
ರಾಜೇಶ್ ಕೃಷ್ಣನ್ (Rajesh Krishnan) ಅವರು ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಅವರು ಹಲವು ರಿಯಾಲಿಟಿ ಶೋಗಳಿಗೆ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದರು. ಆದರೆ, ‘ಸರಿಗಮಪ’ ಅವರ ಫೇವರಿಟ್ ಶೋ ಎನಿಸಿಕೊಂಡಿದೆ. ಈ ವೇದಿಕೆ ಮೇಲೆ ಅವರು ಈ ಬಾರಿ ತಾಯಿ ಮೀರಾ ಕೃಷ್ಣನ್ ಅವರನ್ನು ಕರೆದುಕೊಂಡು ಬಂದಿದ್ದರು. ಅವರ ತಾಯಿಯ ಧ್ವನಿಯಲ್ಲಿ ಹಾಡು ಕೇಳಿ ಎಲ್ಲರೂ ಕಳೆದುಹೋಗಿದ್ದಾರೆ. ಈ ವಯಸ್ಸಿನಲ್ಲೂ ಅಷ್ಟು ಅದ್ಭುತವಾಗಿ ಹಾಡು ಹೇಳಿದರು ಮೀರಾ ಕೃಷ್ಣನ್.
ರಾಜೇಶ್ ಕೃಷ್ಣನ್ ಹಾಗೂ ಮೀರಾ ಕೃಷ್ಣನ್ ವೇದಿಕೆ ಮೇಲೆ ಇದ್ದರು. ವಿಜಯ್ ಪ್ರಕಾಶ್ ಅವರು ಕುಳಿತಲ್ಲೇ ಒಂದು ಮನವಿ ಮಾಡಿಕೊಂಡರು. ‘ಯಾವುದಾದರೂ ಒಂದು ಹಾಡಿನ ಲೈನ್ ಹೇಳಿ’ ಎಂದು ಕೇಳಿದರು. ‘ಪೂರ್ತಿ ಹಾಡ್ತೀನಿ’ ಎಂದು ಹೇಳಿದ ಮೀರಾ ಅವರು, ‘ಕಂಡೇ ನಾ ಗೋವಿಂದನಾ..’ ಹಾಡನ್ನು ಶಾಸ್ತ್ರೀಯ ಬದ್ಧವಾಗಿ ಹಾಡಿ ಮುಗಿಸಿದ್ದಾರೆ. ಇದನ್ನು ಕೇಳಿ ಅನೇಕರು ಕಳೆದುಹೋಗಿದ್ದಾರೆ. ರಾಜೇಶ್ ಅವರಿಗೆ ಇಷ್ಟೊಂದು ಸುಮಧುರ ಧ್ವನಿ ತಾಯಿಯಿಂದಲೇ ಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಮೀರಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ಆಗಿದ್ದಾರೆ. ಆಲ್ ಇಂಡಿಯಾ ರೇಡಿಯೋ ಆರ್ಟಿಸ್ಟ್ ಕೂಡ ಹೌದು. ಕರ್ನಾಟಕದ ಹಲವಾರು ಕಡೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅವರೇ ರಾಜೇಶ್ ಕೃಷ್ಣನ್ ಅವರಿಗೆ ಮೊದಲ ಗುರು. ಅಮ್ಮ ಹಾಡುವಾಗ ರಾಜೇಶ್ ಅವರು ತಂಬೂರಿ ನುಡಿಸುತ್ತಿದ್ದರು. ಅಮ್ಮನ ಹಾಡು ರಾಜೇಶ್ ಮೇಲೆ ಸಾಕಷ್ಟು ಪರಿಣಾಮ ಬೀರಿತು.
ಇದನ್ನೂ ಓದಿ: ರಾಜೇಶ್ ಕೃಷ್ಣನ್ ಬಗ್ಗೆ ಎಸ್ಪಿಬಿಗೆ ಇತ್ತು ವಿಶೇಷ ಹೆಮ್ಮೆ
ಮೀರಾ ವಿವಾಹ ಆಗಿ 12 ವರ್ಷಗಳ ಬಳಿಕ ರಾಜೇಶ್ ಕೃಷ್ಣನ್ ಹುಟ್ಟಿದರು. ಹೆಣ್ಣು ಹುಟ್ಟಿದ್ದರೆ ರಾಜೇಶ್ವರಿ ಎಂದು ಹೆಸರು ಇಡಲು ಅವರು ಬಯಸಿದ್ದರು. ಆದರೆ, ಹುಡುಗ ಹುಟ್ಟಿದ್ದರಿಂದ ರಾಜೇಶ್ ಎಂದು ಹೆಸರು ಇಟ್ಟರು. ರಾಜೇಶ್ ಕೃಷ್ಣನ್ ಅವರು ಎಸ್ಪಿಬಿ ಅವರ ದೊಡ್ಡ ಅಭಿಮಾನಿಗಳು. ಎಸ್ಪಿಬಿಯನ್ನು ಆರಾಧಿಸುತ್ತಾರೆ. ಅವರು ವೇದಿಕೆ ಮೇಲೆ ತಾಯಿಯನ್ನು ಕಂಡು ಈಗ ಭಾವುಕರಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.