
ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ನಿರ್ಮಾಣದ, 2025ರ ಸೂಪರ್ ಹಿಟ್ ಸಿನಿಮಾ ‘ಧುರಂಧರ್’ (Dhurandhar) ಈಗ ಕಿರುತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವು ಮೇ 30ರ ಶನಿವಾರ ಸಂಜೆ 7 ಗಂಟೆಗೆ ಮೂರು ವಾಹಿನಿಗಳಲ್ಲಿ ಏಕಕಾಲಕ್ಕೆ ಪ್ರಸಾರ ಆಗಲಿದೆ. ಸ್ಟಾರ್ ಗೋಲ್ಡ್, ಸ್ಟಾರ್ ಗೋಲ್ಡ್ 2 ಮತ್ತು ಕಲರ್ಸ್ ಸಿನೆಪ್ಲೆಕ್ಸ್ ವಾಹಿನಿಗಳಲ್ಲಿ ಒಟ್ಟಿಗೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ (Dhurandhar World Television Premiere) ಆಗಲಿದೆ. ಈ ಸಿನಿಮಾದಿಂದ ರಣವೀರ್ ಸಿಂಗ್ (Ranveer Singh) ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಕಿರುತೆರೆಯಲ್ಲಿ ‘ಧುರಂಧರ್’ ಸಿನಿಮಾ ನೋಡಲು ಕಾದಿದ್ದ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್.
ಖ್ಯಾತ ನಿರ್ದೇಶಕ ಆದಿತ್ಯ ಧರ್ ಆ್ಯಕ್ಷನ್-ಕಟ್ ಹೇಳಿರುವ ‘ಧುರಂಧರ್’ ಸಿನಿಮಾವು ಹಮ್ಜಾ ಅಲಿ ಮಜಾರಿ ಎಂಬ ಭಾರತೀಯ ಅಂಡರ್‌ಕವರ್ ಏಜೆಂಟ್‌ನ ಕಥೆಯನ್ನು ಒಳಗೊಂಡಿದೆ. ದಶಕಗಳ ಕಾಲದ ಸುದೀರ್ಘ ಗುಪ್ತಚರ ಕಾರ್ಯಾಚರಣೆಯ ಭಾಗವಾಗಿ ಆತ ಕರಾಚಿಯ ಅಪರಾಧ ಮತ್ತು ರಾಜಕೀಯ ಜಗತ್ತನ್ನು ಹೇಗೆ ಭೇದಿಸುತ್ತಾನೆ ಎಂಬ ರೋಚಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
‘ಧುರಂಧರ್’ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇವರೊಂದಿಗೆ ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಮ್ಪಾಲ್, ಆರ್. ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ.
ಚಿತ್ರದ ಟಿವಿ ಪ್ರೀಮಿಯರ್ ಕುರಿತು ಮಾತನಾಡಿರುವ ನಿರ್ದೇಶಕ ಆದಿತ್ಯ ಧರ್, ‘ಈ ಚಿತ್ರಕ್ಕೆ ಪ್ರೇಕ್ಷಕರು ನೀಡಿದ ಅಪಾರ ಪ್ರೀತಿ ಮತ್ತು ಈ ಫ್ರಾಂಚೈಸಿಗೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ನಾವು ನಿಜವಾಗಿಯೂ ಧನ್ಯರಾಗಿದ್ದೇವೆ. ಈಗ ಮೇ 30ರಂದು ಸಂಜೆ 7 ಗಂಟೆಗೆ ಸ್ಟಾರ್ ಗೋಲ್ಡ್, ಸ್ಟಾರ್ ಗೋಲ್ಡ್ 2 ಮತ್ತು ಕಲರ್ಸ್ ಸಿನೆಪ್ಲೆಕ್ಸ್ ಮೂಲಕ ಈ ಚಿತ್ರವನ್ನು ದೇಶಾದ್ಯಂತದ ಮನೆ ಮನೆಗೆ ತಲುಪಿಸುತ್ತಿರುವುದು ನಮಗೆ ಅತ್ಯಂತ ಸಂತಸ ತಂದಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿತ್ರರಂಗದಿಂದ ರಣವೀರ್ ಸಿಂಗ್ ಬ್ಯಾನ್; ಸಿನಿಮಾ ನೌಕರರ ಒಕ್ಕೂಟದಿಂದ ಕಠಿಣ ನಿರ್ಧಾರ
ಈ ಬಗ್ಗೆ ಜಿಯೋಸ್ಟಾರ್ ವಕ್ತಾರರು ಮಾತನಾಡಿ, ‘ಕೆಲವು ಸಿನಿಮಾಗಳು ಕೇವಲ ಮನರಂಜನೆಯನ್ನು ಮೀರಿ ಸಾಂಸ್ಕೃತಿಕ ವಿದ್ಯಮಾನಗಳಾಗಿ ಬದಲಾಗುತ್ತವೆ. ಅಂತಹವುಗಳಲ್ಲಿ ಧುರಂಧರ್ ಕೂಡ ಒಂದು. ಈ ಚಿತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡುವ ಮೂಲಕ, ನಾವು ಇಡೀ ದೇಶದ ಕುಟುಂಬಗಳು ಒಟ್ಟಿಗೆ ಕುಳಿತು ವೀಕ್ಷಿಸುವಂತಹ ಒಂದು ದೇಶವ್ಯಾಪಿ ಸುವರ್ಣಾವಕಾಶವನ್ನು ಸೃಷ್ಟಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.