Neeraj Chopra: ಕೆಬಿಸಿಯಲ್ಲೂ ಗೆಲುವಿನ ಓಟ ಮುಂದುವರೆಸಿದ ನೀರಜ್ ಚೋಪ್ರಾ, ಪಿ.ಶ್ರೀಜೇಶ್; ಗೆದ್ದದ್ದೆಷ್ಟು ಗೊತ್ತಾ?

Amitabh Bachchan: ಕೌನ್ ಬನೇಗಾ ಕರೋಡ್​ಪತಿಯ (ಕೆಬಿಸಿ) ಶುಕ್ರವಾರದ ಸೆಲೆಬ್ರಿಟಿ ಸಂಚಿಕೆಯಲ್ಲಿ ಒಲಂಪಿಕ್ಸ್ ಸ್ವರ್ಣ ವಿಜೇತ ನೀರಜ್ ಚೋಪ್ರಾ ಹಾಗೂ ಕಂಚು ವಿಜೇತ ಪಿ.ಶ್ರೀಜೇಶ್ ಭಾಗವಹಿಸಿದ್ದರು. ಇಲ್ಲೂ ಗೆಲುವಿನ ಓಟ ಮುಂದುವರೆಸಿದ ತಾರೆಯರು ಭರ್ಜರಿ ಬಹುಮಾನ ಬಾಚಿಕೊಂಡಿದ್ದಾರೆ.

Neeraj Chopra: ಕೆಬಿಸಿಯಲ್ಲೂ ಗೆಲುವಿನ ಓಟ ಮುಂದುವರೆಸಿದ ನೀರಜ್ ಚೋಪ್ರಾ, ಪಿ.ಶ್ರೀಜೇಶ್; ಗೆದ್ದದ್ದೆಷ್ಟು ಗೊತ್ತಾ?
ಅಮಿತಾಭ್ ಬಚ್ಚನ್, ಪಿ.ಶ್ರೀಜೇಶ್, ನೀರಜ್ ಚೋಪ್ರಾ

KBC 13: ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್​ಪತಿಯ 13 ಸೀಸನ್ ಅದ್ಭುತವಾಗಿ ಮೂಡಿಬರುತ್ತಿದ್ದು, ವೀಕ್ಷಕರಿಗೆ ಪ್ರಿಯವಾಗುತ್ತಿದೆ. ಅದರಲ್ಲೂ ಪ್ರತಿ ಶುಕ್ರವಾರ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದು, ಉತ್ತಮ ಮನೋರಂಜನೆ ನೀಡುತ್ತಿದೆ. ನಿನ್ನೆ (ಸೆಪ್ಟೆಂಬರ್ 17) ಟೊಕಿಯೊ ಒಲಂಪಿಕ್ಸ್​ನ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗೂ ಪಿ.ಶ್ರೀಜೇಶ್ ಭಾಗವಹಿಸಿದ್ದರು. ನಿರೂಪಕ ಅಮಿತಾಭ್ ಸುಂದರವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ತಾರೆಯರು ಚಾರಿಟಿಯ ಉದ್ದೇಶದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೊನೆಯಲ್ಲಿ ಉತ್ತಮ ಮೊತ್ತವನ್ನೂ ಗೆದ್ದರು.

ಕಾರ್ಯಕ್ರಮದ ಆರಂಭದಲ್ಲೇ, ಅಮಿತಾಭ್ ಬಚ್ಚನ್ ಒಲಂಪಿಕ್ಸ್​ನಲ್ಲಿ ಪದಕ ಗೆದ್ದ ಸಂದರ್ಭದ ವಿಡಿಯೊಗಳನ್ನು ತೋರಿಸಿದರು. ಈ ಇಬ್ಬರು ಆಟಗಾರರನ್ನು ಮಾತನಾಡಿಸುತ್ತಾ ಅಮಿತಾಭ್, ಅವರ ಪದಕಗಳನ್ನು ಕೈಯಲ್ಲಿ ಹಿಡಿದರು. ಆಗ ಅವರು, ‘ಅಬ್ಬಾ, ಬಹಳ ಭಾರವಿದೆ’ ಎಂದದ್ದು, ಎಲ್ಲರ ಮುಖದಲ್ಲೂ ನಗುವಿಗೆ ಕಾರಣವಾಯಿತು.

