‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆಗೆ ಉಳಿದಿರೋದು ಇನ್ನು ಎರಡು ವಾರ ಮಾತ್ರ. ಜನವರಿ ಅಂತ್ಯಕ್ಕೆ ಬಿಗ್ ಬಾಸ್ ಫಿನಾಲೆ ನಡೆಯೋ ಸಾಧ್ಯತೆ ಇದೆ. ಈ ವಾರ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಅದುವೇ ‘ಟಿಕೆಟ್ ಟು ಫಿನಾಲೆ’. ಈ ಟಿಕೆಟ್ನ ಪಡೆದಿದ್ದು ಡ್ರೋನ್ ಪ್ರತಾಪ್ ಎಂದು ಸುದ್ದಿ ಆಗಿತ್ತು. ಆದರೆ, ಈ ಆಟಕ್ಕೆ ಬಿಗ್ ಬಾಸ್ (Bigg Boss) ಟ್ವಿಸ್ಟ್ ನೀಡಿದ್ದಾರೆ ಎನ್ನಲಾಗಿದೆ. ಕೊನೆಯಲ್ಲಿ ಈ ಟಿಕೆಟ್ ಸಂಗೀತಾ ಕೈ ಸೇರಿದೆ ಎನ್ನಲಾಗಿದೆ.
ಈ ವಾರ ನಡೆದಿದ್ದು ಎಲ್ಲವೂ ವೈಯಕ್ತಿಕ ಟಾಸ್ಕ್ಗಳೇ. ಪ್ರತಿ ಟಾಸ್ಕ್ನಲ್ಲಿ ನಾಲ್ವರು ಆಡಬೇಕು. ಸರದಿ ಬಂದಾಗ ಪ್ರತಿ ಆಟಗಾರ ತಮ್ಮ ಮೂವರು ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂಟು ಸ್ಪರ್ಧಿಗಳು ಇದ್ದಿದ್ದರಿಂದ ಎಂಟು ರೌಂಡ್ನಲ್ಲಿ ಆಟ ನಡೆಯಲಿದೆ. ಈ ರೀತಿ ಟಾಸ್ಕ್ ಆಡಿ ಕೊನೆಗೆ ಯಾರದ್ದು ಹೆಚ್ಚು ಅಂಕ ಇರುತ್ತದೆಯೋ ಅವರು ಫಿನಾಲೆಯ ಟಿಕೆಟ್ ಪಡೆಯುತ್ತಾರೆ ಎಂದು ಹೇಳಲಾಗಿತ್ತು.
ಇಂದು ಕಲರ್ಸ್ ಕನ್ನಡ ರಿಲೀಸ್ ಮಾಡಿದ ಪ್ರೋಮೋದಲ್ಲಿ ಪ್ರತಾಪ್ ಅವರು ಸಂಗೀತಾನ ಟಾಸ್ಕ್ನಿಂದ ಹೊರಗೆ ಇಟ್ಟಂತೆ ತೋರಿಸಲಾಗಿದೆ. ಸಂಗೀತಾ 260 ಹಾಗೂ ಪ್ರತಾಪ್ 280 ಅಂಕ ಹೊಂದಿದ್ದು ಕಂಡು ಬಂದಿತ್ತು. ಹೀಗಾಗಿ, ಅನೇಕರು ಪ್ರತಾಪ್ ಅವರೇ ಟಿಕೆಟ್ನ ವಿನ್ನರ್ ಎಂದು ಊಹಿಸಿದ್ದರು.
ಅತಿ ಹೆಚ್ಚು ಅಂಕ ಪಡೆದವರಿಗೆ ಬಿಗ್ ಬಾಸ್ ಟಿಕೆಟ್ ನೀಡಿಲ್ಲ. ಎಂಟು ರೌಂಡ್ಸ್ ಬಳಿಕ ಟಾಪ್ ಮೂರರಲ್ಲಿ ಇರುವ ವ್ಯಕ್ತಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಇದು ಕ್ಯಾಪ್ಟನ್ಸಿ ಟಾಸ್ಕ್ ಹಾಗೂ ಟಿಕೆಟ್ ಟು ಫಿನಾಲೆ ಎರಡೂ ಆಗಿತ್ತು. ಇದನ್ನು ಸಂಗೀತಾ ಗೆದ್ದು ಕ್ಯಾಪ್ಟನ್ ಪಟ್ಟ ಹಾಗೂ ಫಿನಾಲೆ ಟಿಕೆಟ್ ಎರಡನ್ನೂ ಪಡೆದಿದ್ದಾರೆ ಎ್ನಲಾಗುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ
ಸಂಗೀತಾ ಶೃಂಗೇರಿ ಈ ಸೀಸನ್ನಲ್ಲಿ ಈವರೆಗೆ ಕ್ಯಾಪ್ಟನ್ ಆಗಿರಲಿಲ್ಲ. ಕಳೆದ ವಾರ ಟಾಸ್ಕ್ ಗೆದ್ದು ಅವರು ಕ್ಯಾಪ್ಟನ್ ಆದರು. ಈ ವಾರವೂ ಕ್ಯಾಪ್ಟನ್ ಆಗಿ ಅವರು ಬೀಗಿದ್ದಾರೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಸಂಗೀತಾಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಈ ವಾರ ಡ್ರೋನ್ ಪ್ರತಾಪ್ ಉತ್ತಮ ಆಟ ಪ್ರದರ್ಶನ ನೀಡಿದರು. ಅವರಿಗೆ ಉತ್ತಮ ಸಿಕ್ಕಿದ್ದು, ತುಕಾಲಿ ಸಂತೋಷ್ ಅವರಿಗೆ ಕಳಪೆ ಸಿಕ್ಕಿದೆ ಎನ್ನಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು. ಸದ್ಯ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತೋಷ್, ನಮ್ರತಾ ಗೌಡ, ವಿನಯ್ ಗೌಡ, ಡ್ರೋನ್ ಪ್ರತಾಪ್, ಸಂಗೀತಾ, ತನಿಷಾ ಹಾಗೂ ಕಾರ್ತಿಕ್ ಆಟ ಆಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