ಫೆಬ್ರವರಿ 19ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ‘ಮೈನಾ’ ಪ್ರಸಾರ

ಮಹಿಳೆಯರ ಆತ್ಮಬಲದ ಪ್ರತೀಕವಾಗಿ ʻಮೈನಾʼ ಸೀರಿಯಲ್​ ಮೂಡಿಬರಲಿದ್ದು, ವೀಕ್ಷಕರಿಗೆ ಇಷ್ಟ ಆಗಲಿದೆ ಎಂದು ‘ಉದಯ ಟಿವಿ’ ಭರವಸೆ ವ್ಯಕ್ತಪಡಿಸಿದೆ. ವಿಜಯಲಕ್ಷ್ಮಿ ಮುಖ್ಯ ಭೂಮಿಕೆ ನಿಭಾಯಿಸಲಿರುವ ಈ ಸೀರಿಯಲ್​ ಫೆಬ್ರವರಿ 19ರಿಂದ ಪ್ರತಿ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಈ ಹೊಸ ಸೀರಿಯಲ್​ನ ಕಥೆ ಮತ್ತು ಪಾತ್ರವರ್ಗದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಫೆಬ್ರವರಿ 19ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ‘ಮೈನಾ’ ಪ್ರಸಾರ
ಮೈನಾ ಸೀರಿಯಲ್​ ಪಾತ್ರವರ್ಗ
Follow us
ಮದನ್​ ಕುಮಾರ್​
|

Updated on: Feb 13, 2024 | 1:50 PM

ಈಗಾಗಲೇ ಅನೇಕ ಕನ್ನಡ ಸೀರಿಯಲ್​​ಗಳು (Kannada Serial) ಪ್ರಸಾರ ಕಾಣುತ್ತಿವೆ. ಅದರ ಜೊತೆಗೆ ಹೊಸ ಧಾರಾವಾಹಿಗಳು ಕೂಡ ಆರಂಭ ಆಗುತ್ತಿವೆ. ಉತ್ತಮವಾದ ಸೀರಿಯಲ್​ಗಳನ್ನು ಜನರಿಗೆ ನೀಡುವ ಬಗ್ಗೆ ವಾಹಿನಿಗಳ ನಡುವೆ ಪೈಪೋಟಿ ಇದೆ. ‘ಉದಯ ಟಿವಿ’ (Udaya TV) ಕೂಡ ವಿಭಿನ್ನ ಸೀರಿಯಲ್​ಗಳ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಈಗಾಗಲೇ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಕನ್ಯಾದಾನ, ಅಣ್ಣತಂಗಿ, ಗಂಗೆಗೌರಿ, ಶಾಂಭವಿ, ರಾಧಿಕಾ, ಸೇವಂತಿ, ಗೌರಿಪುರದ ಗಯ್ಯಾಳಿಗಳು, ಜನನಿ ಮುಂತಾದ ಸಿರಿಯಲ್​ಗಳು ಪ್ರಸಾರ ಕಾಣುತ್ತಿವೆ. ಈಗ ಅವುಗಳ ಸಾಲಿಗೆ ಹೊಸ ಧಾರಾವಾಹಿ ‘ಮೈನಾ’ ಕೂಡ ಸೇರ್ಪಡೆ ಆಗಲಿದೆ. ವಿಜಯಲಕ್ಷ್ಮಿ ಅವರು ಮೈನಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಮೈನಾ’ ಸೀರಿಯಲ್​ (Mynaa Serial) ಬಗ್ಗೆ ಇಲ್ಲಿದೆ ಮಾಹಿತಿ.

‘ಮೈನಾʼ ಧಾರಾವಾಹಿ ಫೆಬ್ರವರಿ 19ರಿಂದ ಪ್ರತಿ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ. ಈ ಸೀರಿಯಲ್​ ಕಥೆಯ ಎಳೆ ಹೀಗಿದೆ… ಮೈಲಾರಕೋಟೆ ಮೈನಾ ಮನೆಗೆ ಕಿರಿಮಗಳು. ಊರಲ್ಲಿ ಅಲೆಮಾರಿ, ಪರರಿಗೆ ಉಪಕಾರಿ ಆಕೆ. ಚಿಕ್ಕ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಅಪ್ಪ ಮುತ್ತಣ್ಣ. ಅವರಿವರ ಹೊಲದಲ್ಲಿ ಕೆಲಸ ಮಾಡಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿರುವ ಅಮ್ಮ. ಸೀತೆಯಂತಿರುವ ಅಕ್ಕ ರಾಧೆ. ಕಾಲೇಜಿಗೆ ಹೋಗುತ್ತಿರುವ ಅಣ್ಣ. ಇವು ಮೈನಾಳ ಲೋಕದ ಪ್ರಮುಖ ಪಾತ್ರಗಳು. ಮೈನಾಳ ಪುಟ್ಟ ಗೂಡಿನಲ್ಲಿ ದುಡ್ಡಿಗೆ ಕೊರತೆ ಇದ್ದರೂ ಪ್ರೀತಿ-ವಾತ್ಸಲ್ಯಕ್ಕೆ ಕೊರತೆ ಇಲ್ಲ.

