ತೆಲುಗು ಬಿಗ್ ಬಾಸ್ ಸೀಸನ್ 5ರ ಟಿಆರ್ಪಿ ಕುಸಿದಿದೆ. ಪರಿಚಯದ ಮುಖಗಳು ಇಲ್ಲ ಅನ್ನೋದು ಇದಕ್ಕೆ ಪ್ರಮುಖ ಕಾರಣ. ತೀವ್ರವಾಗಿ ಕುಸಿದ ಬಿಗ್ ಬಾಸ್ ಟಿಆರ್ಪಿ ಹೆಚ್ಚಿಸೋಕೆ ವಾಹಿನಿ ನಾನಾ ಕಸರತ್ತು ನಡೆಸುತ್ತಿದೆ. ಈಗ ವಾಹಿನಿಯವರು ತೆಲುಗಿನ ಸ್ಟಾರ್ ನಟನ ಮೊರೆ ಹೋಗಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಹಾಗಾದರೆ, ನಿರೂಪಕ ಅಕ್ಕಿನೇನಿ ನಾಗಾರ್ಜುನ ಕಥೆ ಏನು ಎನ್ನುವ ಪ್ರಶ್ನೆ ಕೂಡ ಮೂಡಿದೆ.
‘ತೆಲುಗು ಬಿಗ್ ಬಾಸ್ ಸೀಸನ್ 5’ ಆರಂಭವಾಗಿ ಕೆಲ ದಿನಗಳು ಕಳೆದಿವೆ. ಈ ಶೋನ ಟಿಆರ್ಪಿ ಎಷ್ಟಿರಬಹುದು ಎನ್ನುವ ಕುತೂಹಲ ಅನೇಕರಲ್ಲಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಶೋ 15.70 ಟಿಆರ್ಪಿ ಪಡೆದುಕೊಂಡಿದೆ. ಉಳಿದ ಧಾರಾವಾಹಿ ಹಾಗೂ ಶೋಗಳಿಗೆ ಹೋಲಿಕೆ ಮಾಡಿದರೆ ಬಿಗ್ ಬಾಸ್ ಟಿಆರ್ಪಿ ಮುಂಚೂಣಿಯಲ್ಲಿದೆ. ಆದರೆ, ಶೋಗೆ ಆಗುತ್ತಿರುವ ವೆಚ್ಚಕ್ಕೆ ಹೋಲಿಕೆ ಮಾಡಿದರೆ ಬಿಗ್ ಬಾಸ್ ಟಿಆರ್ಪಿ ಅಂದುಕೊಂಡ ಗುರಿತಲುಪಿಲ್ಲ. ಇದಕ್ಕೆ ವಾಹಿನಿ ಹೊಸ ಪ್ಲ್ಯಾನ್ ಒಂದನ್ನು ರೂಪಿಸಿದೆ.
ಟಾಲಿವುಡ್ನ ಖ್ಯಾತ ನಟ ರಾಮ್ ಚರಣ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಂತ ನಾಗಾರ್ಜುನ ಬದಲಿಗೆ ಇವರು ಬಿಗ್ ಬಾಸ್ ನಿರೂಪಣೆ ಮಾಡುತ್ತಿಲ್ಲ. ರಾಮ್ ಚರಣ್ ಬಿಗ್ ಬಾಸ್ ಮನೆ ಒಳಗೆ ತೆರಳಲಿದ್ದಾರೆ. ಅಲ್ಲಿ ಸ್ಪರ್ಧಿಗಳ ಜತೆ ಕೆಲ ಸಮಯ ಸಂವಾದ ನಡೆಸಲಿದ್ದಾರೆ.
ರಾಮ್ ಚರಣ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರದ್ದು. ಒಂದೊಮ್ಮೆ ಬಿಗ್ ಬಾಸ್ ಮನೆ ಒಳಗೆ ಅವರು ತೆರಳಿದರೆ ಬಿಗ್ ಬಾಸ್ ನೋಡುಗರ ಸಂಖ್ಯೆ ಹೆಚ್ಚಲಿದೆ. ಈ ಮೂಲಕ ಜನರನ್ನು ಹೆಚ್ಚು ಸೆಳೆಯುವ ಆಲೋಚನೆಯಲ್ಲಿ ವಾಹಿನಿ ಇದೆ.
ಈ ಬಾರಿ 19 ಸ್ಪರ್ಧಿಗಳು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ವ್ಯಕ್ತಿಗಳಿಗೂ ಈ ಬಾರಿ ತೆಲುಗು ಬಿಗ್ ಬಾಸ್ ಚಾನ್ಸ್ ನೀಡಿದೆ. ಆದರೆ, ಇವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಗೊತ್ತಿರುವವರು. ಉಳಿದವರೆಲ್ಲ ಹೊಸ ಮುಖಗಳೇ. ಇದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ.
ಇದನ್ನೂ ಓದಿ: ಆನ್ಲೈನ್ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡ ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ
ಬಿಗ್ ಬಾಸ್ ಟಿಆರ್ಪಿಯಲ್ಲಿ ತೀವ್ರ ಕುಸಿತ; ಅರ್ಧಕ್ಕೆ ನಿಲ್ಲಲಿದೆ ಶೋ?
Published On - 6:57 pm, Sat, 18 September 21