‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯರಾದವರು ನೇಹಾ ಗೌಡ. ಅವರು ಚಂದನ್ ಜತೆ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ಮಧ್ಯೆ, ಅವರು ಕಲರ್ಸ್ ಕನ್ನಡದ ‘ರಾಜಾ-ರಾಣಿ’ ವೇದಿಕೆ ಮೇಲೆ ಗಂಡನ ಜತೆ ಮತ್ತೆ ಸಪ್ತಪದಿ ತುಳಿದಿದ್ದಾರೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಅವರು ಸಪ್ತಪದಿ ತುಳಿಯೋಕೆ ಕಾರಣವೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಚಂದನ್ ಜತೆ ನೇಹಾ ಗೌಡ ‘ರಾಜಾ-ರಾಣಿ’ ವೇದಿಕೆ ಏರಿದ್ದಾರೆ. ಈ ವೇಳೆ ಶೋನ ನಿರೂಪಕಿ ಅನುಪಮಾ ಗೌಡ ಅವರು ನೇಹಾಗೆ ಪ್ರಶ್ನೆ ಒಂದನ್ನು ಕೇಳಿದರು. ‘ಮದುವೆ ಸಮಯದಲ್ಲಿ ಯಾವುದಾದರೂ ಶಾಸ್ತ್ರ ಮಿಸ್ ಆಗಿತ್ತೇ? ಆ ಬಗ್ಗೆ ನಿಮಗೇನಾದರೂ ಬೇಸರವಿದೆಯೇ?’ ಎಂದು ಕೇಳಿದರು ಅನುಪಮಾ. ಇದಕ್ಕೆ ಉತ್ತರಿಸಿದ ನೇಹಾ ‘ಮದುವೆ ತುಂಬಾ ಚೆನ್ನಾಗಿ ನಡೆದಿತ್ತು. ಆದರೆ, ಸಪ್ತಪದಿ ತುಳಿಸುವುದನ್ನೇ ಮರೆತು ಬಿಟ್ಟಿದ್ದರು. ಏಕೆ ಹಾಗೆ ಎಂದು ನಾನು ಪ್ರಶ್ನೆ ಮಾಡಿದೆ. ನಮ್ಮ ಸಂಪ್ರದಾಯದಲ್ಲಿ ಆ ರೀತಿ ಇಲ್ಲ ಎನ್ನುವ ಉತ್ತರ ಅವರ ಕಡೆಯಿಂದ ಬಂತು. ಆದರೆ, ನಿಜಕ್ಕೂ ಅವರಿಗೆ ಸಪ್ತಪದಿ ತುಳಿಸೋದು ಮರೆತೇ ಹೋಗಿತ್ತು’ ಎಂದಿದ್ದಾರೆ.
‘ಗೊಂಬೆ ಅವರು ಮದುವೆಯಲ್ಲಿ ಮಿಸ್ ಮಾಡಿಕೊಂಡ ಸಪ್ತಪದಿಯನ್ನು ಈ ವೇದಿಕೆ ಮೇಲೆ ಮಾಡಿಸುತ್ತಿದ್ದೇವೆ’ ಎಂದು ಅನುಪಮಾ ಗೌಡ ಘೋಷಿಸಿದರು. ಅಂತೆಯೇ, ವೇದಿಕೆ ಮೇಲೆ ಪತಿ ಚಂದನ್ ಜತೆ ನೇಹಾ ಗೌಡ ಸಪ್ತಪದಿ ತುಳಿದರು. ಮದುವೆಯಲ್ಲಿ ಏಳು ಹೆಜ್ಜೆ ನಡೆಯುವ ಸಂಪ್ರದಾಯ ಹಿಂದುಗಳಲ್ಲಿದೆ. ಪ್ರತಿ ಹೆಜ್ಜೆಗೂ ಒಂದೊಂದು ಅರ್ಥವಿದೆ. ಈ ಶಾಸ್ತ್ರ ‘ರಾಜಾ ರಾಣಿ’ ವೇದಿಕೆ ಮೇಲೆ ನೆರವೇರಿದೆ. ಇದನ್ನು ನೋಡಿದ ಜಡ್ಜ್ಗಳು ಹಾಗೂ ವೀಕ್ಷಕರು ಖುಷಿಪಟ್ಟಿದ್ದಾರೆ. ಸಪ್ತಪದಿ ತುಳಿಯುವಾಗ ಹಿನ್ನೆಲೆಯಲ್ಲಿ ‘ಸಪ್ತಪದಿ..’ ಹಾಡನ್ನು ಪ್ರಸಾರ ಮಾಡಲಾಗಿತ್ತು. ಕಲರ್ಸ್ ಕನ್ನಡ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಕೆಲವರು ಮದುವೆ ಆಯ್ತು ಊಟ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಮೂಲಕ ಸಾವಿರಾರು ಕಂತುಗಳನ್ನು ಈ ಧಾರಾವಾಹಿ ಕಂಡಿದೆ. ಅಲ್ಲದೆ, ವೀಕ್ಷಕರಿಗೂ ಧಾರಾವಾಹಿ ಇಷ್ಟವಾಗಿತ್ತು.
ಇದನ್ನೂ ಓದಿ:
ಕನ್ನಡತಿಯಲ್ಲಿ ಖಡಕ್ ವಿಲನ್ ರಮೋಲಾ ನಿಜ ಜೀವನದಲ್ಲಿ ಹೀಗಿದ್ದಾರಾ?; ಸಣ್ಣ ಘಟನೆಯಿಂದ ಎಲ್ಲವೂ ಗೊತ್ತಾಯ್ತು