತ್ತು ನಿರೂಪಕಿ ಅನುಪಮಾ ಗೌಡ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಅವರ ಆಟದ ಪರಿಯನ್ನು ಸುದೀಪ್ ಪ್ರಶಂಸಿಸಿದ್ದಾರೆ. ಈ ಮೆಚ್ಚುಗೆ ಸಿಕ್ಕಿದ್ದಕ್ಕೆ ಅನುಪಮಾ ಕೊಂಚ ಎಮೋಷನಲ್ ಆದರು. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:15 pm, Sun, 9 October 22