ಅಕ್ಕ ರಾಧೆಗೆ ಮದುವೆಯ ವಯಸ್ಸು ಮೀರುತ್ತಿದೆ ಎಂಬ ಚಿಂತೆ. ಆಕೆಗೆ ಸಂಬಂಧ ಕೂಡಿ ಬರುತ್ತಿಲ್ಲ ಎಂಬುದು ಬೇಸರದ ಸಂಗತಿ. ಒಂದಲ್ಲಾ ಒಂದು ಕಾರಣಕ್ಕೆ ಮದುವೆ ಮುರಿದು ಹೋಗುತ್ತಿದೆ. ಕೆಲವು ಸಂಬಂಧಗಳು ಮುರಿಯಲು ಮೈನಾ ನೆಪ ಆಗುತ್ತಾಳೆ! ಕೊನೆಯದಾಗಿ ಜವಾಬ್ದಾರಿ ಹೊರಬೇಕಾದ ಅಣ್ಣ ಕೈಕೊಟ್ಟು ಹೋಗುತ್ತಾನೆ. ಆಗ ಕಿರಿಯ ಮಗಳಾದ ಮೈನಾನೇ ಅಕ್ಕನ ಮದುವೆಯ ಹಿರಿಯ ಜವಾಬ್ದಾರಿ ಹೊರಬೇಕಾಗುತ್ತದೆ. ಅದಕ್ಕಾಗಿ ಆಕೆ ನಗರಕ್ಕೆ ಬರುತ್ತಾಳೆ. ಅಲ್ಲಿಂದ ಆಕೆಯ ಪ್ರಯಾಣದಲ್ಲಿ ಹಲವು ಟ್ವಿಸ್ಟ್​ಗಳು ಎದುರಾಗುತ್ತವೆ.

ಇದನ್ನೂ ಓದಿ: ʻಗಂಗೆ ಗೌರಿʼ ಧಾರಾವಾಹಿಯಲ್ಲಿ ಮಲೆನಾಡಿನ ಸಹೋದರಿಯರ ಕಥೆ

ಮೈನಾ ಪಾತ್ರಧಾರಿ ವಿಜಯಲಕ್ಷ್ಮಿ ಜೊತೆ ನಾಗಾಭರಣ, ಮಾನಸಿ ಜೋಶಿ, ಅಪೂರ್ವ, ಅಂಜಲಿ, ಸಿದ್ದಾರ್ಥ್, ಸಚಿನ್, ಪ್ರಭಂಜನ, ಹರ್ಷಾರ್ಜುನ್, ಸಾಗರ್, ಯಶಸ್ವಿನಿ, ಅನುಷಾ, ಆಶಾ, ಕುಮಾರಿ ತಿಶ್ಯ, ಮಾಸ್ಟರ್​ ಅರುಣ್, ಮಾಸ್ಟರ್​ ರಣವೀರ್ ಸೇರಿದಂತೆ ಅನೇಕರು ‘ಮೈನಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹಿರಿಯ ನಟಿ ಭವ್ಯ ಅವರು ಅಪರೂಪದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ.

ಇದನ್ನೂ ಓದಿ: ಸೀರಿಯಲ್​ಗೆ ಬಂದ ‘ಗಾಳಿಪಟ’ ನಟಿ ನೀತು; ‘ಕನ್ಯಾದಾನ’ ಧಾರಾವಾಹಿಯಲ್ಲಿ ವಿಶೇಷ ಪಾತ್ರ

ಸಂತೋಷ್ ಗೌಡ ಹಾಸನ ಅವರು ‘ಮೈನಾ’ ಧಾರಾವಾಹಿಗೆ ನಿರ್ದೇಶನ ಮಾಡುತ್ತಿದ್ದಾರೆ. ಜಗದೀಶ್ ವಾಲಿ ಹಾಗೂ ದಯಾಕರ್ ಅವರು ಛಾಯಾಗ್ರಹಣದ ಜಬಾಬ್ದಾರಿ ಹೊತ್ತಿದ್ದಾರೆ. ಮಣಿಕಾಂತ್​ ಕದ್ರಿ ಅವರ ಸಂಗೀತ ನಿರ್ದೇಶನ, ಕೆ. ಕಲ್ಯಾಣ್ ಅವರ ಸಾಹಿತ್ಯ, ಪ್ರಕಾಶ ಕಾರಿಂಜ ಅವರ ಸಂಕಲನ ಈ ಧಾರಾವಾಹಿಗೆ ಇದೆ. ‘ಆನಂದ್ ಆಡಿಯೋ’ ಕಂಪನಿಯ ಸಹಸಂಸ್ಥೆಯಾದ ʻಕೋಮಲ್ ಎಂಟರ್ಪ್ರೈಸಸ್ʼ ಬ್ಯಾನರ್ ಮೂಲಕ ಈ ಧಾರಾವಾಹಿ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