ಒಂದಾದ ಮೇಲೊಂದು ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8.30ಕ್ಕೆ ಪ್ರಸಾರ ಆಗಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ.
ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರ ಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ.
ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಧಾರಾವಾಹಿಯ ಕತೆಯನ್ನು ಚಿಕ್ಕಮಗಳೂರಿನ ಚೆಂದದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದ್ದು, ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿ ಆಗಿಸುತ್ತದೆ.
ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಕುಟುಂಬ ನಾಟಕಗಳು ಅದನ್ನು ಮತ್ತಷ್ಟು ರಸವತ್ತಾಗಿಸುತ್ತವೆ. ಶ್ರವಂತ್ ರಾಧಿಕಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಹೆಸರಾಂತ ನಟ-ನಟಿಯರ ದಂಡೇ ಇದೆ. ‘ಗೀತಾ’ ಧಾರಾವಾಹಿಯಿಂದ ಹೆಸರಾದ ಧನುಷ್ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ.ಎಂ. ವೆಂಕಟೇಶ್ ಹಾಗೂ ಗಾಯಕಿ ಅರ್ಚನಾ ಉಡುಪ ಅವರು ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗಿಂತ ಹೆಚ್ಚು ಟಿಆರ್ಪಿ ಪಡೆದ ‘ಲಕ್ಷ್ಮೀ ಬಾರಮ್ಮ’ ನಂಬರ್ 1 ಧಾರಾವಾಹಿ
ಜೊತೆಗೆ ‘ಮಜಾ ಟಾಕೀಸ್’ ಖ್ಯಾತಿಯ ರೆಮೋ ಕೂಡ ಈ ಧಾರಾವಾಹಿಯಲ್ಲಿ ಇದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ‘ನೂರು ಜನ್ಮಕೂ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಟಿವಿ ಧಾರಾವಾಹಿಗಳ ಪ್ರೇಮಕತೆಗಳ ಸ್ವರೂಪವನ್ನೇ ಬದಲಾಯಿಸಲು ಸಜ್ಜಾಗಿರುವ ‘ನೂರು ಜನ್ಮಕೂ’ ಸೀರಿಯಲ್ನ ಮೊದಲ ಸಂಚಿಕೆಯನ್ನು ತಪ್ಪಿಸಿಕೊಳ್ಳಬೇಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.