ರೌಡಿಸಂ ಮಾಡಿದ ರಜತ್; ಹೆಣ್ಮಕ್ಕಳನ್ನೂ ತಳ್ಳಿದ್ದಕ್ಕೆ ಜೋರಾಯ್ತು ವಿವಾದ
ಚೈತ್ರಾ ಕುಂದಾಪುರ ಮತ್ತು ರಜತ್ ಅವರು ರಂಪಾಟ ಮಾಡಿಕೊಂಡಿದ್ದಾರೆ. ರಜತ್ ಅವರು ರೌಡಿಸಂ ವರ್ತನೆ ತೋರಿದ್ದಾರೆ. ಇದಕ್ಕೆ ಅವರಿಗೆ ಬಿಗ್ ಬಾಸ್ ಶಿಕ್ಷೆ ನೀಡಿದರೂ ಅಚ್ಚರಿ ಏನಿಲ್ಲ. ಕಳೆದ ವೀಕೆಂಡ್ನಲ್ಲಿ ರಜತ್ಗೆ ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದ್ದರು. ಹಾಗಿದ್ದರೂ ಕೂಡ ರಜತ್ ಅವರ ಈ ವಾರವೂ ಅಂಥದ್ದೇ ವರ್ತನೆ ಮುಂದುವರಿಸಿದ್ದಾರೆ.
ರಜತ್ ಅವರು ಭುಜಬಲದಿಂದ ಎಲ್ಲರನ್ನೂ ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಬಾಯಿಗೆ ಬಂದಂತೆ ಮಾತನಾಡುವ ಮೂಲಕವೇ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡುತ್ತಿದ್ದಾರೆ. ಟಾಸ್ಕ್ ಆಡುವಾಗ ಅನಗತ್ಯವಾದ ಅಗ್ರೆಷನ್ ತೋರಿಸುತ್ತಿದ್ದಾರೆ. ಇದೆಲ್ಲದರ ಕಾರಣದಿಂದ ದೊಡ್ಮನೆಯಲ್ಲಿ ಜಗಳ ಜಾಸ್ತಿ ಆಗುತ್ತಿದೆ. ಡಿಸೆಂಬರ್ 17ರ ಸಂಚಿಕೆಯಲ್ಲಿ ಕೂಡ ರಜತ್ ಅವರು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದ್ದಾರೆ. ಅವರ ವರ್ತನೆಯಿಂದ ಬಹುತೇಕರಿಗೆ ಕಿರಿಕಿರಿ ಆಗಿದೆ. ಈಗಾಗಲೇ ಗೌತಮಿ ಜಾದವ್, ಉಗ್ರಂ ಮಂಜು, ಧನರಾಜ್ ಮುಂತಾದವರು ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ರಜತ್ ತಂಡದವರು ಟಾಸ್ಕ್ ಆಡುವಾಗ ಎದುರಾಳಿ ತಂಡದಿಂದ ಚೈತ್ರಾ ಕುಂದಾಪುರ ಅವರು ಉಸ್ತುವಾರಿ ಆಗಿದ್ದರು. ಆಗ ಚೈತ್ರಾ ಮತ್ತು ರಜತ್ ನಡುವೆ ಮಾತಿನ ಚಕಮಕಿ ನಡೆಯಿತು. ಬಿಗ್ ಬಾಸ್ ನೀಡಿದ ನಿಯಮಗಳ ಜೊತೆಗೆ ಚೈತ್ರಾ ಅವರು ತಮ್ಮದೇ ಹೊಸ ನಿಯಮಗಳನ್ನು ಕೂಡ ಸೇರಿಸಿಕೊಂಡು ಗಲಾಟೆಗೆ ಕಾರಣವಾದರು. ಇದರಿಂದ ರಜತ್ಗೆ ಕೋಪ ನೆತ್ತಿಗೇರಿತು.
ಮಾತನಾಡಿದರೆ ಫೌಲ್ ನೀಡಬೇಕು ಎಂಬ ನಿಯಮವೇ ಟಾಸ್ಕ್ನಲ್ಲಿ ಇರಲಿಲ್ಲ. ಆದರೆ ಚೈತ್ರಾ ಅವರು ಉದ್ಧಟತನದಿಂದ ಎಲ್ಲದಕ್ಕೂ ಫೌಲ್ ನೀಡಿದರು. ಅದನ್ನು ರಜತ್ ತೀವ್ರವಾಗಿ ವಿರೋಧಿಸಿದರು. ತಾಳ್ಮೆಯ ಮಿತಿ ಮೀರಿದಾಗ ರಜತ್ ಅವರು ಚೈತ್ರಾ ಮೇಲೆ ಕೈ ಮಾಡಲು ಹೋದರು. ಜಗಳ ಮಾಡುವ ಭರದಲ್ಲಿ ಎರಡು ಬಾರಿ ಚೈತ್ರಾ ಅವರನ್ನು ಮುಟ್ಟಿ ರಜತ್ ಮಾತನಾಡಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ರಜತ್ ಅವರು ಚೈತ್ರಾಗೆ ಹೊಡೆಯಲು ಹೋದಾಗ ಮೋಕ್ಷಿತಾ ಮಧ್ಯ ಪ್ರವೇಶಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಮೋಕ್ಷಿತಾ ಪ್ರಯತ್ನಿಸಿದರು. ಆದರೆ ಚೈತ್ರಾ ಕುಂದಾಪುರ ಅವರು ಮೋಕ್ಷಿತಾಗೆ ಆವಾಜ್ ಹಾಕಿ ವಾಪಸ್ ಕಳಿಸಿದರು. ಜಗಳ ಜೋರಾದಾಗ ರಜತ್ ಮತ್ತು ಚೈತ್ರಾ ಅವರು ಬಾಯಿಗೆ ಬಂದಂತೆ ಬೈಯ್ದುಕೊಂಡಿದ್ದಾರೆ. ‘ಮೈ ಮುಟ್ಟಿದ್ದಕ್ಕೆ ನಾನು ಖಂಡಿತ ಉತ್ತರ ಕೊಡುತ್ತೇನೆ’ ಎಂದು ಚೈತ್ರಾ ಸವಾಲು ಹಾಕಿದ್ದಾರೆ.
ಒಂದು ಸುತ್ತಿನ ಟಾಸ್ಕ್ನಲ್ಲಿ ಸೋತ ಬಳಿಕ ರಜತ್ ಅವರನ್ನು ಬಿಗ್ ಬಾಸ್ ಮನೆಯ ಸದಸ್ಯರು ನಾಮಿನೇಟ್ ಮಾಡಿದರು. ಆದರೆ ಅದರಿಂದ ರಜತ್ ಸ್ವಲ್ಪವೂ ಬದಲಾಗಿಲ್ಲ. ‘ನಾನು ಇರುವುದೇ ಹೀಗೆ’ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.