ನಟ ರಮೇಶ್ ಅರವಿಂದ್ (Ramesh Arvind) ಅವರಿಗೆ ಕಿರುತೆರೆ ಹೊಸದೇನೂ ಅಲ್ಲ. ಬಹಳ ಎಳವೆಯಲ್ಲೇ ದೂರದರ್ಶನಕ್ಕಾಗಿ ಶೋ ಒಂದನ್ನು ನಿರೂಪಣೆ ಮಾಡಿದ್ದರು ರಮೇಶ್. ಆ ಬಳಿಕ ಪ್ರೀತಿಯಿಂದ ರಮೇಶ್, ರಾಜಾ-ರಾಣಿ ರಮೇಶ್, ವೀಕೆಂಡ್ ವಿತ್ ರಮೇಶ್ ಹೀಗೆ ಹಲವು ಜನಪ್ರಿಯ ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಮಾತ್ರವಲ್ಲ ಕೆಲವು ಧಾರಾವಾಹಿಗಳನ್ನು ನಿರ್ಮಾಣ ಸಹ ಮಾಡಿದ್ದಾರೆ ನಟ ರಮೇಶ್ ಅರವಿಂದ್. ಇದೀಗ ಮತ್ತೊಂದು ಹೊಸ ಧಾರಾವಾಹಿಯನ್ನು ತೆರೆಗೆ ತರುತ್ತಿದ್ದಾರೆ.
ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗಲಿರುವ ನೀನಾದೆ ನಾ ಹೆಸರಿನ ಧಾರಾವಾಹಿಯನ್ನು ನಟ ರಮೇಶ್ ಅರವಿಂದ್ ನಿರ್ಮಾಣ ಮಾಡಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಟಿವಿಯಲ್ಲಿ ಪ್ರಸಾರವಾಗಲಿದೆ. ಯುವ ನಟ-ನಟಿಯನ್ನು ಒಳಗೊಂಡಿರುವ ಕೌಟುಂಬಿಕ ಪ್ರೇಮಕತೆಯನ್ನು ಈ ಧಾರಾವಾಹಿ ಒಳಗೊಂಡಿದೆ. ಕೆಲವು ಅನುಭವಿ ಹಾಗೂ ಹೊಸ ನಟರು ಈ ಧಾರಾವಾಹಿಯ ಭಾಗವಾಗಿದ್ದಾರೆ.
ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಬಂದಿರುವ ನಾಯಕಿ ವೇದಾಗೆ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳಲ್ಲಿ ಬಹಳ ಆಸಕ್ತಿ ಮತ್ತು ನಂಬಿಕೆ. ಅಜ್ಜಿಯ ಪ್ರೀತಿಯ ಮೊಮ್ಮಗಳು ವೇದಾ ನೇರ ನಡೆಯ ವ್ಯಕ್ತಿತ್ವದಾಕೆ. ವೇದಾಗೆ ಮನೆಯವರ ಸಮ್ಮುಖದಲ್ಲಿ, ಹುಟ್ಟಿ ಬೆಳೆದ ಊರಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಅಸೆ. ಆದರೆ ವಿಧಿ ಬೇರೆಯದ್ದನ್ನೇ ವೇದಾ ಹಣೆಯಲ್ಲಿ ಬರೆದಿದೆ.
ಇನ್ನು ಕಥಾ ನಾಯಕ ವಿಕ್ರಮ್. ಗುಂಡಾಗಿರಿ ಮಾಡಿಕೊಂಡಿರುವ ಗಂಡು. ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಮಾಡೋದಷ್ಟೆ ಇವನಿಗೆ ಗೊತ್ತು. ಆಚಾರ-ವಿಚಾರ ಸಂಸ್ಕಾರ ಇವುಗಳ ಬಗ್ಗೆ ತುಸುವೂ ಕಾಳಜಿ ಇಲ್ಲ. ಕುಟುಂಬದ ಬಗ್ಗೆ ಅಷ್ಟೇನೂ ಕಾಳಜಿ ಇಲ್ಲದ ಇವನಿಗೆ ಅವನ ಅಪ್ಪನ ಮೇಲೆ ವಿಪರೀತವಾದ ಕೋಪ. ಅಚಾನಕ್ ಆಗಿ ಒಂದು ದಿನ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್- ವೇದಾಳಿಗೆ ತಾಳಿ ಕಟ್ಟುತ್ತಾನೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ವೇದ ರೌಡಿಯಂತಿರುವ ವಿಕ್ರಮ್ ನನ್ನು ಗಂಡ ಎಂದು ಒಪ್ಪಿಕೊಳ್ತಾಳ ? ವಿದ್ಯಾವಂತಳಾಗಿರುವ ವೇದಾ, ರೌಡಿ ವಿಕ್ರಂ ಹೇಗೆ ಒಟ್ಟಿಗೆ ಬಾಳುತ್ತಾರೆ? ವಿರುದ್ಧ ಮನಸುಗಳು ಹೇಗೆ ಒಂದಾಗುತ್ತೆಯೇ? ಎಂಬುದೇ “ನೀನಾದೆ ನಾ” ಧಾರಾವಾಹಿಯ ಕಥಾ ಹಂದರ.
ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿಸಿದ್ದ ಖುಷಿ ಈ ಧಾರಾವಾಹಿಯ ನಾಯಕಿ. ಜೀ ಕನ್ನಡ ವಾಹಿನಿಯ ವಿದ್ಯಾ ವಿನಾಯಕ, ಉದಯ ವಾಹಿನಿಯ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸಿದ್ದ ದಿಲೀಪ್ ಶೆಟ್ಟಿ ನಾಯಕ. ಈ ಧಾರಾವಾಹಿಯನ್ನು ರಮೇಶ್ ಅರವಿಂದ್ ನಿರ್ಮಾಣ ಮಾಡಿದ್ದು, ಇದೇ ಮೊದಲ ಬಾರಿಗೆ ರಮೇಶ್ ಅರವಿಂದ್ ನಿರ್ಮಾಣದ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ರಮೇಶ್ ಅರವಿಂದ್ ಈ ಹಿಂದೆ ಸುಂದರಿ ಹೆಸರಿನ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ ಮಾತ್ರವಲ್ಲದೆ ತಮಿಳಿನಲ್ಲಿ ನಂದಿನಿ ಹೆಸರಿನ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ.
ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿರುವ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ ಪ್ರಸಾರವಾಗುತ್ತಿದೆ. ರಮೇಶ್ ನಿರ್ಮಾಣದ ಹೊಸ ಧಾರಾವಾಹಿ ನೀನಾದೆ ನಾ ಮೇ 16 ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