ನೀರಜ್ ಮತ್ತು ಶ್ರೀಜೇಶ್ ಅವರ ಅಭಿಮಾನಿಯಾದ ಅಮಿತಾಭ್:
ಕೆಬಿಸಿಯಲ್ಲಿ ಸಾಮಾನ್ಯವಾಗಿ ಅಮಿತಾಭ್ ಅವರನ್ನು ಕಾಣಲು ಅಭಿಮಾನಿಗಳು ಹಂಬಲಿಸುತ್ತಾರೆ. ಆದರೆ ನಿನ್ನೆ ಅಮಿತಾಭ್ ಸ್ವತಃ ನೀರಜ್ ಹಾಗೂ ಶ್ರೀಜೇಶ್​ರ ಅಭಿಮಾನಿಯಾಗಿದ್ದರು. ಅವರನ್ನು ಭೇಟಿಯಾದ ತಕ್ಷಣ, ಬಿಗ್​ಬಿ ಅವರಿಂದ ಆಟೋಗ್ರಾಫ್ ಪಡೆದರು. ಜೊತೆಗೆ ತಾವು ದೊಡ್ಡ ಅಭಿಮಾನಿಯೆಂದು ಹೇಳಿಕೊಂಡರು.

ನೀರಜ್ ಚೋಪ್ರಾ ಅವರ ಒಲಂಪಿಕ್ಸ್ ಪಯಣ:
ಕಾರ್ಯಕ್ರಮದಲ್ಲಿ ಹಲವು ವಿಚಾರಗಳನ್ನು ಮಾತನಾಡಲಾಯಿತು. ಈ ವೇಳೆ ಪದಕ ವಿಜೇತರು ತಮ್ಮ ಜರ್ನಿಯನ್ನು ಹೇಳಿಕೊಂಡರು. ನೀರಜ್ ಚೋಪ್ರಾ ತಮ್ಮ ಜರ್ನಿಯ ಕುರಿತು ಮಾತನಾಡುತ್ತಾ, “ನಾನು ಅಧ್ಯಯನದಲ್ಲಿ ಅಷ್ಟೇನು ಚುರುಕಾಗಿರಲಿಲ್ಲ. ಇದರಿಂದಾಗಿ ನನ್ನ ಕುಟುಂಬ ಕ್ರೀಡೆಗಳಲ್ಲಿ ಮುಂದುವರೆ ಎಂದರು. ನಾನು ಆಡಲು ಪ್ರಾರಂಭಿಸಿದಾಗ ಜಾವೆಲಿನ್ ಆಟ ಆಡುವಂತೆ ತಿಳಿಸಿದ್ದರು. ಅದು ಪ್ರಿಯವಾಯಿತು, ನಂತರ ನಾನು ಅದನ್ನೇ ಮುಂದುವರೆಸಿದೆ. ನಾನು ಈ ಆಟವನ್ನು ಪ್ರಾರಂಭಿಸಿದಾಗ, ಕೇವಲ 35 ರಿಂದ 40 ಮೀಟರ್ ಎಸೆಯುತ್ತಿದ್ದೆ. ಆದರೆ ಪ್ರಯತ್ನ ಹಾಗೂ ಅಭ್ಯಾಸಗಳ ಫಲವಾಗಿ ಈಗ ಈ ಚಿನ್ನದ ಪದಕ ಬಂದಿದೆ’’ ಎಂದರು. ನೀರಜ್ ಅವರ ಮಾತನ್ನು ಕೇಳಿ ಬಚ್ಚನ್ ಅಚ್ಚರಿಗೊಂಡು, “ಎಲ್ಲಿ ಶ್ರಮವಿದೆಯೋ ಅಲ್ಲಿ ಯಶಸ್ಸು ಖಂಡಿತಾ ಲಭಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ’’ ಎಂದರು.

