ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಅಭಿಮಾನಿ ಬಳಗದ ಜತೆಗೆ ದೊಡ್ಡ ಶಿಷ್ಯವರ್ಗವನ್ನೂ ಹೊಂದಿದ್ದಾರೆ. ನೇರವಾಗಿ ಹಾಗೂ ಪರೋಕ್ಷವಾಗಿ ಸಾಕಷ್ಟು ಮಂದಿ ಅವರಿಂದ ಹಲವು ವಿಚಾರಗಳನ್ನು ಕಲಿತಿದ್ದಾರೆ. ಈ ಕಾರಣಕ್ಕೆ ಎಸ್ಪಿಬಿ ಎಂದರೆ ಎಲ್ಲರಿಗೂ ಅಪಾರ ಗೌರವ. ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್ ಮತ್ತೆ ಆರಂಭಿಸಲಾಗಿದೆ. ಈ ವೇದಿಕೆ ಸಾಕಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ.
‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಎರಡನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ಪ್ರತಿಭೆಗಳಿಗೆ ಇದು ವೇದಿಕೆ ಆಗಿದೆ. ಇದರ ಜತೆಗೆ ಎಸ್ಪಿಬಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಕೂಡ ಆಗುತ್ತಿದೆ. ಜಡ್ಜ್ಗಳು ಎಸ್ಪಿಬಿ ಅವರನ್ನು ನೆನೆನೆನೆದು ಕಣ್ಣೀರು ಹಾಕುತ್ತಿದ್ದಾರೆ. ಈಗ ರಾಜೇಶ್ ಕೃಷ್ಣನ್ ಕೂಡ ಭಾವುಕರಾಗಿದ್ದಾರೆ.
ಎಸ್ಪಿಬಿ ಕಂಡರೆ ರಾಜೇಶ್ ಕೃಷ್ಣನ್ ಅವರಿಗೆ ಅಪಾರ ಗೌರವ. ಈಗ ಅವರಿಗೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಜಡ್ಜ್ ಆಗುವ ಸದಾವಕಾಶ ಸಿಕ್ಕಿದೆ. ಇದಕ್ಕೆ ಅವರು ಸಾಕಷ್ಟು ಖುಷಿಯಾಗಿದ್ದಾರೆ. ‘ನಿಮಗಿದೆ ಮರುಜನ್ಮ.. ಜನಿಸಿರಿ ದಯಮಾಡಿ.. ಕಾಯುತಿದೆ ಕರುನಾಡು..’ ಎನ್ನುವ ಸಾಲುಗಳನ್ನು ಹೇಳುತ್ತಿದ್ದಂತೆ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಅವರು ವೇದಿಕೆ ಮೇಲೆಯೇ ಗಳಗಳನೆ ಅತ್ತಿದ್ದಾರೆ.
ಇಂದು (ಆಗಸ್ಟ್ 21) ರಾತ್ರಿ 9 ಗಂಟೆಗೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಪ್ರಸಾರವಾಗಲಿದೆ. ಹೊಸ ಸೀಸನ್ನಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ, ರಘು ದೀಕ್ಷಿತ್ ಹಾಗೂ ಎಸ್ಪಿಬಿ ಮಗ ಚರಣ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಈಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಅದರ ಮುಂದುವರಿದ ಭಾಗ ಇದಾಗಿದೆ. ಇತ್ತೀಚೆಗೆ ಚರಣ್ ಅವರು ವೇದಿಕೆ ಮೇಲೆ ಮಾತನಾಡಿದ್ದರು. ‘ಎಲ್ಲೆಲ್ಲಿ ಸಂಗೀತ ಇರುತ್ತದೆಯೋ ಅಲ್ಲಿ ನಮ್ಮ ತಂದೆ ಇರುತ್ತಾರೆ. ಅವರೆಲ್ಲಿ ಇರುತ್ತಾರೋ ನಾನು ಅಲ್ಲಿರ್ತೀನಿ’ ಎಂದಿದ್ದರು.
ಇದನ್ನೂ ಓದಿ: ಎSPB Birth Anniversary: ಪ್ರೀತಿಯ ಎಸ್ಪಿಬಿ ಸರ್, ಎದೆ ತುಂಬಿ ಹಾಡಲು ನೀವು ಮತ್ತೆ ಹುಟ್ಟಿಬರಬೇಕು
‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಸ್ಪಿಬಿ ಧ್ವನಿ; ಭಾವುಕರಾದ ಪುತ್ರ ಚರಣ್