
ನಿಶಾ ರವಿಕೃಷ್ಣನ್ (Nisha Ravikrishnan) ಅವರು ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಅವರು ನಟಿಸಿದ ಧಾರಾವಾಹಿ ‘ಗಟ್ಟಿಮೇಳ’ ಯಶಸ್ಸು ಕಂಡಿತು. ನಿಜ ಹೇಳಬೇಕು ಎಂದರೆ ಅವರನ್ನು ಆ ಬಳಿಕ ಎಲ್ಲರೂ ರೌಡಿ ಬೇಬಿ ಎಂದು ಕರೆದರು. ಈಗ ಅವರು ತೆಲುಗು ಧಾರಾವಾಹಿ ಕೂಡ ಮಾಡುತ್ತಿದ್ದಾರೆ. ನಿಶಾ ಹುಟ್ಟಿದ್ದು ಯಾವುದೋ ಆಂಧ್ರ ಗಡಿಯಲ್ಲಿ ಅಲ್ಲ. ಹಾಗಾಗಿದ್ದರೆ ಅವರಿಗೆ ತೆಲುಗು ಸುಲಭದಲ್ಲಿ ಮಾತನಾಡಲು ಬರುತ್ತಿತ್ತು. ಅವರು ಜನಿಸಿದ್ದು, ಸಕಲೇಶಪುರದಲ್ಲಿ. ಅವರು ತೆಲುಗು ಧಾರಾವಾಹಿ ಮಾಡುವಾಗ ಅನುಭವಿಸಿದ ಕಷ್ಟಗಳನ್ನು ಈ ಮೊದಲು ಹೇಳಿಕೊಂಡಿದ್ದರು.
ನಿಶಾ ರವಿಕೃಷ್ಣನ್ ಅವರು ‘ಸರ್ವ ಮಂಗಲ ಮಾಂಗಲ್ಯೆ’ ಧಾರಾವಾಹಿಯಲ್ಲಿ ಮೊದಲು ನಟಿಸಿದರು. ಸ್ಟಾರ್ ಸುವರ್ಣದಲ್ಲಿ ಈ ಧಾರಾವಾಹಿ ಪ್ರಸಾರ ಕಂಡಿತು. 2018-19ರ ಅವಧಿಯಲ್ಲಿ ಧಾರಾವಾಹಿ ಪ್ರಸಾರ ಕಂಡಿತು. 2019-24ರವರೆಗೆ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಂಡರು. ಕನ್ನಡ ಧಾರಾವಾಹಿ ಮಾಡುವಾಗಲೇ ತೆಲುಗು ಕಿರುತೆರೆ ಲೋಕದಿಂದ ಆಫರ್ ಬಂತು. 2021ರಲ್ಲಿ ಅವರು ತೆಲುಗಿನಲ್ಲಿ ‘ಗೀತಾ’ ಹೆಸರಿನ ಧಾರಾವಾಹಿ ಮಾಡಿದರು.
ಈಗ ನಿಶಾ ಅವರು, ‘ಅಮ್ಮಾಯಿಗಾರು’ ಹಾಗೂ ‘ಅಣ್ಣಯ್ಯ’ ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ‘ಅಮ್ಮಾಯಿಗಾರು’ ತೆಲುಗಿನ ಧಾರಾವಾಹಿ. ‘ಅಣ್ಣಯ್ಯ’ ಪಕ್ಕಾ ಹಳ್ಳಿ ಕಥೆಯನ್ನು ಹೊಂದಿದೆ. ಈಗ ನಿಶಾ ಸುಲಭವಾಗಿ ತೆಲುಗು ಮಾತನಾಡ ಬಲ್ಲರು. ಆದರೆ, ಆರಂಭದಲ್ಲಿ ಅವರಿಗೆ ಸಾಕಷ್ಟು ಕಷ್ಟಗಳು ಉಂಟಾದವು. ಈ ಬಗ್ಗೆ ಅವರು ಹೇಳಿಕೊಂಡಿದ್ದರು.
ಸೆಲಬ್ರಿಟಿ ಪಾಡ್ಕಾಸ್ಟ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದರು. ‘ನಂಗೆ ತೆಲುಗು ಬಗ್ಗೆ ಏನು ಎಂದರೆ ಏನೂ ಗೊತ್ತಿರಲಿಲ್ಲ. ತೆಲುಗಿನ ಕೆಲವೇ ಕೆಲವು ಶಬ್ದಗಳು ತಿಳಿದಿದ್ದವು. ಆರಂಭದಲ್ಲಿ ತುಂಬಾ ಕಷ್ಟ ಆಯ್ತು. ಕನ್ನಡ ನಿರರ್ಗಳವಾಗಿ ಮಾತನಾಡಬಲ್ಲೆ. ಇಲ್ಲಿ ನನಗೆ ಹೊಂದಾಣಿಕೆ ಆಗಿತ್ತು’ ಎಂದಿದ್ದಾರೆ ನಿಶಾ.
ಇದನ್ನೂ ಓದಿ: ಹೊಸ ಮನೆ ಕಟ್ಟಿದ ನಿಶಾ ರವಿಕೃಷ್ಣನ್; ಫೋಟೋ ವೈರಲ್
‘ನಾವು ಇಲ್ಲಿ ಲೈವ್ ಶೂಟ್ ಮಾಡುತ್ತೇವೆ. ಹಾಗೆಯೇ ಆಡಿಯೋ ಕ್ಯಾಪ್ಚರ್ ಆಗುತ್ತದೆ. ಅಲ್ಲಿ ಪ್ರಾಂಪ್ಟಿಂಗ್ ಇರುತ್ತಿತ್ತು. ಅದು ನನಗೆ ಹೊಸದು. ಅವರ ಜೊತೆ ನಾವು ಹೇಳಬೇಕು. ಇದು ಕಷ್ಟ ಆಯ್ತು. ಭಾಷೆ ಗೊತ್ತಿಲ್ಲ. ಅವರ ಲಿಪ್ ರೀಡ್ ಮಾಡಿ ಭಾಷೆ ಕಲಿತೆ. ಹೀಗೆ ಭಾಷೆ ಬಂತು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:01 am, Thu, 12 June 25