ಸೆಲೆಬ್ರಿಟಿಗಳ ಬದುಕು ಎಂದರೆ ತುಂಬ ಮಜವಾಗಿರುತ್ತದೆ ಎಂಬುದು ಜನರ ಕಲ್ಪನೆ. ಆದರೆ ಅವರಿಗೂ ಕೂಡ ಜನಸಾಮಾನ್ಯರ ರೀತಿಯೇ ಅನೇಕ ಕಷ್ಟಗಳು ಇರುತ್ತವೆ. ಅದನ್ನು ಹೇಳಿಕೊಳ್ಳದೇ, ಪ್ರೇಕ್ಷಕರ ಎದುರು ನಗುನಗುತ್ತ ಬಾಳಬೇಕಾದ ಅನಿವಾರ್ಯತೆ ಕಲಾವಿದರದ್ದು. ಕೆಲವೊಮ್ಮೆ ಹೇಳಿಕೊಳ್ಳಲೇಬೇಕಾದ ಸಂದರ್ಭ ಎದುರಾಗುತ್ತವೆ. ನಟ, ನಿರೂಪಕ ನಿರಂಜನ್ ದೇಶಪಾಂಡೆ (Niranjan Deshpande) ಅವರಿಗೆ ಬಿಗ್ ಬಾಸ್ (Bigg Boss) ಮನೆಯಲ್ಲಿ ಆ ರೀತಿಯ ಒಂದು ಸಂದರ್ಭ ಒದಗಿಬಂದಿದೆ. ತಮ್ಮ ಸಹೋದರಿಯ ಬದುಕಿನಲ್ಲಿ ಆದ ಒಂದು ಕಹಿ ಘಟನೆಯನ್ನು ಅವರು ವಿವರಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 8’ ಮುಗಿದ ಬಳಿಕ ‘ಬಿಗ್ ಬಾಸ್ ಮಿನಿ ಸೀಸನ್’ ಆರಂಭ ಆಯಿತು. ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ಮತ್ತು ನಿರೂಪಕರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಟಾಸ್ಕ್ಗಳ ಜೊತೆಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತ ಅವರೆಲ್ಲ ಕಾಲ ಕಳೆಯುತ್ತಿದ್ದಾರೆ. ನಿರಂಜನ್ ಕೂಡ ಲವಲವಿಕೆಯಿಂದಲೇ ಭಾಗವಹಿಸುತ್ತಿದ್ದಾರೆ. ಎಲ್ಲರನ್ನೂ ನಗಿಸುವುದು ನಿರಂಜನ್ ಸ್ವಭಾವ. ಆದರೆ ಇತ್ತೀಚೆಗಿನ ಎಪಿಸೋಡ್ನಲ್ಲಿ ಅವರು ಕಣ್ಣೀರು ಹಾಕಿದ್ದಾರೆ.
ಆ.22ರಂದು ರಕ್ಷಾ ಬಂಧನ ಹಬ್ಬ. ಆ ಪ್ರಯುಕ್ತ ಬಿಗ್ ಬಾಸ್ ಮನೆಯಲ್ಲಿ ಸಹೋದರಿಯರ ಬಗ್ಗೆ ಮಾತನಾಡಲಾಯಿತು. ನಿರಂಜನ್ ಕೂಡ ತಮ್ಮ ತಂಗಿಯ ಬಗ್ಗೆ ಹೇಳಿಕೊಂಡರು. ‘ಆಕೆ ಒಡಹುಟ್ಟಿದ ತಂಗಿ. ಲೆಕ್ಕ ಪ್ರಕಾರ ಅವಳು ನನಗೆ ಅಕ್ಕ. ನಾವಿಬ್ಬರು ಅವಳಿ-ಜವಳಿ. ಅವಳು ನನಗಿಂತ 13 ನಿಮಿಷ ದೊಡ್ಡವಳು. ಗಂಡ-ಹೆಂಡತಿ ಕೂಡ ಅಷ್ಟು ಕ್ಲೋಸ್ ಆಗಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಎಲ್ಲಿ ಹೋದರೂ ಜೊತೆಯಾಗಿ ಹೋಗುತ್ತಿದ್ವಿ. ನಂತರ ಮದುವೆ ಎಂಬ ಘಟ್ಟ ಬಂತು. ಅವಳ ಮದುವೆ ಬಗ್ಗೆ ನಾನು ದೊಡ್ಡ ಕನಸು ಕಂಡಿದ್ದೆ’ ಎಂದು ನಿರಂಜನ್ ಮಾತು ಆರಂಭಿಸಿದರು.
‘ಅವಳ ಹಳೇ ರಿಲೇಷನ್ಶಿಪ್ನ ಕಾರಣದಿಂದಲೋ ಏನೋ ಅವಳಿಗೆ ಮದುವೆ ಬಗ್ಗೆ ನಂಬಿಕೆಯೇ ಹೊರಟುಹೋಗಿತ್ತು. ಜೀವನದಲ್ಲಿ ಅವಳ ಮದುವೆಯೇ ನನಗೆ ಸವಾಲಾಗಿ ಉಳಿದುಕೊಂಡಿತು. ಮನೆಯ ಹೆಣ್ಣುಮಗಳಿಗೆ ಒಂದು ಮದುವೆ ಮಾಡೋಕೆ ಆಗಲ್ವಾ ಎಂಬ ಮಾತು ಹೋದಲ್ಲೆಲ್ಲ ಬರುತ್ತದೆ’ ಎಂದು ನಿರಂಜನ್ ಕಣ್ಣೀರು ಹಾಕಿದ್ದಾರೆ.
‘ದಯವಿಟ್ಟು ನಾನು ಎಲ್ಲ ಗಂಡಸರಿಗೆ ಕೇಳಿಕೊಳ್ಳುತ್ತೇನೆ. ದಯವಿಟ್ಟು ಯಾವ ಹೆಣ್ಣಿಗೂ ಮೋಸ ಮಾಡಬೇಡಿ. ನಿಮ್ಮ ಮನೆಯಲ್ಲೂ ಒಬ್ಬಳು ಹೆಣ್ಣು ಇರುತ್ತಾಳೆ ಎಂಬುದನ್ನು ನೆನಪಿನಲ್ಲಿಡಿ. ಎಲ್ಲ ಹುಡುಗಿಯರಿಗೂ ಅದನ್ನೇ ಕೇಳಿಕೊಳ್ಳುತ್ತೇನೆ. ಯಾವ ಹುಡುಗರ ಲೈಫ್ನಲ್ಲೂ ಆಟ ಆಡಬೇಡಿ. ನೀವು ಆಟ ಆಡುವುದು ಬರೀ ಅವರ ಜೊತೆ ಅಲ್ಲ. ಅವರ ಇಡೀ ಕುಟುಂಬದ ಜೊತೆ’ ಎಂದು ನಿರಂಜನ್ ಭಾವುಕರಾಗಿದ್ದಾರೆ.
‘ಆಕೆ ನನಗಿಂತ ಹೆಚ್ಚು ನಗುತ್ತಾಳೆ, ನಗಿಸುತ್ತಾಳೆ. ಅಂಥವಳನ್ನು ಆ ಸ್ಥಿತಿಯಲ್ಲಿ ನೋಡೋಕೆ ನನಗೆ ಆಗಲಿಲ್ಲ. ಕಷ್ಟ ಆಗುತ್ತದೆ’ ಎನ್ನುತ್ತಲೇ ನಿರಂಜನ್ ಅವರು ಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಇದನ್ನೂ ಓದಿ:
ಕಸದ ಚೀಲವನ್ನೇ ಕಾಸ್ಟ್ಯೂಮ್ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್ ಬಾಸ್ನಿಂದ ಔಟ್; ನಿಲ್ಲದ ಕಣ್ಣೀರು