ಮುದ್ದಿಸುವ, ತಬ್ಬಿಕೊಳ್ಳುವ ದೃಶ್ಯಗಳನ್ನು ಟಿವಿಯಲ್ಲಿ ತೋರಿಸುವಂತಿಲ್ಲ; ಪಾಕಿಸ್ತಾನಿ ಕಿರುತೆರೆಗೆ ಸೆನ್ಸಾರ್ ಬರೆ
ಇಷ್ಟೆಲ್ಲ ಕಠಿಣ ಸೆನ್ಸಾರ್ ನಿಯಮಗಳನ್ನು ಹೇರಿರುವುದರಿಂದ ಪಾಕಿಸ್ತಾನಿ ಕಿರುತೆರೆ ಮಂದಿಗೆ ಕೊಂಚ ಕಷ್ಟ ಆಗುವುದು ಗ್ಯಾರಂಟಿ. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಟಿವಿ ಮತ್ತು ಚಿತ್ರಮಂದಿರಗಳಲ್ಲಿ ಮನಸ್ಸಿಗೆ ಬಂದಿದ್ದನ್ನೆಲ್ಲ ತೋರಿಸುವಂತಿಲ್ಲ. ಸೆನ್ಸಾರ್ ಮಂಡಳಿ ಸದಸ್ಯರು ಪ್ರಮಾಣಪತ್ರ ನೀಡಿದ ಮೇಲೆ, ಪ್ರೇಕ್ಷಕರ ವಯಸ್ಸಿಗೆ ಅನುಗುಣವಾಗಿ ಸಿನಿಮಾವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಹುದು. ಟಿವಿ ಕಾರ್ಯಕ್ರಮವನ್ನು ಮನೆಮಂದಿಯೆಲ್ಲ ಕುಳಿತು ನೋಡುತ್ತಾರೆ. ಆ ಕಾರಣಕ್ಕಾಗಿ ಕಿರುತೆರೆ ಕಾರ್ಯಕ್ರಮಗಳು ಕೂಡ ಸೆನ್ಸಾರ್ನ ನಿಯಮಗಳನ್ನು ಪಾಲಿಸಬೇಕು. ಅದೇನೋ ಸರಿ, ಆದರೆ ಪಾಕಿಸ್ತಾನದ ಟಿವಿ ಚಾನೆಲ್ಗಳಿಗೆ ಕೊಂಚ ಅತಿಯಾಗಿ ಕಡಿವಾಣ ಹಾಕಲಾಗಿದೆ. ಅಲ್ಲಿನ ಕಿರುತೆರೆ ವಾಹಿನಿಗಳು ತಬ್ಬಿಕೊಳ್ಳುವ, ಮುದ್ದಿಸುವ ದೃಶ್ಯಗಳನ್ನೂ ಕೂಡ ಪ್ರಸಾರ ಮಾಡುವಂತಿಲ್ಲ ಎಂದು ನಿಯಮ ಹೇರಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಕೂಡ ಹೊರಡಿಸಲಾಗಿದೆ. ಅದರ ಪ್ರಕಾರವಾಗಿ ಎಲ್ಲ ಟಿವಿ ವಾಹಿನಿಗಳು ನಡೆದುಕೊಳ್ಳಬೇಕಿದೆ.
ಪಾಕಿಸ್ತಾನದ ‘ದೃಶ್ಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರ’ ಈ ರೀತಿ ನಿಯಮ ಹೊರಡಿಸಿದೆ. ಅಲ್ಲಿನ ಟಿವಿಯಲ್ಲಿ ಪ್ರಸಾರ ಆಗುವ ಕೆಲವು ದೃಶ್ಯಗಳು ಇಸ್ಲಾಮಿಕ್ ಭೋದನೆಗಳಿಗೆ ಮತ್ತು ಪಾಕಿಸ್ತಾನಿ ಸಮಾಜಕ್ಕೆ ವಿರುದ್ಧವಾಗಿವೆ ಎಂದು ಈ ಸಂಸ್ಥೆ ಅಭಿಪ್ರಾಯಪಟ್ಟಿದೆ. ಯಾವುದೇ ಮನರಂಜನಾ ಕಾರ್ಯಕ್ರಮದಲ್ಲಿ ಕಲಾವಿದರು ಪರಸ್ಪರ ಮುದ್ದಿಸುವ ತಬ್ಬಿಕೊಳ್ಳುವ, ಚುಂಬಿಸುವ ದೃಶ್ಯಗಳನ್ನು ಪ್ರಸಾರ ಮಾಡುವಂತಿಲ್ಲ. ದಂಪತಿಗಳ ಬೆಡ್ ರೂಮ್ ದೃಶ್ಯಗಳಿಗೂ ಕತ್ತರಿ ಹಾಕಬೇಕು ಎಂದು ಆದೇಶಿಸಲಾಗಿದೆ.