ಪದಕವನ್ನು ತಂದೆಗೆ ಅರ್ಪಿಸಿದ ಪಿ.ಶ್ರೀಜೇಶ್:
ಅಮಿತಾಭ್​ರೊಂದಿಗೆ ಮಾತನಾಡುತ್ತಾ, ಪಿ.ಶ್ರೀಜೇಶ್ ಅವರು, ತಮ್ಮ ಬಡ ಕುಟುಂಬದ ಹಿನ್ನೆಲೆ, ಕೇರಳದಲ್ಲಿ ಹಾಕಿಗೆ ಅಷ್ಟಾಗಿ ಪ್ರೋತ್ಸಾಹ ಇಲ್ಲದಿರುವುದು ಮೊದಲಾದವುಗಳನ್ನು ವಿವರಿಸಿದರು. ಅವರು ಹಾಕಿ ಆಡಲು ಕ್ರೀಡಾ ಅಕಾಡೆಮಿಗೆ ಹೋದಾಗ, ಅವರ ತಂದೆ ಮನೆಯ ಹಸುವನ್ನು ಮಾರಿ ಗೋಲ್​ಕೀಪರ್ ಪ್ಯಾಡ್ ಖರೀದಿಸಲು ಹಣ ನೀಡಿದ್ದರಂತೆ. ತಾನು ಇದನ್ನು ಎಂದಿಗೂ ಮರೆಯುವುದಿಲ್ಲ. ಪದಕ ಗೆದ್ದಾಗ, ಅದನ್ನು ತಂದೆಗೆ ಅರ್ಪಿಸಿದ್ದೇನೆ ಎಂದು ಶ್ರೀಜೇಶ್ ಹೇಳಿದಾಗ ಎಲ್ಲರೂ ಭಾವುಕರಾದರು. ಈ ವೇಲೆ ಅಮಿತಾಭ್, “ಮಗ ಮತ್ತು ತಂದೆಯ ನಡುವಿನ ಸಂಬಂಧ ಎಷ್ಟು ಸುಂದರವಾಗಿದೆ” ಎಂದು ನುಡಿದರು.

25 ಲಕ್ಷ ಗೆದ್ದ ನೀರಜ್ ಮತ್ತು ಶ್ರೀಜೇಶ್ ಜೋಡಿ:
ಪದಕ ವಿಜೇತ ಈ ತಾರೆಯರು ತಮ್ಮ ಗೆಲುವಿನ ಅಭಿಯಾನವನ್ನು ಕೆಬಿಸಿ ವೇದಿಕೆಯಲ್ಲೂ ಮುಂದುವರೆಸಿದರು. ಅವರಿಗೆ ₹ 25 ಲಕ್ಷಕ್ಕೆ ಈ ಪ್ರಶ್ನೆಯನ್ನು ಕೇಳಲಾಗಿತ್ತು.

25 ಡಿಸೆಂಬರ್ 2019 ರಂದು ವಿಸ್ಟಾಡೋಮ್ ಕೋಚ್‌ಗಳನ್ನು ಹೊಂದಿರುವ ಭಾರತೀಯ ರೈಲ್ವೆಯ ಯಾವ ರೈಲು ಸೇವೆಯನ್ನು ಆರಂಭಿಸಿತು?

ಎ) ಜನ ಶತಾಬ್ದಿ ಎಕ್ಸ್‌ಪ್ರೆಸ್
ಬಿ) ಡೆಕ್ಕನ್ ಎಕ್ಸ್‌ಪ್ರೆಸ್
ಸಿ) ಹಿಮಾಲಯನ್ ಕ್ವೀನ್
ಡಿ) ಹಿಮ ದರ್ಶನ ಎಕ್ಸ್‌ಪ್ರೆಸ್

ಈ ಜೋಡಿ ಸರಿ ಉತ್ತರವಾದ ‘ಹಿಮ ದರ್ಶನ ಎಕ್ಸ್‌ಪ್ರೆಸ್’ನ್ನು ನೀಡಿ 25 ಲಕ್ಷ ರೂಪಾಯಿಗಳನ್ನು ಗೆದ್ದುಕೊಂಡಿತು. ಅದನ್ನು ಚಾರಿಟಿ ಕಾರ್ಯಗಳಿಗೆ ಬಳಸಲಿದ್ದಾರೆ.

ಇದನ್ನೂ ಓದಿ:

ಸೈನಾ ಬಯೋಪಿಕ್​ಗಾಗಿ 30 ಕೆಜಿ ತೂಕ ಇಳಿಸಿಕೊಂಡ ಪರಿಣೀತಿ ಚೋಪ್ರಾಳ ಬದ್ದತೆಯನ್ನು ಬಾಲಿವುಡ್ ಬಹಳ ಮೆಚ್ಚುತ್ತಿದೆ!

ವೇದಿಕೆ ಮೇಲೆಯೇ ಸ್ಪರ್ಧಿಗೆ ಕಿಸ್ ಮಾಡಿ, ಕೆನ್ನೆ ಕಚ್ಚಿದ ಕನ್ನಡದ ‘ಜೋಶ್​’ ಸಿನಿಮಾ ನಟಿ; ವಿಡಿಯೋ ವೈರಲ್

(Neeraj Chopra and P Sreejesh won 25 Lakhs in KBC 13 and tells their life journey)

Click on your DTH Provider to Add TV9 Kannada