ಅಷ್ಟೇ ಅಲ್ಲದೇ, ಕಲಾವಿದರು ಬೋಲ್ಡ್ ಆದಂತಹ ಬಟ್ಟೆಗಳನ್ನು ಕೂಡ ಧರಿಸುವಂತಿಲ್ಲ. ಆಕ್ಷೇಪಾರ್ಹ ಹಾವ-ಭಾವವನ್ನು ಪ್ರದರ್ಶಿಸುವಂತಿಲ್ಲ. ವಿವಾದಾತ್ಮಕ ಕಥೆಯನ್ನು ಹೊಂದಿರುವಂತಿಲ್ಲ. ಅಂಥ ಕಥಾವಸ್ತುವಿನಿಂದ ಸಮಾಜದ ಸಭ್ಯತೆಗೆ ಧಕ್ಕೆ ಆಗುತ್ತದೆ. ಟಿವಿ ಚಾನೆಲ್ಗಳು ಇಂಥ ದೃಶ್ಯಗಳನ್ನು ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ‘ದೃಶ್ಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರ’ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಇಷ್ಟೆಲ್ಲ ಕಠಿಣ ನಿಯಮಗಳನ್ನು ಹೇರಿರುವುದರಿಂದ ಪಾಕಿಸ್ತಾನಿ ಕಿರುತೆರೆ ಮಂದಿಗೆ ಕೊಂಚ ಕಷ್ಟ ಆಗುವುದು ಗ್ಯಾರಂಟಿ. ಸೆನ್ಸಾರ್ ನಿಯಮಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ, ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಗೆ ಬದಲಾಗುತ್ತವೆ. ಅಲ್ಲದೇ, ಆಯಾ ಸನ್ನಿವೇಶಗಳ ಆಧಾರದ ಮೇಲೆಯೂ ನಿಯಮಗಳಲ್ಲಿ ವ್ಯತ್ಯಾಸ ಇರುತ್ತದೆ. ಪಾಕಿಸ್ತಾನದಲ್ಲಿ ಈ ರೀತಿ ಕಠಿಣ ನಿಯಮಗಳನ್ನು ಹೇರಲಾಗಿದೆ.
ಸದ್ಯ ಪಾಕಿಸ್ತಾನದ ಕಿರುತೆರೆ ಕಾರ್ಯಕ್ರಮಗಳ ಮೇಲೆ ಹೇರಿರುವ ಈ ನಿಯಮಗಳ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಒಂದೆಡೆ ಓಟಿಟಿ ಪ್ಲಾಟ್ಫಾರ್ಮ್ಗಳು ಯಾವುದೇ ಸೆನ್ಸಾರ್ನ ಹಂಗಿಲ್ಲದೇ ಮೆರೆಯುತ್ತಿವೆ. ಅವುಗಳಿಗೆ ಕಡಿವಾಣ ಹಾಕಬೇಕು ಎಂಬ ಕೂಗು ಭಾರತದಲ್ಲೂ ಜೋರಾಗಿದೆ.
ಇದನ್ನೂ ಓದಿ:
ಸೆನ್ಸಾರ್ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್ ನೀಡಿದ ಸನ್ನಿ ಲಿಯೋನ್; ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್
ಮಿತಿ ಮೀರಿತಾ ಮಾದಕತೆ? ನಟಿ ನೋರಾ ಫತೇಹಿ ಡ್ರೆಸ್ ನೋಡಿ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು